ಶಾಲಾ ಶುಲ್ಕ, ಮದುವೆ ಹಣ ಕೊನೆಗೆ ತಿಮ್ಮಪ್ಪನ ಹುಂಡಿಗೆ ಇಟ್ಟಿದ್ದ ಹಣವನ್ನೂ ಕಳ್ಳರು ದೋಚಿದರು!

| Updated By: ಸಾಧು ಶ್ರೀನಾಥ್​

Updated on: Mar 20, 2024 | 2:12 PM

ಕೊಪ್ಪಳ ನಗರದಲ್ಲಿ ಸರಣಿ ಕಳ್ಳತನ- ರೋಡ್ ಗೋಲ್ಡ್ ಬಂಗಾರದ ಆಭರಣ ಬಿಟ್ಟು, ಅಸಲಿ ಚಿನ್ನಾಭರಣ ಮಾತ್ರ ಕದ್ದ ಕಳ್ಳರು, ಮಕ್ಕಳ ಶಾಲೆ ಫೀಸ್ ಗೆ ಇಟ್ಟಿದ್ದ ಹಣ, ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಇಟ್ಟಿದ್ದ ಹಣ ಕೂಡಾ ಕಳ್ಳರ ಪಾಲು!

ಶಾಲಾ ಶುಲ್ಕ, ಮದುವೆ ಹಣ ಕೊನೆಗೆ ತಿಮ್ಮಪ್ಪನ ಹುಂಡಿಗೆ ಇಟ್ಟಿದ್ದ ಹಣವನ್ನೂ ಕಳ್ಳರು ದೋಚಿದರು!
ಶಾಲಾ ಶುಲ್ಕ, ಮದುವೆ ಹಣ, ತಿಮ್ಮಪ್ಪನ ಹುಂಡಿಗೆ ಇಟ್ಟಿದ್ದ ಹಣ ದೋಚಿದ ಕಳ್ಳರು
Follow us on

ಕೊಪ್ಪಳ, ಮಾರ್ಚ್​​ 20: ಆ ದಂಪತಿ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಅಂತ ಕನಸು ಕಂಡಿದ್ದರು. ಅದಕ್ಕಾಗಿ ತಮ್ಮ ದುಡಿಮೆಯ ಹಣವನ್ನು ಪ್ರತಿನಿತ್ಯ ಸಂಗ್ರಹಿಸಿಟ್ಟಿದ್ದರು. ಆದ್ರೆ ಮಕ್ಕಳ ಶಾಲೆ ಫೀಸ್ ಕಟ್ಟಲು ಇಟ್ಟಿದ್ದ ಹಣ ಸೇರಿದಂತೆ ಸಂಬಂಧಿಗಳ ಮದುವೆಗೆ ಇಟ್ಟಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ದೋಚಿಸಿದ್ದಾರೆ. ಅಚ್ಚರಿ ಎಂದರೆ ಮನೆಯಲ್ಲಿ ರೋಲ್ಡ್​​ ಗೋಲ್ಡ್ ಬಂಗಾರ ಇದ್ದರೂ, ಅದನ್ನು ಮುಟ್ಟದೆ, ಅಸಲಿ ಚಿನ್ನವನ್ನು ಮಾತ್ರ ಕದ್ದೊಯ್ದಿದ್ದಾರೆ. ಚಿನ್ನಾಭರಣ, ಹಣ ಕಳೆದುಕೊಂಡ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಕಳೆದ ರಾತ್ರಿ ಕೊಪ್ಪಳ ನಗರದ ಭಾಗ್ಯ ನಗರದ ವಿವಿಧಡೆ ಮೂರು ಮನೆಗಳಲ್ಲಿ ಕಳ್ಳತನವಾಗಿದ್ದು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಒಂದೇ ರಾತ್ರಿ ಮೂರು ಕಡೆ ಮನೆಗಳ್ಳತನ, ಕುಟುಂಬಗಳು ಕಂಗಾಲು
ಹೌದು ಕಳೆದ ರಾತ್ರಿ ಕೊಪ್ಪಳ ನಗರದ ಭಾಗ್ಯ ನಗರದ ವ್ಯಾಪ್ತಿಯಲ್ಲಿರುವ ಕೀರ್ತಿ ನಗರ, ಧ್ವನ್ವಂತರಿ ಕಾಲೋನಿಯಲ್ಲಿ ಕಳ್ಳತನ ನಡೆದಿದೆ. ಆದ್ರೆ ಕೀರ್ತಿ ನಗರದಲ್ಲಿರುವ ಆಧಿರಾಜ್ ಬಾವಿಕಟ್ಟಿ ಮನೆಯಲ್ಲಿ ನೂರು ಗ್ರಾಂ ಚಿನ್ನಾಭರಣ, ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ನಗದು, ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಹೌದು ಬಾವಿಕಟ್ಟಿ ದಂಪತಿ ತಮ್ಮ ಮನೆಯಲ್ಲಿ ರಾತ್ರಿ ಕೂಲರ್ ಹಾಕಿಕೊಂಡು ಮಲಗಿದ್ದರು. ಆದ್ರೆ ಹಿಂಬಾಗಿಲ ಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು, ಅಲಮಾರಿಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದೊಯ್ದಿದ್ದಾರೆ. ಬಾವಿಕಟ್ಟಿ ದಂಪತಿಗೆ ಮೂರು ಮಕ್ಕಳಿದ್ದು, ಅವರ ಶಿಕ್ಷಣಕ್ಕೆ ಕಳೆದ ಕೆಲ ವರ್ಷಗಳಿಂದ ಪಿಗ್ಗಿ ಬಾಕ್ಸ್ ನಲ್ಲಿ ಪ್ರತಿನಿತ್ಯ ಹಣ ಹಾಕುತ್ತಿದ್ದರಂತೆ. ಜೊತೆಗೆ ಸಂಬಂಧಿಯ ಮದುವೆಗಾಗಿ ಪರಿಚಿತರಿಂದ ಆರವತ್ತು ಸಾವಿರ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರಂತೆ.

ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಕೂಡಾ ಒಂದು ಬಾಕ್ಸ್ ನಲ್ಲಿ ಹಣ ಸಂಗ್ರಹಿಸಿದ್ದರಂತೆ. ಆದ್ರೆ ಮನೆಯ ಹಾಲ್ ನಲ್ಲಿ ದಂಪತಿ ಮಲಗಿದ್ದರೂ ಕೂಡಾ, ಅವರಿಗೆ ಗೊತ್ತಾಗದಂತೆ ಕಳ್ಳರು, ಇಡೀ ಮನೆಯನ್ನು ಗುಡಿಸಿಗುಂಡಾಂತರ ಮಾಡಿ ಹೋಗಿದ್ದಾರೆ. ಅಚ್ಚರಿಯಂದ್ರೆ, ಮನೆಯಲ್ಲಿರುವ ಹಣ ಮತ್ತು ಅಸಲಿ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಕಳ್ಳರು, ಅಲ್ಲಿಯೇ ರೋಡ್ ಗೋಲ್ಡ್ ಆಭರಣಗಳು ಕಂಡರೂ ಕೂಡಾ, ಅವುಗಳಲ್ಲಿ ಯಾವುದನ್ನೂ ಮುಟ್ಟದೇ, ಅಸಲಿ ಚಿನ್ನಾಭರಣಗಳನ್ನು ಮಾತ್ರ ಕದ್ದೊಯ್ದಿರುವುದು ಅಚ್ಚರಿಯ ಜೊತೆಗೆ ಶಾಕ್ ತರಿಸಿದೆ.

ಇನ್ನು ಧ್ವನಂತರಿ ಕಾಲೋನಿಯಲ್ಲಿ ಜಯಮ್ಮ ಅನ್ನೋರ ಮನೆಯಲ್ಲಿ ಕೂಡಾ ಕಳ್ಳತನವಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಕುಟುಂಬದವರು ಮನೆಯ ಮಹಡಿ ಮೇಲೆ ಮಲಗಿದ್ದರಂತೆ. ಹೀಗಾಗಿ ಸುಲಭವಾಗಿ ಮನೆಯ ಬಾಗಿಲು ಮುರಿದು ಒಳನುಗ್ಗಿರೋ ಕಳ್ಳರು, ಮನೆಯಲ್ಲಿದ್ದ ಹತ್ತು ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ. ಇನ್ನು ಪಾಂಡುರಂಗ ಹೊಸಮನಿ ಅನ್ನೋರ ಮನೆಯಲ್ಲಿ ಕೂಡಾ ಕಳ್ಳರು ಮನೆಯೊಳಗೆ ನುಗ್ಗಿ, ಮನೆಯಲ್ಲಿದ್ದ ಮೂವತ್ತು ಗ್ರಾಂ ಚಿನ್ನಾಭರಣ ಮತ್ತು ಹತ್ತು ಸಾವಿರ ನಗದು ಕದ್ದೊಯ್ದಿದ್ದಾರೆ.

ಮನೆಯಲ್ಲಿ ಆರಾಮಾಗಿ ಕೂತು, ಮನೆಯನ್ನೆಲ್ಲಾ ಜಾಲಾಡಿ ಚಿನ್ನಾಭರಣ, ಹಣವನ್ನು ಕದ್ದೊಯ್ದಿರುವ ಕಳ್ಳರು, ಮನೆಯಲ್ಲಿಯೇ ನೀರು ಕುಡಿದು ಹೋಗಿದ್ದಾರೆ. ಇನ್ನು ಮೂರೂ ಕುಟುಂಬಗಳು ಕೂಡಾ ಸಣ್ಣಪುಟ್ಟ ಕೆಲಸವನ್ನು ಮಾಡಿ ಜೀವನ ಕಟ್ಟಿಕೊಂಡಿದ್ದವು. ಮನೆಯಲ್ಲಿಯೇ ಇದ್ದರು ಕೂಡಾ ಕಳ್ಳರು ನುಗ್ಗಿ ಮನೆಗಳ್ಳತನ ಮಾಡಿಕೊಂಡು ಹೋಗಿದ್ದಾರೆ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ, ತಮ್ಮ ಚಿನ್ನಾಭರಣ ಮತ್ತು ಹಣವನ್ನು ಮರಳಿ ಕೊಡಿಸುವ ಕೆಲಸ ಮಾಡಬೇಕು ಅಂತ ಮೂರು ಕುಟುಂಬದವರು ಆಗ್ರಹಿಸಿದ್ದಾರೆ.

ಸದ್ಯ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮೂರು ಕಡೆ ಮನೆಗಳ್ಳತನ ಪ್ರಕರಣದ ಬಗ್ಗೆ ದೂರು ದಾಖಲಾಗಿದೆ. ಆದ್ರೆ ಕಳೆದ ಕೆಲ ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳ್ಳರು ಪತ್ತೆಯಾಗದೇ ಇರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಂಡು, ಕಳ್ಳರನ್ನು ಪತ್ತೆ ಮಾಡುವ ಕೆಲಸ ಮಾಡುವುದರ ಜೊತೆಗೆ, ಮುಂದೆ ಕಳ್ಳತನ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.