ಕೊಪ್ಪಳ: ಅನಾರೋಗ್ಯ ನಿವಾರಣೆಗೆಂದು ಕೊಪ್ಪಳ (Koppal) ತಾಲೂಕಿನ ಗ್ರಾಮವೊಂದರ ಯುವತಿಗೆ ಕುಟುಂಬದವರೇ ದೇವದಾಸಿ (Devadasi) ಪಟ್ಟ ಕಟ್ಟಿದ ಅಮಾನವೀಯ ಪ್ರಕರಣ ಸಂಬಂಧ ಯುವತಿಯ ತಾಯಿ ಹುಲಿಗೆವ್ವ, ಯಮನೂರಪ್ಪ ಮುಂದಲಮನಿ ಮತ್ತು ಸಹೋದರಿ ಮುಖವ್ವಳನ್ನು ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ. ದೇವದಾಸಿ ಪಟ್ಟ ಕಟ್ಟಿದ ಕುರಿತು ಬೆಳಗ್ಗೆ ಟಿವಿ9 ವರದಿ ಮಾಡಿತ್ತು. ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪಳ ತಾಲೂಕಿನ ಗ್ರಾಮವೊಂದರ 21 ವರ್ಷದ ಯುವತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದಕ್ಕೆ ದೇವರ ಶಾಪವೇ ಕಾರಣ ಎಂದು ಕುಟುಂಬಸ್ಥರು ತಿಳಿಸಿದಿದ್ದರು. ಈ ಸಂಬಂಧ ದೇವದಾಸಿಯನ್ನಾಗಿ ಮಾಡಿದರೆ ಗುಣಮುಖಳಾಗುತ್ತಾಳೆ ಎಂಬ ಮೌಢ್ಯದಲ್ಲಿ ಕುಟುಂದವರು ಆಕೆಯನ್ನು ದೇವದಾಸಿಯನ್ನಾಗಿ ಮಾಡಿದ್ದಾರೆ. 7 ತಿಂಗಳ ಹಿಂದೆಯೇ ಜಿಲ್ಲೆಯ ಪ್ರಮುಖ ಹುಲಿಗೆಮ್ಮೆ ದೇವಸ್ಥಾನದಲ್ಲಿ ಯುವತಿಗೆ ಮುತ್ತು ಕಟ್ಟಿಸಲಾಗಿತ್ತು. ದೇವದಾಸಿ ಪದ್ಧತಿಯ ವಿಧಿವಿಧಾನ ಮಾಡಿಸಿರುವುದು ತಿಳಿದುಬಂದಿದೆ. ಯುವತಿಯ ನಡುವಳಿಕೆ, ವಿಚಿತ್ರ ವರ್ತನೆ ಕಂಡು ಗ್ರಾಮದ ದಲಿತ ಮುಖಂಡರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು.
ಇದನ್ನೂ ಓದಿ: 17 ವರ್ಷದ ಬಾಲಕಿಯ ಕತ್ತು ಸೀಳಿ ಹತ್ಯೆ, ಪ್ರೇಮಿಯ ಬಂಧನ
ಖಚಿತ ಮಾಹಿತಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಯುವತಿಯನ್ನು 7 ತಿಂಗಳ ಹಿಂದೆಯೇ ದೇವದಾಸಿಯನ್ನಾಗಿ ಮಾಡಿರುವ ವಿಷಯ ತಿಳಿದುಬಂದಿದೆ.
ಇದನ್ನೂ ಓದಿ: ಪ್ರೇಯಸಿಯ ಬಯಕೆ ತೀರಿಸಲು ಹೋಗಿ ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಯುವಕ
ಯುವತಿಯನ್ನು ರಕ್ಷಣೆ ಮಾಡಲಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಯುವತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಆರೈಕೆ ಮಾಡಲಾಗುತ್ತಿದೆ. ಇದೀಗ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು, ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Published On - 9:23 pm, Wed, 28 December 22