ಕೊಪ್ಪಳ: ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಪತ್ರ ಬರೆದಿದ್ದರೂ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇವಪ್ಪ (HC Mahadevappa) ಕ್ಯಾರೆ ಅಂದಿರಲಿಲ್ಲ. ಆದರೂ ಪಟ್ಟು ಬಿಡದ ಶಾಸಕ ಹಿಟ್ನಾಳ್ ಖುದ್ದು ಹೆಚ್.ಸಿ.ಮಹದೇವಪ್ಪರನ್ನು ಭೇಟಿಯಾಗಿ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪತ್ರ ಬರೆದು ಒಂದು ತಿಂಗಳು ಕಳೆದರೂ ಅಧಿಕಾರಿಯ ವರ್ಗಾವಣೆ ಆಗಿಲ್ಲ. ಈ ಹಿನ್ನಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಖುದ್ದು ಹೆಚ್.ಸಿ.ಮಹದೇವಪ್ಪರನ್ನು ಭೇಟಿಯಾಗಿ ವರ್ಗಾವಣೆಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಇದು ಕಾಂಗ್ರೆಸ್ನಲ್ಲಿ ಮತ್ತೊಂದು ಜಟಾಪಟಿಗೆ ಕಾರಣವಾಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೊಪ್ಪಳ ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೈ.ಎ.ಕಾಳೆ ಜಿಲ್ಲಾಧಿಕಾರಿಯ ಸಹಿಯನ್ನು ಪೊರ್ಜರಿ ಮಾಡಿ ಭ್ರಷ್ಟಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಂತಹ ಭ್ರಷ್ಟ ಅಧಿಕಾರಿ ಸೇವೆ ನಮ್ಮ ಜಿಲ್ಲೆಯಲ್ಲಿ ಬೇಡ ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಎಂಟು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶ
ವ್ಯವಸ್ಥಾಪಕ ನಿರ್ದೇಶಕ ವೈ.ಎ.ಕಾಳೆ ಅವರನ್ನು ವರ್ಗಾವಣೆ ಮಾಡಿ, ಈ ಜಾಗದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಲತಾ ಅವರನ್ನು ಕೂಡಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇವಪ್ಪ ಅವರಿಗೆ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಜಿಲ್ಲಾ ಸಚಿವ ಶಿವರಾಜ ತಂಗಡಗಿ ಪತ್ರ ಬರೆದಿದ್ದರು.
ಆದರೆ ಶಾಸಕರ ಹಾಗೂ ಸಚಿವರ ಪತ್ರಕ್ಕೆ ಹೆಚ್.ಸಿ.ಮಹಾದೇವಪ್ಪ ಡೋಂಟ್ ಕೇರ್ ಎಂದಿದ್ದು, ವೈ.ಎ.ಕಾಳೆಯ ಅವರಿಗೆ ಇನ್ನೊಂದು ಇಲಾಖೆಯ ಹೆಚ್ಚುವರಿ ಹುದ್ದೆ ನೀಡಿ ಟಾಂಗ್ಕೊಟ್ಟಿದ್ದರು. ಇದರಿಂದ ಕೊಪ್ಪಳ ಕೈ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಭ್ರಷ್ಟ ಅಧಿಕಾರಿಯ ಬೆನ್ನಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ನಿಂತರಾ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ