ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟ ಜಾಂಬವಂತ! ಬೆಚ್ಚಿಬಿದ್ದ ಜನ, ಓರ್ವನ ಮೇಲೆ ದಾಳಿ, ಕೊನೆಗೂ ಬಲೆಗೆ ಬಿದ್ದ ಕಿಲಾಡಿ ಕರಡಿ
Bear in Shivamogga: ಕರಡಿಯು ನಗರದಲ್ಲಿ ಬಿಂದಾಸ್ ಆಗಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕರಡಿಯನ್ನು ನೋಡಿದ ನಾಯಿಗಳು ಅದನ್ನು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ಬಡಾವಣೆಯ ಡಿವಿಜಿ ಪಾರ್ಕ್ ಮುಂಭಾಗದ ಖಾಲಿ ನಿವೇಶನದಲ್ಲಿ ಅವಿತು ಕುಳಿತುಕೊಂಡಿತ್ತು.
ಕಾಡಿನಿಂದ ನೇರವಾಗಿ ಶಿವಮೊಗ್ಗ ಸ್ಮಾರ್ಟ್ ನಗರಕ್ಕೆ ಕರಡಿಯೊಂದು ಬುಧವಾರ ಬೆಳಗ್ಗೆ ಎಂಟ್ರಿ ಕೊಟ್ಟಿತ್ತು. ವಾಕಿಂಗ್ ಮಾಡುತ್ತಿದ್ದ ಜನರಿಗೆ ಕರಡಿ ಕಂಡು ಬಿಗ್ ಶಾಕ್ ಆಗಿದೆ. ಆ ಕರಡಿಯು ಅಷ್ಟೇ… ನಾಡಿನ ಜನರನ್ನು ಕಂಡು ಗಾಬರಿಯಿಂದ ಅಲ್ಲಿ ಇಲ್ಲಿ ರಸ್ತೆಯಲ್ಲಿ ಓಡಾಡುತ್ತಿತ್ತು. ನಾಯಿಗಳು ಕರಡಿಯ ಬೆನ್ನು ಬಿದ್ದಿದ್ದವು.. ದಿಕ್ಕುತಪ್ಪಿದ ಕರಡಿಯು ಓರ್ವ ನ ಮೇಲೆ ಅಚಾನಕ್ಕಾಗಿ ದಾಳಿ ಮಾಡಿ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ನಗರದಲ್ಲಿ ಕರಡಿ ಆಪರೇಶನ್ ಹೇಗಿತ್ತು ಅಂತೀರಾ? ಈ ಸ್ಟೋರಿ ನೋಡಿ…
ಶಿವನೊಗ್ಗ ನಗರದದ ಗೋಪಾಳಗೌಡ ಬಡಾವಣೆಯಲ್ಲಿ ಜನರು ಬೆಳಗ್ಗೆ ವಾಕಿಂಗ್ ಮತ್ತು ನಿತ್ಯದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ನಗರಕ್ಕೆ ಹತ್ತಿರದಲ್ಲಿರುವ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕರಡಿಯು ಎಂಟ್ರಿ ಕೊಟ್ಟಿತ್ತು. ಬಡಾವಣೆಯ ಮುಖ್ಯ ರಸ್ತೆಯಲ್ಲಿ ಕರಡಿಯು ಓಡಾಡಿದೆ. ಈ ಕರಡಿ ನೋಡಿದ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ. ಕಾಡಿನಿಂದ ಕಾಡು ಪ್ರಾಣಿ ನಗರಕ್ಕೆ ಹೇಗೆ ಬಂತು ಅಂತಾ ಬೆರಗಾಗಿದ್ದಾರೆ. ಕೂಡಲೇ ಕೆಲವರು ಬಡಾವಣೆಗೆ ಕರಡಿ ಬಂದಿರುವ ಮಾಹಿತಿಯನ್ನು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹತ್ತಿರದಲ್ಲೇ ಶಂಕರ ವಲಯ ಅರಣ್ಯ ಕಚೇರಿ ಇದೆ. ವಲಯ ಅರಣ್ಯಾಧಿಕಾರಿ ಶಿವಶಂಕರ್ ಮತ್ತು ಪಶುವೈದ್ಯ ಡಾ. ವಿನಯ ನೇತೃತ್ವದಲ್ಲಿ ಕರಡಿ ಹಿಡಿಯಲು ಆಪರೇಶ್ ಗೆ ಮುಂದಾಗಿದ್ದರು. ಅರಣ್ಯ ಅಧಿಕಾರಿಗಳು ಬರುವಷ್ಟರಲ್ಲೇ ವಾಕಿಂಗ್ ಗೆ ತೆರಳಿದ್ದ ತುಕಾರಾಮ್ ಶೆಟ್ಟಿ ಎಂಬುವವರ ಮೇಲೆ ಕರಡಿ ದಾಳಿ ಮಾಡಿತ್ತು. ಇದರಿಂದ ಬಡಾವಣೆಯ ಜನರು ಭಯಭೀತರಾಗಿದ್ದರು.
ಕರಡಿಯು ನಗರದಲ್ಲಿ ಬಿಂದಾಸ್ ಆಗಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕರಡಿಯನ್ನು ನೋಡಿದ ನಾಯಿಗಳು ಅದನ್ನು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ಬಡಾವಣೆಯ ಡಿವಿಜಿ ಪಾರ್ಕ್ ಮುಂಭಾಗದ ಖಾಲಿ ನಿವೇಶನದಲ್ಲಿ ಅವಿತು ಕುಳಿತುಕೊಂಡಿತ್ತು.
ಈ ನಡುವೆ ಸುಮಾರು 20 ರಿಂದ 25 ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಎಂಟ್ರಿಕೊಟ್ಟರು. ದೊಡ್ ಡೊಡ್ಡ ಬಲೆ, ಬೋನ್ ಮತ್ತು ಅರಿವಳಿಕೆ ಚುಚ್ಚುಮದ್ದು ನೀಡಲು ಪಶು ವೈದ್ಯ ಡಾ. ವಿನಯ ತಂಡದಲ್ಲಿದ್ದರು. ನೂರಾರು ಜನರು ಕಟ್ಟಡ ಮತ್ತು ಕರಡಿ ಅವಿತ ಸ್ಥಳದ ಸುತ್ತಮುತ್ತ ಜಮಾ ಆಗಿದ್ದರು. ಜನರು ಕರಡಿಯನ್ನು ಕುತೂಹಲದಿಂದ ನೋಡುತ್ತಿದ್ದರು. ಮತ್ತೆ ಕೆಲವರು ತಮ್ಮ ತಮ್ಮ ಮೊಬೈಲ್ ನಲ್ಲಿ ಅದನ್ನು ಸೆರೆ ಹಿಡಿಯುತ್ತಿದ್ದರು.
ಇದೇ ವೇಳೆ ಕರಡಿ ಆಪರೇಶನ್ ಶುರುವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಕರಡಿ ಸೆರೆ ಆಪರೇಶನ್ ಅದಾಗಿತ್ತು. ಕಾಡು ಪ್ರಾಣಿಯಾಗಿದ್ದರಿಂದ ಕರಡಿಯು ಬಲಿಷ್ಠವಾಗಿತ್ತು. ಮೊದಲು ಪ್ರಯತ್ನದಲ್ಲಿ ಕರಡಿಯು ಅರಣ್ಯ ಅಧಿಕಾರಿಗಳ ಬಲೆಗೆ ಬೀಳದೇ ತಪ್ಪಿಸಿಕೊಂಡು ಹೋಯ್ತು. ಅರಣ್ಯ ಸಿಬ್ಬಂದಿಯ ಮೇಲೆ ದಾಳಿಗೆ ಕರಡಿಯು ಮುಂದಾಗಿತ್ತು.
Also Read: ಸಹ ವ್ಯಾಪಾರಿಯೇ ಒಂಟಿ ಮನೆ ದರೋಡೆ ಮಾಡಲು ಮೋಸ್ಟ್ ವಾಂಟೆಡ್ ಗ್ಯಾಂಗ್ಗೆ ಸುಪಾರಿ ನೀಡಿದ್ದ!
ಬಲೆಗೆ ಬಿದ್ದು, ಬಳಿಕ ಮತ್ತೆ ತಪ್ಪಿಸಿಕೊಂಡು ಖಾಲಿ ಸೈಟ್ ನ ಮೂಲೆಯ ಪೊದೆಯಲ್ಲಿ ಕುಳಿತಿತ್ತು. ಮೊದಲ ಬಾರಿ ಗನ್ ಮೂಲಕ ಶೂಟ್ ಮಾಡಿ ಡಾ. ವಿನಯ ಅರಿವಳಿಕೆ ಚುಚ್ಚುಮದ್ದು ನೀಡಿದ್ದು ಪ್ರಯೋಜನವಾಗಲಿಲ್ಲ. ಮತ್ತೆ ಎರಡನೇ ಬಾರಿ ಗನ್ ಮೂಲಕ ಕರಡಿಗೆ ಚುಚ್ಚುಮದ್ದು ನೀಡಿದ್ರೂ ಅದು ಕೂಡಾ ಪ್ರಯೋಜನವಾಗಿಲ್ಲ. ಬಳಿಕ ಮೂರನೇ ಬಾರಿ ಹತ್ತಿರದಿಂದ ಕರಡಿಗೆ ಚುಚ್ಚುಮದ್ದು ಶೂಟ್ ಮಾಡಿದ್ದು ಸರಿಯಾಗಿ ಕರಡಿಯ ದೇಹದೊಳಗೆ ಅರಿವಳಿಕೆಯ ಔಷಧ ಹೋಗಿತ್ತು.
ಅದಾದಮೇಲೆ ಕರಡಿಯ ಆರ್ಭಟ ಮತ್ತು ಓಡಾಟ ಕಡಿಮೆ ಆಯ್ತು. ಕರಡಿಯು ಕ್ರಮೇಣ ನಿತ್ರಾಣಗೊಂಡಿತು. ಇದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಬಲೆ ಬೀಸಿ ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಬಲೆಗೆ ಬಿದ್ದ ಕರಡಿಯನ್ನು ಬೋನ್ ನಲ್ಲಿಟ್ಟು, ಅದನ್ನು ವಾಹನದ ಮೂಲಕ ಸ್ಥಳಾಂತರಿಸಿದ್ದಾರೆ.
ಇನ್ನು ಇಡೀ ಆಪರೇಶನ್ ಹತ್ತಿರದಿಂದ ನೋಡಿದ ಸ್ಥಳೀಯರು ಕರಡಿ ಸೆರೆ ಹಿಡಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪರವಾಗಿ ಜನರು ಜೈಕಾರ ಘೋಷಣೆ ಕೂಗಿದರು. ಕರಡಿಯು 7 ರಿಂದ 8 ವರ್ಷದಾಗಿದೆ. ಇದರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಕರಡಿಯನ್ನು ಕಾಡಿಗೆ ಬಿಡಬೇಕೋ ಅಥವಾ ಬೇಡವೋ ಎಂದು ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಅರಣ್ಯದಿಂದ ದಾರಿ ತಪ್ಪಿ ಕರಡಿಯು ನಗರಕ್ಕೆ ಎಂಟ್ರಿಕೊಟ್ಟಿತ್ತು. ನಗರಕ್ಕೆ ಬಂದು ವಾಪಸ್ ಹೋಗಲು ಆಗದೆ ಕರಡಿಯು ಚಿತ್ರಹಿಂಸೆ ಅನುಭವಿಸಿತು. ಕಾಡು ಹಂತ ಹಂತವಾಗಿ ಬರಿದಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಎಂಟ್ರಿ ಕೊಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕಾಡು ಉಳಿಯದೇ ಇದ್ದರೆ ಕಾಡು ಪ್ರಾಣಿಗಳಿಗೆ ಉಳಿಗಾಲವಿಲ್ಲ ಎನ್ನುವುದು ಇಂದಿನ ಘಟನೆಯು ಎಚ್ಚರಿಕೆಯ ಸಂದೇಶವನ್ನು ಮತ್ತೊಮ್ಮೆ ರವಾನಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ