ಕೊಪ್ಪಳ, ಏಪ್ರಿಲ್ 15: ಕಿರ್ಲೋಸ್ಕರ್ ಫೆರಸ್ ಫ್ಯಾಕ್ಟರಿಯವರು (Kirloskar Ferrous Factory) ಸ್ಥಳೀಯರಿಗೆ ಉದ್ಯೋಗ ನೀಡದೆ, ಬೇರೆ ರಾಜ್ಯದ ಯುವಕರಿಗೆ ಕೆಲಸ ನೀಡುತ್ತಿದ್ದಾರೆಂದು ಕೊಪ್ಪಳ (Koppal) ತಾಲೂಕಿನ ಬೇವಿನಹಳ್ಳಿ ಗ್ರಾಮದ ಜನರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತಾರು ಬಾರಿ ಫ್ಯಾಕ್ಟರಿಗೆ ಅಲೆದಾಡಿ ಸಾಕಾಗಿದ್ದ ಬೇವಿನಹಳ್ಳಿ ಗ್ರಾಮದ ಜನರು, ರೊಚ್ಚಿಗೆದ್ದು ಇಂದು (ಏ.15) ಪ್ಯಾಕ್ಟರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಜನರನ್ನು ಸಮಾಧಾನ ಮಾಡಲು ಪೊಲೀಸರು ಕೂಡ ಹರಸಾಹಸ ಪಡಬೇಕಾಯಿತು. ಇನ್ನು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಖಾನೆ ಸ್ಥಳೀಯರಿಗೆ ಕೆಲಸ ನೀಡದೆ ಇರುವುದು.
ದಶಕಗಳ ಹಿಂದೆ ಬೇವಿನಹಳ್ಳಿ ಗ್ರಾಮದಲ್ಲಿ ಕಿರ್ಲೋಸ್ಕರ್ ಫೆರಸ್ ಫ್ಯಾಕ್ಟರಿ ಸ್ಥಾಪನೆಯಾಗುತ್ತದೆ. ಆಗ ಗ್ರಾಮದ ಜನರು ತಮ್ಮ ಫಲವತ್ತಾದ ಭೂಮಿಯನ್ನು ಕಾರ್ಖಾನೆಗೆ ನೀಡಿದ್ದರು. ಆದರೆ ಆರಂಭದಲ್ಲಿ ಕೆಲವರಿಗೆ ನೌಕರಿ ನೀಡಿದ್ದ ಪ್ಯಾಕ್ಟರಿ, ನಂತರ ಸ್ಥಳೀಯರನ್ನು ಬಿಟ್ಟು ಬೇರೆ ಜಿಲ್ಲೆ ಮತ್ತು ಬೇರೆ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆಯಂತೆ. ಇದು ಬೇವಿನಹಳ್ಳಿ ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿರುವ ಅನೇಕ ನಿರುದ್ಯೋಗಿಗಳಿಗೆ ಕೆಲಸ ಕೊಡುತ್ತೇವೆ ಅಂತ ಹೇಳಿದ್ದ ಕಂಪನಿಯ ಸಿಬ್ಬಂದಿ, ಅನೇಕ ಯುವಕರಿಗೆ ಧಾರವಾಡಲ್ಲಿರುವ ಎನ್ಟಿಟಿಎಫ್ನಲ್ಲಿ ಕಾಲೇಜಿನಲ್ಲಿ ಮಷಿನ್ಗಳ ಬಗ್ಗೆ ಹತ್ತು ತಿಂಗಳು ತರಬೇತಿಯನ್ನು ಕೂಡಾ ಕೊಡಿಸಿದ್ದರಂತೆ. ತರಬೇತಿ ಪಡೆದು ಬಂದಿರುವ ಯುವಕರು, ಅನೇಕ ತಿಂಗಳಿಂದ ಫ್ಯಾಕ್ಟರಿಗೆ ಅಲೆದಾಡಿ, ತಮಗೆ ಕೆಲಸ ಕೊಡಿ ಅಂತ ಕೇಳುತ್ತಿದ್ದರೂ ಕೂಡ ಕೆಲಸ ನೀಡುತ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಆನೆಗೊಂದಿಯ ಕಡೆಬಾಗಿಲು ಬೆಟ್ಟದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ
ಕಿರ್ಲೋಸ್ಕರ್ ಫ್ಯಾಕ್ಟರಿಯಿಂದ ಹತ್ತಾರು ಸಮಸ್ಯೆಗಳಿವೆ. ಪ್ರತಿನಿತ್ಯ ಹೊರಸೂಸುವ ಹೊಗೆಯಿಂದ ನಮ್ಮ ಆರೋಗ್ಯ ಹಾಳಾಗಿ ಹೋಗುತ್ತಿದೆ. ಸಾಕಷ್ಟು ಸಂಕಷ್ಟದಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಆದರೆ ನಮಗೆ ಫ್ಯಾಕ್ಟರಿಯವರು ಉದ್ಯೋಗ ನೀಡದೆ ಇದ್ದರೆ ನಾವು ಎಲ್ಲಿ ಹೋಗಿ ಕೆಲಸ ಮಾಡಬೇಕು. ಮೊದಲು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿರುವ ಕಿರ್ಲೋಸ್ಕರ್ ಸೇರಿದಂತೆ 200ಕ್ಕೂ ಹೆಚ್ಚು ಫ್ಯಾಕ್ಟರಿಗಳಿವೆ. ಆದರೆ ಬಹುತೇಕ ಫ್ಯಾಕ್ಟರಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡದೆ, ಬಿಹಾರ್, ಅಸ್ಸಾಂ, ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು ಕೆಲಸ ನೀಡುತ್ತಿದ್ದಾರಂತೆ. ಭೂಮಿ ನಮ್ಮದು ಹೋಗಿದೆ, ಫ್ಯಾಕ್ಟರಿಯಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ. ಆದರೆ ನಮಗೆ ಕೆಲಸ ನೀಡುವ ಬದಲು, ಬೇರೆಯವರಿಗೆ ಕೆಲಸ ನೀಡುತ್ತಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ಯಾಕ್ಟರಿಯವರು ಸದ್ಯ ಉದ್ಯೋಗ ಖಾಲಿಯಿಲ್ಲ. ಕೆಲ ಘಟಕಗಳು ನೀರಿನ ಕೊರತೆಯಿಂದ ಬಂದಾಗಿವೆ. ಮುಂದೆ ನೋಡೋಣ ಅಂತ ಹೇಳುತ್ತಿದ್ದಾರಂತೆ. ಆದರೆ 4-5 ವರ್ಷಗಳಿಂದ ಸ್ಥಳೀಯರಿಗೆ ಉದ್ಯೋಗ ನೀಡದೆ, ಬೇರೆಯವರಿಗೆ ಉದ್ಯೋಗ ನೀಡುತ್ತಿದ್ದಾರೆ ಅನ್ನೋದು ಸ್ಥಳೀಯರ ವಾದವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಫ್ಯಾಕ್ಟರಿಗಳಿದ್ದರೂ ಕೂಡ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಫ್ಯಾಕ್ಟರಿಯವರಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ