ಕೊಪ್ಪಳ: ಫ್ರೆಂಡ್ ಶಿಪ್ ಬ್ಯಾಂಡ್(Friendship Band) ಕಟ್ಟುವ ಮೂಲಕ ಪ್ರತಿಯೊಬ್ಬರು ಅವರ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ನಡೆದ ಮನ ಕಲಕುವ ಘಟನೆಯಲ್ಲಿ ಸಾಯುವ ಮುನ್ನ ತಮ್ಮ ಸ್ನೇಹಿತನೊಬ್ಬನಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಕಾರಟಗಿ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಸುಹಾಸ್ ಸೌದ್ರಿ ಎಂಬ ಬಾಲಕನಿಗೆ ಆತನ ಸ್ನೇಹಿತರು ನಿನ್ನೆ ಶಾಲೆಯ ಆವರಣದಲ್ಲಿ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ.
ಯಾವ ಕಾರಣಕ್ಕೆ ಅಂತಿಮ ವಿದಾಯ
ಸುಹಾಸ್ ಸೌದ್ರಿ ಹುಟ್ಟಿನಿಂದಲೂ ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದರು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸುಹಾಸ್, ತಡರಾತ್ರಿ ಮೃತಪಟ್ಟಿದ್ದಾನೆ. ತೀವ್ರ ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ಸುಹಾಸ್ ನೆನೆಸಿಕೊಳ್ಳುತ್ತಿದ್ದ. ಈ ಹಿನ್ನಲೆಯಲ್ಲಿ ಸುಹಾಸ್ ನನ್ನು ಪಾಲಕರು ಶಾಲೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ ಸುಹಾಸ್ ಗೆ ಆತನ ಸ್ನೇಹಿತರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ.
ಸ್ನೇಹಿತರ ಜೊತೆ ಸುಹಾಸ್
ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಸುಹಾಸ್
ಕಿಡ್ನಿ ಸಮಸ್ಯೆಯಿಂದ ಮೃತಪಟ್ಟಿರುವ ಸುಹಾಸ್ ನರ್ಸರಿಯಿಂದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿಯೇ ವ್ಯಾಸಂಗ ಮಾಡುತ್ತಿದ್ದ. ಈ ಹಿನ್ನಲೆಯಲ್ಲಿ ಸುಹಾಸ್ ಎಲ್ಲರೊಂದಿಗೆ ಬಹಳ ಅನ್ಯೋನ್ಯತೆಯಿಂದ ಹಾಗೂ ಸ್ನೇಹದಿಂದ ಇದ್ದ. ಜೊತೆಗೆ ಶಿಕ್ಷಕರೊಂದಿಗೂ ಸಹ ಉತ್ತಮ ಬಾಂಧವ್ಯವನ್ನು ಸುಹಾಸ್ ಹೊಂದಿದ್ದ. ಜೊತೆಗೆ ಸುಹಾಸ್ ಓದಿನಲ್ಲಿಯೂ ಬಹಳ ಜಾಣನಾಗಿದ್ದು, ಕ್ಲಾಸ್ ನಲ್ಲಿಯೇ ಟಾಪರ್ ಆಗಿದ್ದ.
ಕಣ್ಣೀರು ಹಾಕಿದ ಸ್ನೇಹಿತರು
ಇನ್ನು ಸುಹಾಸ್ ನ ಕೋರಿಕೆಯಂತೆ ಆತನನ್ನು ಶಾಲೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಸುಹಾಸ್ ನ ಪರಸ್ಥಿತಿ ಕಂಡು ಸ್ನೇಹಿತರು ಕಣ್ಣೀರು ಹಾಕಿದರು. ಜೊತೆಗೆ ಆತನ ಶಾಲೆಯ ಶಿಕ್ಷಕರು ಸಹ ತಮ್ಮ ನೆಚ್ಚಿನ ವಿದ್ಯಾರ್ಥಿ ಸುಹಾಸ್ ನ ಸ್ಥಿತಿ ಕಂಡು ಮಮ್ಮುಲ ಮರುಗಿದರು.
ಸುಹಾಸ್ ಸಾವಿಗೂ ಮುನ್ನ ಶಾಲೆಯಲ್ಲಿ ಸ್ನೇಹಿತರ ಮೂಲಕ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಸಿಕೊಂಡಿರುವುದು ಆತನ ಮೇಲೆ ಸ್ನೇಹಿತರು ಇಟ್ಟಿರುವ ಪ್ರೀತಿ ತೋರಿಸಿಕೊಡುತ್ತದೆ. ಇನ್ನು ಓದಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದ್ದ ಹಾಗೂ ಬಾಳಿ ಬದುಕಬೇಕಿದ್ದ ಸುಹಾಸ್ ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿರುವುದು ದುರಂತವೇ ಸರಿ.
ವರದಿ: ಶಿವಕುಮಾರ್ ಪತ್ತರ್, ಟಿವಿ9 ಕೊಪ್ಪಳ