ಆರ್.ಆರ್.ನಗರ ಕ್ಷೇತ್ರದಲ್ಲಿ ಕುಡಿಯೋ ನೀರಿಗೂ ಪಾಲಿಟಿಕ್ಸ್; ನೀರಿಗಾಗಿ ಬಂಗಾರಪ್ಪನಗರ ನಿವಾಸಿಗಳ ಪರದಾಟ
ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಆರ್.ಆರ್. ನಗರದಲ್ಲಿ ನೀರಿನ ವಿಷಯದಲ್ಲೂ ರಾಜಕೀಯದ ಹೊಗೆಯಾಡ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಹನಿ ನೀರಿಗಾಗಿಯೂ ಇಲ್ಲಿ ಜನ ಪರದಾಡುತ್ತಿದ್ದಾರೆ. ಯಾವ ಪಕ್ಷವದರೂ ಸರಿ ನೀರು ಕೊಡಿ ಎಂದು ಬೇಡುತಿದ್ದಾರೆ.
ಬೆಂಗಳೂರು, ಮಾರ್ಚ್.03: ನೀರಿಲ್ಲ…ನೀರಿಲ್ಲ…ರಾಜ್ಯ ರಾಜಧಾನಿಯ ಯಾವುದೇ ಮೂಲೆಗೆ ಎಂಟ್ರಿಯಾದ್ರೂ ಇದೊಂದೇ ಶಬ್ದ ಕೇಳ್ತಿದೆ. ಬೇಸಿಗೆ ಆರಂಭದಲ್ಲೇ ಬೆಂದಕಾಳೂರಿನ ಜನ ಜಲಕ್ಷಾಮದಿಂದ ಬೆಂದುಹೋಗ್ತಿದ್ದು, ನೀರಿನ ಹಾಹಾಕಾರವನ್ನ (Drinking Water Crisis) ಟಿವಿ 9 ನಿರಂತರವಾಗಿ ಅನಾವರಣ ಮಾಡ್ತಿದೆ. ನೀರಿನ ಹಾಹಾಕಾರದ ಮಧ್ಯೆ ಮುನಿರತ್ನ ಕ್ಷೇತ್ರ ಆರ್.ಆರ್. ನಗರದಲ್ಲಿ ನೀರಿನ ವಿಷಯದಲ್ಲೂ ರಾಜಕೀಯದ ಹೊಗೆಯಾಡ್ತಿದೆ. ನೀರಿಗಾಗಿ ಜನ ಪರಿತಪಿಸುತ್ತಿದ್ರೆ, ಅತ್ತ ರಾಜಕೀಯ ನಾಯಕರ ಕೆಸರೆರಚಾಟ ಜನರಿಗೆ ಸಂಕಷ್ಟ ತಂದಿಟ್ಟಿದೆ.
ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ನೀರಿನ ಅಭಾವ ಎದುರಾಗಿದೆ. ಆರ್.ಆರ್.ನಗರ ವಿಧಾನಸಭಾಕ್ಷೇತ್ರದ ಬಂಗಾರಪ್ಪನಗರದ ಜನರು ನೀರಿಗಾಗಿ ಪರದಾಡೋ ಸ್ಥಿತಿ ನಿರ್ಮಾಣವಾಗಿದ್ದು, ನೀರಿಲ್ಲದೇ ಜನರು ಹೈರಾಣಾಗಿದ್ದಾರೆ. ಎರಡ್ಮೂರು ದಿನಕ್ಕೊಮ್ಮೆ ಟ್ಯಾಂಕರ್ ಬಂದ್ರೂ ಕೂಡ ನೀರು ಸಿಗದೇ ಜನರು ಹೈರಾಣಾಗಿದ್ದು, ಯಾವ ಮನೆ ಮುಂದೆ ಹೋದರು ದೊಡ್ಡ ದೊಡ್ಡ ಡ್ರಮ್ ಗಳು, ಖಾಲಿ ಬಿಂದಿಗೆ,ಬಕೆಟ್ ಗಳು ಕಾಣ ಸಿಗುತ್ತಿವೆ.
ಇನ್ನು ಈ ಏರಿಯಾದಲ್ಲಿ ಜಲಮಂಡಳಿಯ ಟ್ಯಾಂಕರ್ ನೀರು ಪೂರೈಕೆಮಾಡ್ತಿದೆ, ಆದ್ರೆ ಟ್ಯಾಂಕರ್ ನೀರು ಕೂಡ ಜನರಿಗೆ ಸರಿಯಾಗಿ ತಲುಪದೇ ಇರೋದು ನೀರಿಗಾಗಿ ಬೀದಿಯಲ್ಲಿ ಮಹಿಳೆಯರು ಕಚ್ಚಾಡುವ ಸ್ಥಿತಿ ತಂದಿಟ್ಟಿದೆ. ಇತ್ತ ಬಿಜೆಪಿ ಶಾಸಕ ಮುನಿರತ್ನ ಟ್ಯಾಂಕರ್ ಮೂಲಕ ಪ್ರತ್ಯೇಕವಾಗಿ ಉಚಿತ ನೀರು ಕೊಡ್ತಿದ್ರು, ಅದು ಕೂಡ ಸಾಕಾಗದೇ ಜನ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಬರ ಹೆಚ್ಚಾಗಬಹುದು: ಕುಡಿಯುವ ನೀರು, ಮೇವು ಸಿದ್ಧತೆಗೆ ಡಿಸಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ನೀರಿನ ಸಮಸ್ಯೆ ಮಧ್ಯೆ ನೀರಿಗಾಗಿ ಪಾಲಿಟಿಕ್ಸ್ ನಡೀತಿರೋ ಆರೋಪ ಕೂಡ ಕೇಳಿಬರ್ತಿದೆ. ಊರಿನ ಹೃದಯಭಾಗದಲ್ಲಿ ಶಾಸಕರ ಅನುದಾನದಿಂದ ಬೋರ್ ಕೊರೆಸಿದ್ದಾರೆ, ಬೋರ್ ವೆಲ್ ನಲ್ಲಿ ನೀರು ಬಂದ್ರೂ ಕೂಡ ಕೆಲ ವಿಪಕ್ಷ ನಾಯಕರು ಮೋಟಾರ್ ಹಾಕೋಕೆ ಅಡ್ಡಿಪಡಿಸ್ತಿದ್ದಾರೆ ಅಂತಾ ಜನರು ಆರೋಪಿಸ್ತಿದ್ದಾರೆ. ನಮಗೆ ರಾಜಕೀಯ ಬೇಡ ನೀರು ಕೊಡಿ ಸ್ವಾಮಿ ಅಂತಾ ಅಂಗಲಾಚುತ್ತಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಬರೋ ಅಲ್ಪಸ್ವಲ್ಪ ಟ್ಯಾಂಕರ್ ನೀರಿನಲ್ಲೇ ಜೀವನ ಸಾಗಿಸ್ತಿರೋ ಬಂಗಾರಪ್ಪನಗರದ ಜನರು, ನೀರಿನಲ್ಲೂ ರಾಜಕೀಯ ಬಣ್ಣ ಬೆರೆತಿರೋದಕ್ಕೆ ಸುಸ್ತಾಗಿದ್ದಾರೆ. ಯಾರಾದ್ರೂ ಸರಿ ನಮಗೆ ಪಕ್ಷ ಬೇಡ ನೀರು ಕೊಡಿ ಅಂತಾ ಆಗ್ರಹಿಸ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ