ಮನೆ ಪರಿಹಾರ, ವೃದ್ಧಾಪ್ಯ ವೇತನ ಕೇಳಲು ಹೋದ ವ್ಯಕ್ತಿಗೆ ಮರಣ ದೃಢೀಕರಣ ಪತ್ರ ನೀಡಿದ ಅಧಿಕಾರಿಗಳು
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಸುರಿದ ಅತಿಯಾದ ಮಳೆಯಿಂದ ಮನೆ ಕಳೆದುಕೊಂಡ ವೃದ್ಧನಿಗೆ ಅಧಿಕಾರಿಗಳ ಮಾತು ಕೇಳಿ ಶಾಕ್ ನೀಡಿದ್ದಾರೆ.
ಕಳೆದ ತಿಂಗಳು ಸುರಿದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಸಂಬಂಧ ಸರ್ಕಾರ ಮನೆ ಕಳೆದುಕೊಂಡವರಿಗೆ ಪರಿಹಾರ ಕೂಡ ಕೊಡುತ್ತಿದೆ. ಸರ್ಕಾರದ ಮಾತು ನಂಬಿ ಮನೆ ಕಳೆದುಕೊಂಡು ಸಂತ್ರಸ್ಥರೊಬ್ಬರು ಪರಿಹಾರ ಕೊಡಿ ಅಂತ ಕೇಳೋಕೆ ಹೋದರೆ ಅಧಿಕಾರಿಗಳು ಕೊಟ್ಟ ಉತ್ತರ ಕೇಳಿ ಆ ಸಂತ್ರಸ್ಥ ಶಾಕ್ ಆಗಿದ್ದಾರೆ. ಯಪ್ಪಾ ವಿಧಿಯೇ ಇದೇನು ಕಾಲ ಬಂತು ಅಂತ ಅವಕ್ಕಾಗಿದ್ದಾನೆ.
ಹೌದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನಾಳ ಗ್ರಾಮದ ನಿವಾಸಿ ವೃದ್ದ ಮಹಾಂತಪ್ಪ ಸಂಕನಾಳ ಕಳೆದ ತಿಂಗಳು ಸುರಿದ ಅತಿಯಾದ ಮಳೆಯಿಂದ ಮನೆ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ವಾಮಿ ನನಗೆ ಪರಿಹಾರ ಕೊಡಿ ಅಂತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ವೇಳೆ ಮಹಾಂತಪ್ಪ ಸತ್ತು ಹೋಗಿದ್ದಾರೆ. ಈ ವ್ಯಕ್ತಿಯ ಮನೆ ಬಿದ್ದಿಲ್ಲ ಅಂತ ನವಲಿ ಗ್ರಾಮ ಪಂಚಾಯತ್ ಪಿಡಿಓ ಸಾಹೇಬರು ದೃಡಿಕರಣ ಪತ್ರವನ್ನು ಕಂದಾಯ ಅಧಿಕಾರಿಗಳಿಗೆ ನೀಡಿ ಕೈತೊಳೆದುಕೊಂಡಿದ್ದಾರೆ.
ಕೆಲ ದಿನಗಳ ನಂತರ ಮಹಾಂತಪ್ಪ ಸಂಕನಾಳ ಮನೆ ಪರಿಹಾರ ಯಾಕೆ ಬಂದಿಲ್ಲ, ವೃದ್ಧಾಪ್ಯ ವೇತನ ಯಾಕೆ ಬರುತ್ತಿಲ್ಲ ಎಂದು ಗ್ರಾಮ ಪಂಚಾಯಿತಿಗೆ ಕೇಳಲು ಹೋದಾಗ ಮಹಾಂತಪ್ಪ ಸಂಕನಾಳ ಮನೆ ಬಿದ್ದಿಲ್ಲ, ಅಷ್ಟೆ ಅಲ್ಲದೆ ಮಹಾಂತಪ್ಪ ಸಂಕನಾಳ ಬದುಕಿದ್ದಾಗಲೆ ಸತ್ತೊಗಿದ್ದಾರೆ ಎಂದು ದೃಡಿಕರಣ ಪತ್ರ ನೀಡಿ ಪಂಚಾಯತಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.
ಅಧಿಕಾರಿಗಳ ಯಡವಟ್ಟಿನಿಂದ ಇವರಿಗೆ ಬರಬೇಕಾದ ಮನೆ ಪರಿಹಾರ, ಜೊತೆಗೆ ತಿಂಗಳ ವೃದ್ಧಾಪ್ಯ ವೇತನ ಕೂಡ ಬಂದ್ ಆಗಿದೆ. ಸದ್ಯ ಮಹಾಂತಪ್ಪ ಯಡವಟ್ಟು ಮಾಡಿದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ದೂರು ನೀಡಿದ್ದಾರೆ. ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ನಿರ್ಲಕ್ಷದಿಂದ ಜನರ ಗತಿ ಏನಾಗತ್ತೊ ಯಾವುದು ಲೆಕ್ಕಕ್ಕೆ ಇರಲ್ಲ. ತಾವು ಮಾಡುವ ಯಡಬಿಡಂಗಿ ಕೆಲಸಕ್ಕೆ ಜನರನ್ನು ಹೈರಾಣು ಮಾಡುತ್ತಾರೆ. ಇಂತಹ ಅಧಿಕಾರಿಗಳ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇಂತಹ ಯಡವಟ್ಟುಗಳಿಗೆ ಬ್ರೇಕ್ ಹಾಕಬೇಕಿದೆ.
ವರದಿ-ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ
Published On - 3:14 pm, Sun, 13 November 22