ಬೆಂಗಳೂರು, (ಫೆಬ್ರವರಿ 25): ಈ ಬಾರಿ ಗಂಗಾವತಿ (Gangavathi) ವಿಧಾನಸಭೆ ಕ್ಷೇತ್ರದಲ್ಲಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಅಲ್ಪಮತಗಳ ಅಂತರಿಂದ ಸೋಲುಕಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (iqbal ansari) ಸ್ವಪಕ್ಷದ ನಾಯಕ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಅವರ ಮುನಿಸು ಮತ್ತಷ್ಟು ಸ್ಫೋಟಗೊಂಡಿದ್ದು, ನನ್ನ ಸೋಲಿಗೆ ‘ಕಾಂಗ್ರೆಸ್’ ಮುಖಂಡರೇ ಕಾರಣ. ಮುಸ್ಲಿಮ್ ಮುಖಂಡ ಬೆಳೆಯಬಾರದು ಎಂದು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತಮ್ಮ ಸಮುದಾಯದ ಮನೆ-ಮನೆಗೂ ಮುಟ್ಟಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು ಆಗುತ್ತೆ ಎಂದು ಹೇಳಿದ್ದು ಪಕ್ಷದಲ್ಲಿ ತಲ್ಲಣ ಮೂಡಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ರಾಜ್ಯದ ಅನೇಕ ಕಾಂಗ್ರೆಸ್ ನಾಯಕರು ನನ್ನ ಸೋಲಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್ ಮುಖಂಡರೇ ಜನಾರ್ದನರೆಡ್ಡಿ ಪರ ಕೆಲಸ ಮಾಡಿ ಸೋಲಿಸಿದ್ದಾರೆ. ನನಗೆ ಮಾಹಿತಿ ಇಲ್ಲದೆ ಕಾಂಗ್ರೆಸ್ ಸಭೆಗಳು ಆಗುತ್ತಿದೆ. ಅದಕ್ಕೆ ಯಾರು ಸಹ ಹೋಗಬೇಡಿ ಎಂದು ವಾಯ್ಸ್ ಮೆಸೇಜ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಇಕ್ಬಾಲ್ ಅನ್ಸಾರಿ, ನನ್ನ ಸಮುದಾಯದ ಪ್ರತಿಯೊಂದು ಮನೆಗೆ ಹೋಗಿ ಮೋಸದ ಬಗ್ಗೆ ಅರಿವು ಮೂಡಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿಎಸ್ವೈ: ಟಿಕೆಟ್ ಕನ್ಫರ್ಮ್, ಸಿಟಿ ರವಿಗೆ ಶಾಕ್
ಲೋಕಸಭಾ ಚುನಾವಣೆ ಸಂದರ್ಭದಲ್ಲೇ ತಮಗಾದ ಅನ್ಯಾಯದ ಬಗ್ಗೆ ತಮ್ಮ ಸಮುದಾಯದ ಪ್ರತಿ ಮನೆ ಮನೆಗೂ ಮುಟ್ಟಿಸುತ್ತೇನೆ ಎಂದು ಹೇಳಿರುವುದು ಕಾಂಗ್ರೆಸ್ನಲ್ಲಿ ತಲ್ಲಣ ಸೃಷ್ಟಿಸಿದೆ. ಇಕ್ಬಾಲ್ ಅನ್ಸಾರಿ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿದ್ದು, ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವಾಗಲಿದೆ ಎಂದಿರುವುದು ಸಂಚಲನಕ್ಕೆ ಕಾರಣವಾಗಿದೆ.
ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು. ಪಕ್ಷದಲ್ಲಿಯೇ ಇರುತ್ತಾರೆ. ಆದರೆ, ಪಕ್ಷದ ವಿರೋಧಿ ಕೆಲಸ ಮಾಡುತ್ತಿರುತ್ತಾರೆ. ಪಕ್ಷದಲ್ಲಿಯೇ ಇದ್ದುಕೊಂಡು ಒಡೆಯುವ ಕೆಲಸ ಮಾಡುತ್ತಿರುತ್ತಾರೆ. ಇಂಥವರನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು. ಇಂಥವರಿಂದಲೇ ಪಕ್ಷ ಸೋಲಾಗಲು ಕಾರಣವಾಗುತ್ತದೆ ಎಂದರು. ಸ್ವಪಕ್ಷೀಯರೇ ಬೇರೆ ಪಕ್ಷದವರೊಂದಿಗೆ ಕೈಜೋಡಿಸಿ, ಡೀಲ್ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಿದ್ದರಿಂದಲೇ ಸೋಲಾಗುತ್ತದೆ. ಹೀಗಾಗಿ ಪಕ್ಷ ಕಟ್ಟಲು ಇಂಥವರನ್ನು ಮೊದಲು ಆಚೆ ಹಾಕಬೇಕು. ಅವರು ಎಷ್ಟೇ ದೊಡ್ಡವರು ಇರಲಿ, ಮುಲಾಜಿಲ್ಲದೇ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಗ್ರಹಿಸಿದ್ದರು. ಇದು ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ