ಕೊಪ್ಪಳ: ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾಗಿರುವ ಅಪರೂಪದ ಘಟನೆಗೆ ಸಾಕ್ಷಿಯಾದ ಗಂಗಾವತಿ ನ್ಯಾಯಾಲಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2023 | 3:54 PM

ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂಬ ಮಾತಿದೆ. ಗಾದೆಯ ಸಾರದಂತೆ ಸಣ್ಣ-ಪುಟ್ಟ ಮನಃಸ್ತಾಪಗಳನ್ನ ಮನೆಯಲ್ಲೇ ಮುಗಿಸಿಕೊಳ್ಳುವ ಬದಲಿಗೆ ಈ ನಾಲ್ಕು ಜೋಡಿ, ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರು. ವಿಚ್ಚೇದನ ಕೇಳಿದ್ದ ನಾಲ್ಕು ಜೋಡಿಗಳು ಇದೀಗ ಕೋರ್ಟ್ ಆವರಣದಲ್ಲೇ ಮತ್ತೇ ಒಂದಾಗಿರುವ ಘಟನೆ ನಡೆದಿದೆ.

ಕೊಪ್ಪಳ: ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾಗಿರುವ ಅಪರೂಪದ ಘಟನೆಗೆ ಸಾಕ್ಷಿಯಾದ ಗಂಗಾವತಿ ನ್ಯಾಯಾಲಯ
ವಿಚ್ಚೇದನಕ್ಕೆಂದು ಬಂದ ಜೋಡಿಗಳು ಮತ್ತೆ ಒಂದಾಗಿರುವ ಅಪರೂಪದ ಘಟನೆ ನಡೆದಿದೆ
Follow us on

ಕೊಪ್ಪಳ: ಹೀಗೆ ಹೂ ಮಾಲೆ ಹಾಕಿಕೊಂಡು, ಕೈ ಕೈ ಹಿಡಿದು ಬರ್ತಿರೋ ಇವರು ನವ ವಿವಾಹಿತರಲ್ಲ. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರುವ ದಂಪತಿಗಳು. ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.‌ ಸಣ್ಣಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ‌ನಾಯಕಅನಸೂಯ, ವಿರೇಶಜಾನಕಮ್ಮ, ಶ್ರೀನಿವಾಸ ತುಳಸಿದೇವಿ, ನಿಂಗಪ್ಪಮಮತಾ ಗಂಗಾವತಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರು. ಸುಮಾರು ‌ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ನಾಲ್ಕು ಜೋಡಿಗಳು ಮತ್ತೇ ಒಂದಾಗಿದ್ದಾರೆ.

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರೋ ನಾಲ್ಕು ಜೋಡಿಗೆ ಕೋರ್ಟ್ ಹಾಲ್​ನಲ್ಲೇ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡ್ರು. ಸ್ವತಃ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ನಿಂತು ಮುಂದಿನ ದಿನದಲ್ಲಿ ಯಾವುದೇ ಮನಸ್ತಾಪ ಇಲ್ಲದಂತೆ ಬದುಕಿ ಎಂದು ಹಾರೈಸಿ, ಒಬ್ಬರಿಗೊಬ್ಬರಿಗೆ ಸಿಹಿ ತಿನ್ನಿಸಿ ಹಾರೈಸಿದ್ರು. ಒಂದೇ ಬಾರಿಗೆ ನಾಲ್ಕು ಜೋಡಿ ಒಂದಾದ ಅಪರೂಪದ ಘಟನೆಗೆ ಗಂಗಾವತಿಯ ಒಟ್ಟು ನಾಲ್ವರು ನ್ಯಾಯಾಧೀಶರು ಮತ್ತು ವಕೀಲರು ಸಾಕ್ಷಿಯಾದರು.

ನ್ಯಾಯಾಧೀಶರಾದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್ ಗಾಣಿಗೇರ,‌ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶ್ರೀದೇವಿ ಧರಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೌರಮ್ಮ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚ್ಚೇದನಕ್ಕೆ ಮುಂದಾಗಿದ್ದ ದಂಪತಿಗಳಿಗೆ ಬುದ್ದಿ ಮಾತು ಹೇಳುವ ಮೂಲಕ ಶುಭ ಹಾರೈಸಿದ್ರು. ಕೋರ್ಟ್ ‌ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಗೆದ್ದವ ಸೋತ,‌ ಸೋತವ ಸತ್ತ ಎಂಬ ಗಾದೆ ಜನಜನಿತ. ಆದರೆ ಈ ಲೋಕ್ ಅದಾಲತ್​ನಲ್ಲಿ ಒಂದಾದ‌ ಈ ಜೋಡಿ ಜೀವನದಲ್ಲಿ ಮತ್ತೇ ಗೆದ್ದಿದ್ದಾರೆ ಎಂದರೂ ತಪ್ಪಾಗಲಾರದು.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Sat, 11 February 23