ಕೊಪ್ಪಳ: ನನ್ನ ಆಸ್ತಿಪಾಸ್ತಿ ಜಪ್ತಿ ಮಾಡುತ್ತಾರೆ ಅಂತಾರೆ, ಅದಕ್ಕೆಲ್ಲ ನಾನು ಹೆದರಲ್ಲ. ಜೈಲಿನಲ್ಲಿ 4X5 ಅಡಿ ಜಾಗದಲ್ಲಿ ಇದ್ದವನು ನಾನು ಎಂದು ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದರು. ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ನನ್ನ ಬಂಧನದ ಸಮಯದಲ್ಲಿ 1,200 ಕೋಟಿ ಆಸ್ತಿ ಜಪ್ತಿ ಮಾಡಿದ್ದರು. ಆದರೆ ಹೈಕೋರ್ಟ್ನಲ್ಲಿ ಗೆದ್ದಿದ್ದೆ, ಈಗ ‘ಸುಪ್ರೀಂ’ ಮೆಟ್ಟಿಲೇರಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಸ್ಪೀಡ್ ಜಾಸ್ತಿಯಾಗಿದೆ. 1,200 ಕೋಟಿ ಇದ್ದ ಆಸ್ತಿ 4,000 ಕೋಟಿಯಾಗಿದೆ. ಹನುಮ ಹುಟ್ಟಿದ ನಾಡಿಗೆ ನಾನು ಬಂದಿದ್ದೇನೆ, ನನಗೆ ಲಕ್ಷ್ಮೀ ಕೃಪೆ ಇದೆ. ಇನ್ಮುಂದೆ ನಾನು ಕಣ್ಣೀರು ಹಾಕಲ್ಲ. ನನ್ನ ಕಣ್ಣೀರು 12 ವರ್ಷದ ಹಿಂದೆಯೇ ಮುಗಿದಿದೆ ಎಂದು ಹೇಳಿದರು.
ಯಾರೇ ಏನೇ ಮಾಡಿದ್ರೂ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಗಂಗಾವತಿ ಅಭಿವೃದ್ಧಿ ಮಾಡೋದೆ ನನ್ನ ಗುರಿ. ಚುನಾವಣೆಗೆ ಇನ್ನೂ 3 ತಿಂಗಳಿದೆ, ಏನೇನು ಆಗುತ್ತೋ ನೋಡೋಣ. ನನ್ನ ಮೇಲೆ ಕೋರ್ಟ್ನಲ್ಲಿ ಆರೋಪವಿದೆ, ಅದೆಲ್ಲ ಬಯಲಿಗೆ ಬರುತ್ತೆ. ಅದು ಗೊತ್ತಾದ ಮೇಲೆಯೇ ನನ್ನ ಉಸಿರು ಹೋಗೋದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಇದನ್ನೂ ಓದಿ: Breaking News: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ
ಇನ್ನು ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಬೆಂಬಲಿಗರು ಬಿಜೆಪಿ ತೊರೆದು ರೆಡ್ಡಿ ಅವರ ಕಲ್ಯಾಣ ಪ್ರಗತಿ ಪಕ್ಷ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಗಂಗಾವತಿಯ ಕೆಆರ್ಪಿಪಿ ಕಚೇರಿಯಲ್ಲಿ ಜ. 10 ರಂದು ಜಿಲ್ಲೆಯ ಹಲವು ಬಿಜೆಪಿ ಮುಖಂಡರು KRPP ಸೇರ್ಪಡೆಯಾದರು. ಕೊಪ್ಪಳ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಯಮನೂರಪ್ಪ ಚೌಡ್ಕಿ ಸೇರಿದಂತೆ ಪಂಚಮಸಾಲಿ, ರೆಡ್ಡಿ, ವಾಲ್ಮೀಕಿ, ಬೋವಿ ಮುಖಂಡರು ಜನಾರ್ದನ ರೆಡ್ಡಿ ಅವರ ಕಲ್ಯಾಣ ಪ್ರಗತಿ ಪಕ್ಷ ಸೇರ್ಪಡೆಯಾಗುವ ಮೂಲಕ ಹಾಲಿ ಗಂಗಾವತಿ ಬಿಜೆಪಿ ಶಾಸಕ ಮುನವಳ್ಳಿಗೆ ಶಾಕ್ ಕೊಟ್ಟರು.
ಮೊನ್ನೇ ಅಷ್ಟೇ ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಮ್ಮೂರು ಶೇಖರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದ್ದರು. ಅಲ್ಲದೇ ಗಂಗಾವತಿ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರೆಡ್ಡಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಅನುಮತಿಗೆ ವಿಳಂಬ: ಬೊಮ್ಮಾಯಿ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್
ಮೊನ್ನೆಯಷ್ಟೇ ಅಂದ್ರೆ ಇದೇ ಡಿಸೆಂಬರ್ 25, 2022ರಂದು ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಈಮೂಲಕ ರಾಜ್ಯ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ. ಇದು ರಾಜ್ಯ ಬಿಜೆಪಿಗೆ ಶಾಕ್ ಕೊಟ್ಟಿದ್ದಕ್ಕಿಂತ ಕಡಿಮೆಯೇನಿಲ್ಲ.
ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ, ಬಿಜೆಪಿಯಲ್ಲಿ ದುಡಿದವರು. ಆದರೆ ನಂತರದ ದಿನಗಳಲ್ಲಿ ನಡೆದ ಬೆಳವಣಿಗೆಗಳಿಂದಾಗಿ ಜನಾರ್ದನ ರೆಡ್ಡಿ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ತೊರೆದದ್ದು ಸಾಕಷ್ಟು ಸದ್ದು ಮಾಡಿತ್ತು. ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಬಿರುಗಾಳಿ ಅಲೆ ಏಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:46 pm, Wed, 11 January 23