ಅಂಜನಾದ್ರಿ ದೇಗುಲ ಪೂಜಾ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು, ಸರ್ಕಾರಕ್ಕೆ ಹಿನ್ನಡೆ
ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ಥಳ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲಿಗೆ ದೇಶ ವಿದೇಶದಿಂದ ಭಕ್ತರು ಆಗಮಿಸಿ 575 ಮೆಟ್ಟಿಲೇರಿ ಹನುಮನ ದರ್ಶನ ಪಡೆಯುತ್ತಾರೆ.ಇದೀಗ ಆ ಹನುಮ ಹುಟ್ಟಿದ ಸ್ಥಳದ ಪುಜಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.ಕಳೆದ ಕೆಲ ದಿನಗಳಿಂದ ಪರ್ವತ ತೊರೆದಿದ್ದ ಅಲ್ಲಿನ ಬಾಬಾಗೆ ಮತ್ತೆಗೆ ಕೋರ್ಟ್ ಪೂಜೆಗೆ ಅವಕಾಶ ನೀಡಿದೆ.ಅಷ್ಟಕ್ಕೂ ಏನಿದು ಪೂಜಾ ವಿವಾದ ಅಂತೀರಾ ಈ ಸ್ಟೋರಿ ನೋಡಿ.

ಕೊಪ್ಪಳ, (ಅಕ್ಟೋಬರ್ 09): ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಂಜನಾದ್ರಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಕಾಯ್ದೆಯಡಿ ಸೇರಿಸಿದ್ದ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಸೂಕ್ತ ನೋಟಿಸ್ ನೀಡದೆ ಕ್ರಮ ಕೈಗೊಂಡಿದ್ದರಿಂದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಹತ್ವದ ಆದೇಶ ನೀಡಿದೆ. ಈ ಮೂಲಕ ಧಾರ್ಮಿಕ ಮಹತ್ವ ಹೊಂದಿರುವ ಅಂಜನಾದ್ರಿ ದೇಗುಲದ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಗಳಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
2018ರ ಸೆಪ್ಟೆಂಬರ್ 24ರಂದು ದೇವಸ್ಥಾನವನ್ನು ಅಧಿಸೂಚನೆಗೊಳಿಸಿ ಹೊರಡಿಸಿದ್ದ ಆದೇಶ ಹಾಗೂ ಅದೇ ವರ್ಷದ ಡಿಸೆಂಬರ್ 15ರಂದು ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ. ದೇವಸ್ಥಾನವನ್ನು ಅಧಿಸೂಚನೆಗೊಳಿಸುವ ಮೊದಲು ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡಲಾಗಿತ್ತೇ? ಅವರ ಅಭಿಪ್ರಾಯ ಹಾಗೂ ವಾದವನ್ನು ಆಲಿಸಲಾಗಿತ್ತೇ? ಎಂಬುದು ಪ್ರಕರಣದ ಪ್ರಮುಖ ವಿಚಾರವಾಗಿತ್ತು.ಸಂಬಂಧಪಟ್ಟವರ ವಾದ ಆಲಿಸದೆ ಅಧಿಸೂಚನೆ ಹೊರಡಿಸಿರುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಸೂಚನೆ ಮತ್ತು ಆಡಳಿತಾಧಿಕಾರಿ ನೇಮಕದ ಆದೇಶ ಎರಡನ್ನೂ ರದ್ದುಪಡಿಸಿದೆ.
ಇದನ್ನೂ ನೋಡಿ: ಅಂದು ವಿದ್ಯಾರ್ಥಿ, ಇಂದು ಅದೇ ಮಠಕ್ಕೆ ಪೀಠಾಧಿಪತಿ: ಅಭಿನವ ಗವಿಸಿದ್ದೇಶ್ವರ ಶ್ರೀಗಳ ಜೀವನವೇ ರೋಚಕ
ಇದೇ ವೇಳೆ, 2018ರ ಜುಲೈ 18ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರವೇ 2019ರ ಜೂನ್ 26ರಂದು ಹಿಂಪಡೆದಿತ್ತು. ಹೀಗಾಗಿ ಆ ಆದೇಶಕ್ಕೆ ಸಂಬಂಧಿಸಿದ ಅರ್ಜಿ ಈಗ ಅಪ್ರಸ್ತುತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.ವಿದ್ಯಾದಾಸಬಾಬಾ ಅವರಿಗೆ ದೇವಸ್ಥಾನದಲ್ಲಿ ಪೂಜೆ ಮತ್ತು ಅರ್ಚಕ ಕರ್ತವ್ಯ ನಿರ್ವಹಿಸಲು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಹಿಂದಿನ ಆದೇಶಗಳ ಅನ್ವಯ ಅವಕಾಶವಿದೆ ಎಂಬ ಅಂಶವನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೆ ಈ ತೀರ್ಪಿನ ಮೂಲಕ ದೇವಸ್ಥಾನದ ಮೇಲೆ ಸರ್ಕಾರಕ್ಕೆ ಯಾವುದೇ ಶಾಶ್ವತ ಹಕ್ಕಿಲ್ಲ ಎಂಬ ಅಂತಿಮ ಘೋಷಣೆ ಮಾಡಲಾಗಿದೆ ಎಂದು ಅರ್ಥೈಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಗತ್ಯವಿದ್ದಲ್ಲಿ ಸರ್ಕಾರ ಕಾನೂನು ಪ್ರಕ್ರಿಯೆ ಅನುಸರಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬಹುದು ಎಂಬುದನ್ನೂ ನ್ಯಾಯಪೀಠ ತಿಳಿಸಿದೆ. ಹೀಗಾಗಿ, ಸದ್ಯಕ್ಕೆ ಹಿಂದಿನ ಅಧಿಸೂಚನೆ ಮತ್ತು ಆಡಳಿತಾಧಿಕಾರಿ ನೇಮಕದ ಆದೇಶ ರದ್ದಾಗಿದ್ದರೂ, ಮುಂದಿನ ದಿನಗಳಲ್ಲಿ ಸರ್ಕಾರ ಕಾನೂನುಬದ್ಧವಾಗಿ ಹೊಸ ಕ್ರಮ ಕೈಗೊಳ್ಳಲು ಅವಕಾಶವಿದೆ.ಇನ್ನು ಈ ಕುರಿತು ಬಾಬಾ ಅವರಿಗೆ ಪೂಜೆಗೆ ಮಾತ್ರ ಅವಕಾಶ,ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿಯೇ ಇದೆ ಅಂತಾರೆ ಡಿಸಿ
ಒಟ್ಟಿನಲ್ಲಿ ಅಂಜನಾದ್ರಿ ದೇಗುಲದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಿಂದಿನ ಆದೇಶಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ ದೇವಸ್ಥಾನದ ಆಡಳಿತದ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಕಾನೂನುಬದ್ಧ ಅವಕಾಶವನ್ನೂ ಮುಕ್ತವಾಗಿರಿಸಿದೆ. ಈ ತೀರ್ಪಿನ ಬೆನ್ನಲ್ಲೇ ಅಂಜನಾದ್ರಿ ದೇಗುಲದ ಆಡಳಿತ ವಿಚಾರ ಮತ್ತೆ ಮಹತ್ವ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Fri, 9 October 26




