
ಕೊಡಗು, ನವೆಂಬರ್ 16: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಕಾಲ ಈಗಿಲ್ಲ. ಇತ್ತೀಚೆಗಿನ ಜಗಳಗಳು, ಪತಿ-ಪತ್ನಿಯಲ್ಲೊಬ್ಬರನ್ನ ಶಾಶ್ವತ ನಿದ್ದೆಗೆ ದೂಡುತ್ತಿದೆ. ಅಂತಹದ್ದೇ ಒಂದು ಪ್ರಕರಣ ಕರ್ನಾಟಕದ ಕಾಶ್ಮೀರ ಮಡಿಕೇರಿಯಲ್ಲಿ ಘಟಿಸಿದೆ. ಪತ್ನಿಯ ಮುನಿಸಿಗೆ ನೊಂದ ಪತಿ (Husband), ಪತ್ನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ದಾರುಣ ಘಟನೆ ನಡೆದಿದೆ.
ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ, ಲೈವ್‌ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡ ಅತ್ಯಂತ ದಾರುಣ, ಘನಘೋರ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಸಿಂಕೋನ ಪ್ರದೇಶದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ನಿವಾಸಿ ಕೀರ್ತನ್ ಆತ್ಮಹತ್ಯೆಯ ಲೈವ್ ದೃಶ್ಯಾವಳಿ ಹೃದಯವನ್ನ ಕಂಪಿಸಿಬಿಡುತ್ತೆ. ನವೆಂಬರ್ 15ರ ಸಂಜೆ ನಡೆದ ನಡೆದ ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಭುಜನೋವೆಂದು ಕ್ಲಿನಿಕ್ಗೆ ಹೋದಾತ ಹೆಣವಾದ: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದನಾ ಯುವಕ?
ಕೀರ್ತನ್ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕೀರ್ತನ್ ಪತ್ನಿ, ಪತಿ ಜೈಲಿಗೆ ಹೋದ ದಿನದಿಂದ ನೊಂದುಕೊಂಡವರು ತವರು ಮನೆಗೆ ತೆರಳಿ ವಾಸಿಸುತ್ತಿದ್ದರು. ಇದೆಲ್ಲಾ ಆಗಿ ಜೈಲಿನಿಂದ ಹೊರಬಂದ ಕೀರ್ತನ್ ತಮ್ಮ ಜೀವನವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ, ಕುಟುಂಬದಲ್ಲಿ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳು ಮಾತ್ರ ಸರಿ ಹೋಗಲೇ ಇಲ್ಲ. ಕೀರ್ತನ್ ಪತ್ನಿ ತನ್ನ ಗಂಡನ ಮನೆಗೆ ಹೋಗೋಕೆ ಒಪ್ಪಲೇ ಇಲ್ಲ. ಅಷ್ಟೇ.. ಅಲ್ಲಿಗೆ ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಿದ್ದ ಜಗಳ, ಕೀರ್ತನ್ರನ್ನ ಶಾಶ್ವತ ನಿದ್ದೆಗೆ ತಳ್ಳಿದೆ.
ಶನಿವಾರ ಸಂಜೆ, ಕೀರ್ತನ್ ಅವರು ಪತ್ನಿಯನ್ನು ತಮ್ಮ ಮನೆಗೆ ಕರೆದೊಯ್ಯಲು ತವರು ಮನೆಗೆ ತೆರಳಿದ್ದರು. ಆದರೆ, ಎಷ್ಟೇ ಕರೆದರೂ ಅವರ ಪತ್ನಿ ಹೋಗಲು ಒಪ್ಪಲೇ ಇಲ್ಲ. ಇದೇ ನೋವಿನಲ್ಲಿ ಕೀರ್ತನ್ ತಮ್ಮ ಕಟ್ಟಕಡೆಯ ಅತ್ಯಂತ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾರೆ. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಕೀರ್ತನ್, ಲೈವ್‌ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು. ಅದಾಗ್ಲೇ ಸಾಕಷ್ಟು ಬಾರಿ ಹೆದರಿಸಿದ್ದ ಪತಿಯ ಬೆದರಿಕೆಗೆ ಹೆಚ್ಚು ತಲೆಕೆಡಿಸಿಕೊಳ್ಳದ ಅವರ ಪತ್ನಿ ಕ್ಯಾರೇ ಅಂದಿಲ್ಲ. ಆದರೆ ಕೀರ್ತನ್ ಈ ಬಾರಿ ಬಲವಾದ ನಿರ್ಧಾರಕ್ಕೆ ಬಂದಿದ್ದರು.
ವಿಡಿಯೋ ಕಾಲ್ ಲೈವ್‌ನಲ್ಲೇ ಪತ್ನಿ ಮುಂದೆ ಮರವೊಂದನ್ನ ಏರಿದ ಕೀರ್ತನ್, ಮರದ ಕೊಂಬೆಗೆ ನೇಣಿನ ಕುಣಿಕೆ ಬಿಗಿದು, ಕುತ್ತಿಗೆಯೊಡ್ಡಿ ನರಳಾಡುತಲ್ಲೇ ಪ್ರಾಣಬಿಟ್ಟಿದ್ದಾರೆ. ನೇಣಿನ ಕುಣಿಕೆ ಅವರ ಕುತ್ತಿಗೆಯನ್ನ ಬಿಗಿಯುತ್ತಿದ್ದಂತೆ, ಜೀವ ಹೋಗೋ ಆವೇಗದಲ್ಲಿ ಕೊಸರಾಡುತ್ತಾ, ಒದ್ದಾಡುತ್ತಾ ಮರವನ್ನ ತಬ್ಬಿಕೊಂಡು ಬಚಾವಾಗಲು ಯತ್ನಿಸುವ ದೃಶ್ಯ ನರನಾಡಿಗಳ ರಕ್ತ ಹೆಪ್ಪುಗಟ್ಟಿಸುವಂತಿದೆ. ಘಟನೆಯಿಂದ ಕೀರ್ತನ್ ಪತ್ನಿ ಆಘಾತಕ್ಕೊಳಕ್ಕಾಗಿದ್ದಾರೆ. ತಕ್ಷಣವೇ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲೇ ತಡವಾಗಿದೆ.
ಇದನ್ನೂ ಓದಿ: ಗಂಡ ಹೆಂಡಿರ ಜಗಳ ಹತ್ಯೆ ತನಕ: ಪತಿಗೇ ಸ್ಕೆಚ್ ಹಾಕಿದ್ದ ಪತ್ನಿ ಅರೆಸ್ಟ್
ಭಾನುವಾರ ಸಿಂಕೋನ ಪ್ರದೇಶದಲ್ಲಿ ಕೀರ್ತನ್ ಮೃತದೇಹ ಪತ್ತೆಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಮತ್ತು ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:36 pm, Sun, 16 November 25