ಕೊಪ್ಪಳ: ಕೊಪ್ಪಳದಲ್ಲಿ (Koppal) ಕೈಗಾರಿಕಾ ಸಮ್ಮೇಳನ ಮಾಡಲಾಗುವುದು ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಾರೆ. ಜಿಲ್ಲೆಯ ಬಗ್ಗೆ ಬಹಳ ಅನುಕಂಪ ಹಾಗೂ ಹಳೇ ಸಂಬಂಧ ಇದೆ. 120 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ. ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ. ಸ್ತ್ರೀಶಕ್ತಿ ಸಂಘಗಳಿಗೆ 500 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ 5 ಲಕ್ಷ ಯುವಕರಿಗೆ ಕೆಲಸ ಕೊಡುವ ಯೋಜನೆ ರೂಪಿಸಲಾಗಿದೆ ಎಂದರು.
ಆಂಜನೇಯ ಜನ್ಮತಾಳಿದ ಅಂಜನಾದ್ರಿ ಬೆಟ್ಟ ಕಿಷ್ಕಿಂದೆ ಪ್ರದೇಶದ ಅಭಿವೃದ್ಧಿಗೆ ಸಮಯ ವ್ಯರ್ಥ ಮಾಡದೆ, ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು (ಆಗಸ್ಟ್ 1) ರಂದು ಆನೆಗೊಂದಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಏರ್ಪಡಿಸಲಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ರಾಮಾಯಣದಲ್ಲಿ ಇಲ್ಲಿನ ಅಂಜನಾದ್ರಿ ಬೆಟ್ಟ ಕಿಷ್ಕಿಂದೆಯ ಉಲ್ಲೇಖವಿದೆ ಅಲ್ಲದೆ ಹಲವು ಪುರಾಣಗಳಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ಕಿಷ್ಕಿಂದೆಯೇ ಆಂಜನೇಯನ ಜನ್ಮಸ್ಥಳ ಎಂಬುದು ನಿರ್ವಿವಾದವಾಗಿದೆ. ಹೀಗಾಗಿ ಈ ಪ್ರದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದರು.
ಸರ್ಕಾರ ಈಗಾಗಲೆ ಇದಕ್ಕಾಗಿ 120 ಕೋಟಿ ರೂ. ಒದಗಿಸಿದ್ದು, ಅಗತ್ಯವಾದಲ್ಲಿ ಇನ್ನಷ್ಟು ಅನುದಾನ ನೀಡಲು ಸಿದ್ಧವಿದೆ. ಬೆಂಗಳೂರಿನಲ್ಲಿ ಈ ಹಿಂದೆ ಏರ್ಪಡಿಸಿದ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಈ ಸೂಚನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಪಾಲನೆ ಮಾಡಬೇಕು. ಅಂಜನಾದ್ರಿ ಬೆಟ್ಟದ ಮೇಲೆ ಹಾಗೂ ಕೆಳ ಭಾಗದ ಪ್ರದೇಶಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಇದಕ್ಕಾಗಿ ಅತ್ಯುತ್ತಮವಾದ ವಾಸ್ತುಶಿಲ್ಪಿಯನ್ನು ಗುರುತಿಸಿ, ಸಮಗ್ರವಾದ ಯೋಜನೆ ರೂಪಿಸಬೇಕು. ಎರಡು ತಿಂಗಳ ಒಳಗಾಗಿ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಹಾಕುವಂತಾಗಬೇಕು. ಭೂಸ್ವಾಧೀನಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಈಗಾಗಲೆ 24 ಕೋಟಿ ರೂ. ಅನುದಾನ ನೀಡಲಾಗಿದೆ. ಸುಮಾರು 30-32 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಗೆ ಸ್ಥಳ ಬೇಕು, ಸುಮಾರು 600 ಕೊಠಡಿಗಳಷ್ಟು ಸಾಮರ್ಥ್ಯದ ಯಾತ್ರಿ ನಿವಾಸ, ಮಾರುಕಟ್ಟೆ, ಸುಸಜ್ಜಿತ ಆಸ್ಪತ್ರೆ, ಶೌಚಾಲಯ, ಯುಜಿಡಿ, ಲೈಟಿಂಗ್ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಗಂಗಾವತಿ, ಹೊಸಪೇಟೆ, ಕೊಪ್ಪಳ ಭಾಗದಿಂದ ಸಂಪರ್ಕ ಕಲ್ಪಿಸುವ ಅಪ್ರೋಚ್ ರಸ್ತೆಗಳು ಏಳೆಂಟು ತಿಂಗಳಲ್ಲಿ ಅಭಿವೃದ್ಧಿಯಾಗಬೇಕು. ಮಳೆಗಾಲ ಮುಗಿದ ಕೂಡಲೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಾರಂಭಗೊಂಡು, ಶೀಘ್ರ ಪೂರ್ಣವಾಗಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಗವಿಮಠಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಸಿಎಂ ಬೊಮ್ಮಾಯಿ ಜೊತೆಗೆ ಸಚಿವರಾದ ಹಾಲಪ್ಪ ಆಚಾರ್, ಸುಧಾಕರ್,ಭೈರತಿ ಬಸವರಾಜ, ಸಿ ಸಿ ಪಾಟೀಲ್, ಸಂಸದ ಕರಡಿ ಸಂಗಣ್ಣ ಇದ್ದರು.
ದೇಶದಲ್ಲೇ ಇಂತಹ ಕಾರ್ಯಕ್ರಮ ನಾವು ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ಋಣದಲ್ಲಿದ್ದೇವೆ, ಋಣ ತೀರಿಸುತ್ತೇವೆ ಎಂದು ಹೇಳಿದರು.
Published On - 6:11 pm, Mon, 1 August 22