ಕೊಪ್ಪಳ, ಮಾ.28: ಕೊಪ್ಪಳದಿಂದ ಕೇವಲ ಹದಿನೈದು ಕಿಲೋ ಮೀಟರ ದೂರದಲ್ಲಿರುವ ಬಿಸರಹಳ್ಳಿ(Bisarahalli) ಗ್ರಾಮದಲ್ಲಿ ಆರು ಸಾವಿರ ಜನಸಂಖ್ಯೆಯಿದೆ. ಇಂತಹದೊಂದು ಗ್ರಾಮದಲ್ಲಿ ಇದೀಗ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮದ ಹತ್ತಕ್ಕೂ ಹೆಚ್ಚು ವೃದ್ದರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಮುಂದೆ, ಗಾಂಧೀಜಿ ಭಾವಚಿತ್ರವನ್ನು ಇಟ್ಟುಕೊಂಡು, ಉಪವಾಸ ಸತ್ಯಾಗ್ರಹ ಕುಳಿತಿದ್ದು, ತಮ್ಮ ಜೀವ ಹೋದರೂ ಚಿಂತೆಯಿಲ್ಲ, ತಮ್ಮ ಸತ್ಯಾಗ್ರಹವನ್ನು ನಿಲ್ಲಿಸೋದಿಲ್ಲ ಎಂದು ಹೇಳುತ್ತಿದ್ದಾರೆ.
ಹೌದು, ಬಿಸರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ವಾರಕೊಮ್ಮೆ ಕೂಡ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲವಂತೆ. ಇನ್ನು ತಮಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಕೂಡ ಯಾರು ಸ್ಪಂಧಿಸುತ್ತಿಲ್ಲವಂತೆ. ಹೀಗಾಗಿ ಗ್ರಾಮದ ವೃದ್ದರು ಉಪವಾಸ ಸತ್ಯಾಗ್ರಹ ಆರಂಭಿಸಿದ್ರೆ, ವೃದ್ದರ ಹೋರಾಟಕ್ಕೆ ಗ್ರಾಮದ ಮಹಿಳೆಯರು, ಯವಕರು, ಸತ್ಯಾಗ್ರಹ ಸ್ಥಳದಲ್ಲಿ ಕೂತು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಆರ್.ಆರ್.ನಗರ ಕ್ಷೇತ್ರದಲ್ಲಿ ಕುಡಿಯೋ ನೀರಿಗೂ ಪಾಲಿಟಿಕ್ಸ್; ನೀರಿಗಾಗಿ ಬಂಗಾರಪ್ಪನಗರ ನಿವಾಸಿಗಳ ಪರದಾಟ
ಇನ್ನು ಬಿಸರಹಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿಗೆ ತತ್ವಾರ ಇದೆ. ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದರೂ ಕೂಡ ಪ್ಲೋರೈಡ್ ನೀರು ಬರುತ್ತಿದೆ. ಹೀಗಾಗಿ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲವಂತೆ. ಹೀಗಾಗಿ ಈ ಹಿಂದೆ ಗ್ರಾಮಸ್ಥರು ಅನೇಕ ಬಾರಿ ನೀರಿಗಾಗಿ ಹೋರಾಟ ಮಾಡಿದ್ದರು. ನಂತರ ಎಚ್ಚೆತ್ತಿದ್ದ ಅಧಿಕಾರಿಗಳು, ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗಾಗಿಯೇ ಅನೇಕ ಕಾಮಗಾರಿಗಳನ್ನು ಮಾಡಿದ್ದಾರೆ. ಇನ್ನು ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿಯೇ ಮೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. 2019 ರಲ್ಲಿಯೇ ತುಂಗಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಕಾಮಗಾರಿ ಮಾಡಲಾಗಿದೆ. ಜೊತೆಗೆ ಕಳೆದ ವರ್ಷ ಕೂಡ ಮನೆ ಮನೆಗೆ ಗಂಗೆ ಹೆಸರಲ್ಲಿ ಜಲಜೀವನ ಮಿಷನ್ ಅಡಿ ಕಾಮಗಾರಿ ಮಾಡಲಾಗಿದೆ. ಆದ್ರೆ, ಕಳಪೆ ಕಾಮಗಾರಿಯಿಂದಾಗಿ ನೀರು ಪೂರೈಕೆ ಯೋಜನೆಗಳು ಸರಿಯಾಗಿ ಅನುಷ್ಟಾನವಾಗಿಲ್ಲವಂತೆ.
ಇನ್ನು ತುಂಗಭದ್ರಾ ಜಲಾಶಯದಿಂದ ಗ್ರಾಮದ ಕೆಲವಡೇ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಕೂಡ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆಯಂತೆ. ಅದರಲ್ಲೂ ಕಳೆದ ಮೂರು ತಿಂಗಳಿಂದ ಸರಿಯಾಗಿ ನೀರು ಬರುತ್ತಿಲ್ಲ. ಬಿರುಬಿಸಿಲಿನ ನಾಡಾದ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಎಷ್ಟು ನೀರು ಕುಡಿದರೂ ಕೂಡ ದಾಹ ಕಡಿಮೆಯಾಗುತ್ತಿಲ್ಲ. ಆದ್ರೆ, ಕುಡಿಯುವ ನೀರಿಗಾಗಿಯೇ ಬಿಸರಹಳ್ಳಿ ಗ್ರಾಮದ ಜನರು ಪರದಾಡುತ್ತಿದ್ದರು ಕೂಡ ಯಾರು ಸ್ಪಂಧಿಸುತ್ತಿಲ್ಲವಂತೆ. ಹೀಗಾಗಿ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹ ನಡಸಬೇಕಾದ ದುಸ್ಥಿತಿ ಬಂದಿದೆ. ತಮ್ಮ ಜೀವ ಹೋದ್ರು ಚಿಂತೆಯಿಲ್ಲ. ನೀರು ಬರೋವರಗೆ ಯಾವುದೇ ಕಾರಣಕ್ಕೂ ಕೂಡ ಉಪವಾಸ ಸತ್ಯಾಗ್ರಹ ನಿಲ್ಲಿಸೋದಿಲ್ಲ ಎಂದು ಉಪವಾಸ ಸತ್ಯಾಗ್ರಹಕ್ಕೆ ಕೂತಿರುವ ವೃದ್ದರು ಹೇಳುತ್ತಿದ್ದಾರೆ.
ಸದ್ಯ ನೀರು ಪೂರೈಕೆಗೆ ಬಳಸಲಾಗುತ್ತಿದ್ದ ಮೋಟರ್ ರಿಪೇರಿಗೆ ಬಂದಿದ್ದರಿಂದ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ಆದಷ್ಟು ಬೇಗನೆ ನೀರು ಪೂರೈಕೆ ಮಾಡ್ತೇವೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ಆದ್ರೆ, ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ ಎಂದು ಹೇಳುವ ಅಧಿಕಾರಿಗಳು, ಅನೇಕ ಕಡೆ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದರು ಕೂಡ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇನ್ನಾದರೂ ನೀರು ಪೂರೈಕೆಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ