ಕೊಪ್ಪಳ, ನವೆಂಬರ್ 25: ಪ್ರತಿ ದಿನ ಎದ್ದ ಕೂಡಲೇ ಬಹುತೇಕರ ದಿನ ಶುರುವಾಗುವುದು ಟೀ ಕುಡಿಯುವುದರಿಂದ. ಆದರೆ ಟೀ ಕುಡಿಯುವ ಮುನ್ನ, ನಾವು ಕುಡಿಯುವ ಟೀ ಸುರಕ್ಷಿತವಾಗಿದೆಯಾ ಅನ್ನೋದನ್ನು ಸ್ವಲ್ಪ ಯೋಚಿಸಬೇಕಿದೆ. ಯಾಕಂದರೆ ಅಪಾಯಕಾರಿ ಬಣ್ಣ ಸೇರಿಸಿ, ಯಾವುದೇ ಪರವಾನಗಿ ಇಲ್ಲದೇ, ನಕಲಿ ಬ್ರ್ಯಾಂಡ್ಗಳ ಹೆಸರಲ್ಲಿ ಕಳಪೆ ಮತ್ತು ಕಲಬೆರಿಕೆ ಟೀ ಪುಡಿ (Tea Powder) ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.
ಜಿಲ್ಲೆಯ ಗಂಗಾವತಿ ನಗರದ ಕಾರಟಗಿ ರಸ್ತೆಯಲ್ಲಿ ವಿಷ್ಣುರಾಮ್ ಚೌದರಿ ಎನ್ನುವವರ ಗೋಡೌನ್ ಸೇರಿದಂತೆ ದಿಢೀರ್ನೆ ಕೆಲ ಕಂಪನಿಯ ಸಿಬ್ಬಂದಿ ಮತ್ತು ಪೊಲೀಸರು ಟೀ ಪೌಡರ್ ಸಂಗ್ರಹಿಸಿದ್ದ ಗೋಡೌನ್ಗೆ ಎಂಟ್ರಿ ಕೊಟ್ಟಾಗ ಮಾಲೀಕ ಶಾಕ್ ಆಗಿದ್ದಾರೆ. ಯಾಕಂದರೆ ಇಲ್ಲಿ ಸಂಗ್ರಹಿಸಿರುವುದು ಯಾವುದೋ ಗುಣಮಟ್ಟದ ಟೀ ಪೌಡರ್ ಆಗಿರಲಿಲ್ಲ. ಜೊತೆಗೆ ಪರವಾನಗಿಯಿರುವ ಕಲರ್ ಕೂಡ ಇರಲಿಲ್ಲ.
ಜಿಲ್ಲೆಯ ಗಂಗಾವತಿ ಸೇರಿದಂತೆ ಅನೇಕ ಕಡೆ ಹೆಚ್ಚಿನ ವ್ಯಾಪರಸ್ಥರು ಟೀ ಪೌಡರ್ ಅನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕರು ಗುಣಮಟ್ಟದ ಟೀ ಪೌಡರ್ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಗುಣಮಟ್ಟವಲ್ಲದ ಟೀ ಪೌಡರ್ನ್ನು ತಂದು, ಅದಕ್ಕೆ ಕೆಲ ಅಪಾಯಕಾರಿ ಕಲರ್ನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಸಕ್ರಿಯಾವಾಗಿರುವ ಈ ಜಾಲ, ಟೀ ಪೌಡರ್ನ್ನು ಮಾರಾಟ ಮಾಡುತ್ತಿದೆ.
ಸ್ವಲ್ಪ ಬೆಲೆ ಕಡಿಮೆ ಇರುವುದರಿಂದ ಜನರು ಇಂತಹ ಟೀ ಪೌಡರ್ನ್ನು ಖರೀದಿಸುತ್ತಿದ್ದಾರೆ. ಇನ್ನು ಇವರು ಟೀ ಪೌಡರ್ ಮಾರಾಟ ಮಾಡುವುದಕ್ಕೆಂದು ಅನೇಕ ನಕಲಿ ಬ್ರ್ಯಾಂಡ್ಗಳನ್ನು ಕೂಡ ಮಾಡಿಕೊಂಡಿದ್ದಾರೆ. ಅನೇಕ ಬ್ರ್ಯಾಂಡ್ಗಳ ಹೆಸರಲ್ಲಿ ಚೀಲ್ಗಳನ್ನು ತಯಾರಿಸಿದ್ದಾರೆ. ಆದರೆ ಅವುಗಳಿಗೆ ಯಾವುದೇ ಪರವಾನಗಿಯೇ ಇಲ್ಲಾ. ಟೀ ಪೌಡರ್ ಚೀಲಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕ, ವಿಳಾಸ ಸೇರಿದಂತೆ ಯಾವುದೇ ಮಾಹಿತಿಯನ್ನು ಹಾಕದೇ, ಕೇವಲ ಕೆಲ ಬ್ರ್ಯಾಂಡ್ ಹೆಸರು ಹಾಕಿ, ಅದರಲ್ಲಿ ಟೀ ಪೌಡರ್ ಹಾಕಿ ಮಾರಾಟ ಮಾಡುತ್ತಿದ್ದಾರೆ. ಇಂತಹದೊಂದು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಕೆಲ ಟೀ ಕಂಪನಿಗಳ ಮಾಲೀಕರು, ಗಂಗಾವತಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ನವಶೋತ ಉರಿ ಉಯ್ಯಾಲೆ ಶಿಲ್ಪಗಳು ಪತ್ತೆ
ಸದ್ಯ ಈ ಕಳಪೆ ಟೀ ಪುಡಿಯನ್ನ ಮಾರಾಟ ಮಾಡಲಾಗ್ತಿದ್ದ ಗೋಡೌನ್ ಮೇಲೆ ದೂರು ಕೇಳಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ನಕಲಿ ಟೀ ಪುಡಿ ಹಾಗೂ ಅದಕ್ಕೆ ಬಳಸಲಾಗ್ತಿದ್ದ ಕಲರ್ಗಳು ಇರೋದು ಪತ್ತೆಯಾಗಿವೆ. ವಿಳಾಸ ಇಲ್ಲದೇ ವಿವಿಧ ಬ್ರಾಂಡ್ಗಳ ಹೆಸರಲ್ಲಿ 5 ರಿದ 10 ಕೆಜಿ ಪ್ಯಾಕೇಟ್ಗಳನ್ನ ಮಾಡಿ ಮಾರಾಟ ಮಾಡಲಾಗ್ತಿತ್ತು. ಖಾಸಗಿ ಟೀ ಪುಡಿ ಕಂಪನಿ ದೂರು ನೀಡಿದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟೆ ಅಲ್ಲದೇ ಪೆಟೆಂಟ್ ಪಡೆದಿದ್ದ ಕಂಪನಿಯೊಂದರ ಪಾರ್ಮೂಲಾ ಕೂಡ ಬಳಸಿ ಟೀ ಪುಡಿ ತಯಾರು ಮಾಡಲಾಗ್ತಿತ್ತು ಎಂದು ಖಾಸಗಿ ಟೀ ಪುಡಿ ಕಂಪನಿ ಸಿಬ್ಬಂದಿ ಆರೋಪಿಸಿದ್ದಾರೆ.
ಗಂಗಾವತಿ ನಗರದಲ್ಲಿ ವಿಷ್ಣುರಾಮ್ ಚೌದರಿ ಸೇರಿದಂತೆ ಕೆಲವರು ಅನೇಕ ವರ್ಷಗಳಿಂದ ಇಂತಹದೊಂದು ದಂಧೆಯನ್ನು ನಡೆಸಿಕೊಂಡು ಬಂದಿದ್ದಾರಂತೆ. ಕಳಪೆ ಟೀ ಪುಡಿ ಮಾರಾಟ ಮಾಡ್ತಿದ್ದ ವ್ಯಕ್ತಿಗಳು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಟೀ ಪುಡಿಯನ್ನ ಮಾರಾಟ ಮಾಡ್ತಿದ್ದರಂತೆ. ಸದ್ಯ ವಿಷ್ಣುರಾಮ್ ಚೌದರಿಯ ಗೋಡೌನ್ನಲ್ಲಿದ್ದ ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ಟೀ ಪುಡಿ ಚೀಲಗಳನ್ನ ವಶಕ್ಕೆ ಪಡೆದಿದ್ದು, ವಿಷ್ಣುರಾಮ್ ಚೌದರಿ ಮೇಲೆ ಪ್ರಕರಣ ದಾಖಲಿಸಿಲು ಮುಂದಾಗಿದ್ದಾರೆ.
ಇನ್ನೂ ಕಳಪೆ ಮತ್ತು ಕಲಬೆಲೆಕೆ ಟೀ ಪುಡಿ ಮಾರಾಟಗಾರ ವಿಷ್ಣುರಾಮನ ಬಳಿ ಯಾವುದೇ ದಾಖಲೆಯಿಲ್ಲ. ಈ ಬಗ್ಗೆ ಕೇಳಿದ್ರೆ ಯಾವುದೇ ಕಲರ್ಗಳನ್ನ ಬಳಸಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಗೋಡೌನ್ನಲ್ಲಿ ಕಲರ್ ಪತ್ತೆಯಾಗಿದ್ದರ ಬಗ್ಗೆ ಕೇಳಿದ್ರೆ ಕಲರ್ ಕಲರ್ ಕಾಗೆ ಹಾರಿಸ್ತಿದ್ದಾರೆ.
ಇದನ್ನೂ ಓದಿ: ರಾತೋರಾತ್ರಿ ಬೆಳೆ ನಾಶ: ಸ್ಟೀಲ್ ಫ್ಯಾಕ್ಟರಿ ನಂಬಿ ಮೋಸ ಹೋದ ಕೊಪ್ಪಳದ ರೈತರು
ಕಳಪೆ ಮತ್ತು ಕಲಬೆರಕೆ ಟೀ ಪುಡಿ ಮಾರಾಟ ಜಾಲ ಪತ್ತೆಯಾದ ಹಿನ್ನೆಲೆ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೇವಲ ಟೀ ಪುಡಿ ಅಷ್ಟೇ ಅಲ್ಲದೆ ದಿನನಿತ್ಯ ಬಳಸುವ ಹಲವು ಆಹಾರ ಪದಾರ್ಥಗಳು ನಕಲಿ ಮಾರಾಟ ನಡೆದಿದೆ ಎನ್ನುವ ಚರ್ಚೆ ಜೋರಾಗಿದೆ. ಕೂಡಲೇ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಇಂತಹ ದಂಧೆಗೆ ಕಡಿವಾಣ ಹಾಕಿ ಜನರ ಆರೋಗ್ಯ ಕಾಪಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.