ಕೊಪ್ಪಳ, ಜುಲೈ 21: ತನ್ನದಲ್ಲದ ಹಣವನ್ನು ಹೋಟೆಲ್ (Hotel) ಮಾಲಿಕನಿಗೆ ಮರಳಿಸುವ ಮೂಲಕ ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kushtagi) ಪಟ್ಟಣದ ಶಿಕ್ಷಕ ಮಾದರಿಯಾಗಿದ್ದಾರೆ. ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್ಗೆ ಕಟ್ಟಲು ಅಂತ ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್ನ್ನು ಹೋಟೆಲ್ ನಲ್ಲಿಟ್ಟಿದ್ದರು.
ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.
ಇದನ್ನೂ ಓದಿ: ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಮನೆಯಲ್ಲಿ ಮಕ್ಕಳ ಜೊತೆ ಉಪಹಾರ ಸೇವಿಸಬೇಕು ಅಂತ ಕವರ್ ಬಿಚ್ಚಿ ನೋಡಿದರೆ ಇಡ್ಲಿ, ವಡೆ, ದೋಸೆ ಬದಲಾಗಿ, ಹಣವಿತ್ತು. ಹೋಟೆಲ್ ಮಾಲೀಕ ಅಚಾತುರ್ಯದಿಂದ ಹಣದ ಕವರ್ ನೀಡಿದ್ದಾನೆ ಅಂತ ತಿಳಿದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಅವರು ಹೋಟೆಲ್ ಮಾಲೀಕನ ಬಳಿ ಹೋಗಿ ಹಣವಿದ್ದ ಕವರ್ ಅನ್ನು ಮರಳಿ ನೀಡಿದ್ದಾರೆ.
ಹಣವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರದಿದ್ದಾರೆ. ಶಿಕ್ಷಕನ ಪ್ರಮಾಣಿಕತೆಗೆ ಹೋಟೆಲ್ ಮಾಲೀಕ ಧನ್ಯವಾದಗಳನ್ನು ಹೇಳಿ, ನಿಮ್ಮ ಪ್ರಮಾಣಿಕತೆ ಹಲವರಿಗೆ ಮಾದರಿಯಾಗಿದೆ ಅಂತ ಅಭಿನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ