ಬೀದರ್, ಕಲಬುರಗಿಯಲ್ಲಿ 7,200 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ; ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಕಲಬುರಗಿಯಲ್ಲಿ ಇಂದು ಹಲವು ವರ್ಷಗಳ ಬಳಿಕ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಮತ್ತು ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಬೀದರ್, ಕಲಬುರಗಿಯಲ್ಲಿ 7,200 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ; ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಸಿಎಂ ಸಿದ್ದರಾಮಯ್ಯ
Follow us
ಪ್ರಸನ್ನ ಗಾಂವ್ಕರ್​
| Updated By: ಸುಷ್ಮಾ ಚಕ್ರೆ

Updated on:Sep 17, 2024 | 7:52 PM

ಕಲಬುರಗಿ: ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸಂಪುಟ ಸಭೆಯಲ್ಲಿ ಕೈಗೊಂಡು ತೀರ್ಮಾನಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಈ ವರ್ಷ 5 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ. ಕೃಷಿ ಇಲಾಖೆಗೆ 100 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಬಜೆಟ್​ನಲ್ಲಿ ಘೋಷಿಸಿದ್ದ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಯೋಜನೆಗಳಿಗೆ ಅನುಮೋದನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳನ್ನು ಚರ್ಚಿಸಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ 46 ವಿಚಾರಗಳನ್ನು ಚರ್ಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಒಟ್ಟು ಮೊತ್ತ 11,770 ಕೋಟಿ ರೂ. ಬೀದರ್, ರಾಯಚೂರು ನಗರ ಪಾಲಿಕೆ ಮಾಡಲು ತೀರ್ಮಾನಿಸಲಾಗಿದೆ. ಬೀದರ್ ಮತ್ತು ಕಲಬುರಗಿಯಲ್ಲಿ ಕುಡಿಯುವ ನೀರು ಯೋಜನೆ ಮಾಡಲಾಗುವುದು. 7,200 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ನಾರಾಯಣಪುರ ಡ್ಯಾಂನಿಂದ ನೀರು ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯ ಬಗ್ಗೆ ಕೇಂದ್ರಕ್ಕೂ ಮಾಹಿತಿ ನೀಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಸಚಿವರು ಹಾಗೂ ಹೈದರಾಬಾದ್ ಕರ್ನಾಟಕದ ಭಾಗದ ಶಾಸಕರು ಕಲಬುರಗಿಯಲ್ಲೇ ಸಂಪುಟ ಸಭೆ ನಡೆಸಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ ಕಲಬುರಗಿಯಲ್ಲೇ ಸಂಪುಟ ಸಭೆ ಮಾಡೋಣ ಎಂದಿದ್ದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 371ಜೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸಂವಿಧಾನದಲ್ಲಿ ಸೇರ್ಪಡೆಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಪತಿ ಕೊಲೆ ಕೇಸ್​ ತನಿಖೆ ಬಗ್ಗೆ ಸಿಎಂಗೆ ಮನವಿ ಮಾಡಿದ ಪತ್ನಿ: ಪರಿಶೀಲಿಸುವಂತೆ ಎಸ್ಪಿಗೆ ಸಿದ್ದರಾಮಯ್ಯ ಸೂಚನೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಟ್ಟ 11,770 ಕೋಟಿಯಲ್ಲಿ ಕೃಷಿಗೆ 100 ಕೋಟಿ ರೂ., ಕೈಗಾರಿಕೆಗೆ 1550 ಕೋಟಿ ರೂ., ಅರಣ್ಯ ಇಲಾಖೆ 37 ಕೋಟಿ ರೂ., ಆರೋಗ್ಯ ಇಲಾಖೆಗೆ 610 ಕೋಟಿ ರೂ. ಹೀಗೆ ಎಲ್ಲ ಇಲಾಖೆಗೂ ಹಂಚಿಕೆ ಆಗಿದೆ ಎಂದು ಹೇಳಿದ್ದಾರೆ.

ಬೀದರ್, ಗುಲಬರ್ಗದ ಎಲ್ಲ ಜನವಸತಿ ಪ್ರದೇಶಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮಾಡುತ್ತೇವೆ. ಇದಕ್ಕೆ 7,200 ಕೋಟಿ ರೂ. ವೆಚ್ಚವಾಗಲಿದೆ. ನಾರಾಯಣಪುರ ಡ್ಯಾಂನಿಂದ ನೀರು ಸರಬರಾಜು ಮಾಡಲಾಗುವುದು.ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ರಾಜ್ಯ ಅರ್ಧ ಭರಿಸಬೇಕು, ಕೇಂದ್ರ ಸರ್ಕಾರ ಅರ್ಧ ವೆಚ್ಚ ಭರಿಸಬೇಕು. 3600 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಕೊಡಬೇಕು, 3600 ಕೋಟಿ ಹಣವನ್ನು ರಾಜ್ಯ ಭರಿಸುತ್ತದೆ. ಎಲ್ಲ ಹಳ್ಳಿ, ಎಲ್ಲ ಜನವಸತಿ ಪ್ರದೇಶಗಳಿಗೆ ನೀರು ‌ಕೊಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Cabinet Meeting: ಕಲ್ಯಾಣ ಕರ್ನಾಟಕಕ್ಕೆ ಭರ್ಜರಿ ಕೊಡುಗೆ; ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ಪ್ರತ್ಯೇಕ ಸಚಿವಾಲಯ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ. ಈ ವರ್ಷ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಇದುವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. 371ಜೆ ಸೇರ್ಪಡೆಯಾಗಿ 10 ವರ್ಷ ಆಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಕೂಡ 5000 ಕೋಟಿ ಹಣ ನೀಡಬೇಕು ಎಂದು ನಿರ್ಣಯ ಮಾಡಿದ್ದೇವೆ. ಖಾಲಿ ಇರುವ 17439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಕಲ್ಯಾಣ ಕರ್ನಾಟಕದ ಹೈದರಾಬಾದ್ ವಿಮೋಚನಾ ದಿನ. ಇಂದು ಕಲ್ಯಾಣ ಕರ್ನಾಟಕ ಉತ್ಸವ. ನಾನು ಇಂದು ಬೆಳಗ್ಗೆ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗಿಯಾಗಿದ್ದೆ. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಬೆಳಗ್ಗೆ ಭಾಗಿಯಾಗಿದ್ದೆ. ಸ್ವತಂತ್ರ ಭಾರತದಲ್ಲಿ ಹೈದರಾಬಾದ್ ಕರ್ನಾಟಕ ಭಾಗ ವಿಲೀನವಾಗಿರಲಿಲ್ಲ. ಬೀದರ್, ಕಲಬುರಗಿ, ರಾಯಚೂರು ವಿಲೀನವಾಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Tue, 17 September 24