ಶಕ್ತಿ ದೇವತೆ ಹುಲಿಗೆಮ್ಮ ದೇವಸ್ಥಾನದ ಅಕೌಂಟ್ನಲ್ಲಿದೆ 53 ಕೋಟಿ ಹಣ! ಆದ್ರೆ, ಇಲ್ಲಿ ಭಕ್ತರಿಗೆ ಮೂಲ ಸೌಲಭ್ಯಗಳೇ ಇಲ್ಲವಾಗಿದೆ
Huligemma temple: ದೇವಸ್ಥಾನ ಅಭಿವೃದ್ಧಿ ಮಾಡಬೇಕು ಎಂದು 10 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದರೂ, ಸರ್ಕಾರ ಅನುದಾನ ಬಳಕೆಗೆ ಅನುಮೋದನೆ ನೀಡದೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಪ್ರತಿ ಬಾರಿ ಒಂದಿಲ್ಲೊಂದು ಕಾರಣ ಮುಂದೆ ಮಾಡಿ ಸರ್ಕಾರ ಸಭೆ ಮುಂದೂಡುತ್ತಿದೆ.
ಆ ದೇವಸ್ಥಾನದ ಬ್ಯಾಂಕ್ ಅಕೌಂಟ್ ನಲ್ಲಿ ಬರೋಬ್ಬರಿ 53 ಕೋಟಿ ಹಣ ಇದೆ. ಆದ್ರೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಮೂಲ ಸೌಲಭ್ಯಗಳಿಲ್ಲ! ಅಷ್ಟೇ ಅಲ್ಲ ದೇವಸ್ಥಾನ ಆವರಣ ಸ್ವಚ್ಛತೆ ಕಾಣದೇ (basic amenities) ಗಬ್ಬು ನಾರುತ್ತಿದೆ. ಇದಕ್ಕೆಲ್ಲ ಕಾರಣ ಏನು ಎಂಬುದರ ಕುರಿತ ಫುಲ್ ಡಿಟೇಲ್ಟ್ ಇಲ್ಲಿದೆ ನೋಡಿ…
ಎಲ್ಲೆಂದರಲ್ಲಿ ಮಲಗಿರೋ ಭಕ್ತರು… ದೇವಸ್ಥಾನದ ಪಕ್ಕದಲ್ಲಿಯೇ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ. ಈ ದೃಶ್ಯಗಳು ಕಂಡು ಬರೋದು ನಾಡಿನ ಶಕ್ತಿ ದೇವತೆಯರ ದೇವಸ್ಥಾನದಲ್ಲಿ ಒಂದಾದ ಹುಲಿಗೆಮ್ಮ ದೇವಸ್ಥಾನದಲ್ಲಿ (Huligemma Temple). ಹೌದು, ಕೊಪ್ಪಳ (Koppal) ತಾಲೂಕಿನ ಪೌರಾಣಿಕ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ಭಕ್ತರ ಕಾಣಿಕೆಯ ಬರೋಬ್ಬರಿ 253 ಕೋಟಿ ಹಣ ಬ್ಯಾಂಕ್‌ನಲ್ಲೇ ಕೊಳೆಯುತ್ತಿದೆ.
ದೇವಸ್ಥಾನ ಅಭಿವೃದ್ಧಿ ಮಾಡಬೇಕು ಎಂದು 10 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದರೂ, ಸರ್ಕಾರ ಅನುದಾನ ಬಳಕೆಗೆ ಅನುಮೋದನೆ ನೀಡದಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ಇದರಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣ ಮುಂದೆ ಮಾಡಿ ಸರ್ಕಾರ ಸಭೆ ಮುಂದೂಡುತ್ತಿದೆಯೇ ಹೊರತು, ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎನ್ನುವುದು ಕೊರಗು ಸ್ಥಳೀಯರದ್ದು.
ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗೆ 20 ಲಕ್ಷ ರೂ. ಬಳಕೆ ಮಾಡುವ ಅಧಿಕಾರ ಇದ್ದರೆ ಜಿಲ್ಲಾಧಿಕಾರಿಗೆ 1 ಕೋಟಿ ಅನುದಾನ ಬಳಸುವ ಅಧಿಕಾರ ಇದೆ. ಆದರೆ, ಇದ್ಯಾವುದಕ್ಕೂ ಸ್ಥಳೀಯ ಅಧಿಕಾರಿಗಳು ಸಹಕಾರ ನೀಡದೇ ಕೈ ತೊಳೆದುಕೊಂಡಿದ್ದಾರೆ. ಹುಲಿಗೆಮ್ಮ ದೇವಸ್ಥಾನಕ್ಕೆ ಉತ್ತರ ಕರ್ನಾಟಕ ಹಾಗೂ ನೆರೆಯ ಆಂಧ್ರ, ಮಹಾರಾಷ್ಟ್ರದಿಂದ ಅಪಾರ ಭಕ್ತರು ಬರುತ್ತಾರೆ. ಪ್ರತಿ ಹುಣ್ಣಿಮೆಗೆ ಲಕ್ಷಂತರ ಭಕ್ತರು ದರ್ಶನ ಪಡೆಯುತ್ತಾರೆ. ಆದ್ರೆ, ದೇವಸ್ಥಾನ ಆಡಳಿತ ಮಂಡಳಿ ಕನಿಷ್ಠ ಸೌಲಭ್ಯಗಳನ್ನು ಭಕ್ತರಿಗೆ ನೀಡಿಲ್ಲ. ಇದರಿಂದ ಆಗಮಿಸುವ ಭಕ್ತರು ನದಿಯ ದಡೆ ಅಥವಾ ರಸ್ತೆಯಲ್ಲಿಯೇ ಮಲಗಬೇಕಿದೆ.
ಹಿಂದೂಗಳ ಜಪ ಮಾಡುವ ಬಿಜೆಪಿ ಸರ್ಕಾರ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಭಕ್ತರ ನಿರೀಕ್ಷೆ ಹುಸಿ ಆಗುವ ಎಲ್ಲ ಲಕ್ಷಣಗಳಿದ್ದು, ಹಿಂದೂ ಪದ ಜಪಿಸುವ ಜನರದ್ದು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಎಂಬುದು ಸ್ಪಷ್ಟವಾಗುತ್ತಿದೆ. (ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ)