ಕೊಪ್ಪಳ, ಏ.18: ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಕರಡಿ ದಾಳಿಗೆ ತುತ್ತಾಗಿದ್ದ ವೃದ್ದನೋರ್ವ ಮೃತಪಟ್ಟರೆ, ಇನ್ನು ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಕಳೆದ ರಾತ್ರಿ ಕರಡಿ ನುಗ್ಗಿದೆ. ದೇವಸ್ಥಾನದಲ್ಲಿರುವ ದೀಪದ ಎಣ್ಣೆ ಮತ್ತು ಕುಡಿಯುವ ನೀರಿನ ಉದ್ದೇಶದಿಂದ ಕರಡಿ ಬಂದಿದೆ. ಆದ್ರೆ, ದೇವಸ್ಥಾನದೊಳಗೆ ಕರಡಿ ಇದ್ದಿದ್ದನ್ನು ಇಂದು ಮುಂಜಾನೆ ಗಮನಿಸಿದ ಗ್ರಾಮದ ಜನರು, ದೇವಸ್ಥಾನದ ಬಾಗಿಲು ಹಾಕಿ ಕರಡಿಯನ್ನು ಕೂಡಿ ಹಾಕಿದ್ದರು.
ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದರು. ಆದ್ರೆ, ಇದೇ ಸಮಯದಲ್ಲಿ ದೇವಸ್ಥಾನದ ಕಬ್ಬಿಣದ ಗ್ರಿಲ್ ಮುರಿದು ಹೊರಗೆ ಬಂದ ಕರಡಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದೆ. ಈ ಸಮಯದಲ್ಲಿ ದಾರಿಯಲ್ಲಿ ಬಂದಿದ್ದ ವೃದ್ದನ ಮೇಲೆ ಕರಡಿ ದಾಳಿ ಮಾಡಿದೆ. ಘಟನೆಯಲ್ಲಿ ರಾಂಪುರ ಗ್ರಾಮದ ಚನ್ನಪ್ಪ ಮಡಿವಾಳರ(74) ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ದ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಹರಪ್ಪನಹಳ್ಳಿ: ಯುವಕನ ಮೇಲೆ ಎರಡು ಕರಡಿಗಳಿಂದ ದಾಳಿ, ಗಂಭೀರ ಗಾಯ
ಇನ್ನು ರಾಂಪುರ ಗ್ರಾಮದಲ್ಲಿ ಕರಡಿ ದಾಳಿಗೆ ವೃದ್ದ ಬಲಿಯಾಗಲು ಅರಣ್ಯ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಸಲಕರಣೆಗಳು ಇಲ್ಲದೇ ಬಂದಿದ್ದರು. ಅವರು ಸರಿಯಾಗಿ ಬೋನು ಇಟ್ಟು ಕರಡಿ ಹಿಡದಿದ್ದರೆ ವೃದ್ದನ ಪ್ರಾಣ ಹೋಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಪ್ಪಳ ತಾಲೂಕಿನ ನಾಗೇಶನಹಳ್ಳಿಯಲ್ಲಿ ಕೂಡ ಕಳೆದ ರಾತ್ರಿ ಒಂದೇ ಕುಟುಂಬದ ಮೂವರ ಮೇಲೆ ಕರಡಿ ದಾಳಿ ನಡೆದಿರುವ ಪ್ರಕರಣ ನಡೆದಿದೆ. ನಾಗೇಶನಹಳ್ಳಿ ಗ್ರಾಮದ ಈರಪ್ಪ, ಹೇಮವ್ವ, ಗೌತಮಿ ಎನ್ನುವವರ ಮೇಲೆ ಕರಡಿ ದಾಳಿ ನಡೆದಿದೆ. ಈರಪ್ಪ ಅವರ ನಿವಾಸ, ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿದೆ. ಜಮೀನಿನಲ್ಲಿದ್ದ ತಮ್ಮ ಮನೆಗೆ ಈರಪ್ಪ, ತಮ್ಮ ಕುಟುಂಬದವರನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗ, ಕರಡಿ ದಾಳಿ ಮಾಡಿದೆ. ಕರಡಿ ದಾಳಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಮೂವರನ್ನು ಕೂಡ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಹಲವಡೆ ಕರಡಿಗಳ ಸಂಖ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿರುವ ಕಲ್ಲಿನ ಬೆಟ್ಟಗುಡ್ಡಗಳು, ಕರಡಿಗಳ ವಾಸ್ತವ್ಯಕ್ಕೆ ಸೂಕ್ತ ಸ್ಥಳವಾಗಿದೆ. ಹೀಗಾಗಿ ಹೆಚ್ಚಿನ ಕರಡಿಗಳು ಜಿಲ್ಲೆಯಲ್ಲಿ ಕಂಡು ಬರ್ತಿವೆ. ಆದ್ರೆ, ಇದೀಗ ಬೇಸಿಗೆ ಆರಂಭವಾಗಿರೋದರಿಂದ ಅರಣ್ಯದಲ್ಲಿ ಕರಡಿಗಳಿಗೆ ಆಹಾರ ಮತ್ತು ನೀರು ಸಿಗುತ್ತಿಲ್ಲ. ಹೀಗಾಗಿ ಕರಡಿಗಳು ಆಹಾರ ಮತ್ತು ನೀರು ಅರಸಿಕೊಂಡು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಕೆಲವಡೇ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ಆದರೂ ಕೂಡ ಕೆಲವೆಡೆ ಕರಡಿಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡೋದಾಗಿ ಕೂಡ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Thu, 18 April 24