ಇಂದು ಧರ್ಮ ಧರ್ಮಗಳ ನಡುವೆ ಬಿರುಕು ಹೆಚ್ಚಾಗುತ್ತಿದೆ. ಕೋಮು ಸಾಮರಸ್ಯ ಮಾಯವಾಗುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಸಾರುವ ಮೂಲಕ ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದು ಅನ್ನೋದನ್ನು ಜನ ಸಾರುವ ಕೆಲಸ ಮಾಡಿದ್ದಾರೆ. ಹೌದು ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ದೇವಸ್ಥಾನ (Hindu Temple) ನಿರ್ಮಾಣ ಮಾಡಿಸಿದರೆ, ಹಿಂದೂಗಳು ಕೂಡಾ ಮುಸ್ಲಿಂ ವ್ಯಕ್ತಿಯ ಔದಾರ್ಯಕ್ಕೆ ಮೆಚ್ಚಿ, ಹಿಂದೂ ದೇವಸ್ಥಾನ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಗೆ ಅವಕಾಶ ನೀಡಿ ಹಿಂದೂ ಮುಸ್ಲಿಂ ಬಾಯಿ-ಬಾಯಿ ಅನ್ನೋದನ್ನು ಸಾರೋ ಕೆಲಸ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ (Naregal, Koppal) ಗಾಳೆಮ್ಮದೇವಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ವಿಶೇಷವೆಂದರೆ ಈ ದೇವಸ್ಥಾನ ಕಟ್ಟಿಸಿದ್ದು ಹಿಂದೂಗಳಲ್ಲಾ, ಬದಲಾಗಿ ಓರ್ವ ಮುಸ್ಲಿಂ ಸಮುದಾಯದ ವ್ಯಕ್ತಿ. ಹೌದು ಗದಗ ನಗರದ ರಾಜೀವಗಾಂಧಿ ನಗರದ ನಿವಾಸಿಯಾಗಿರೋ ಇಮಾಸಿ ಇಮಾಮಸಾಬ್ ಮೊರಬದ್ ಅನ್ನೋ ವ್ಯಕ್ತಿ ನರೇಗಲ್ ಗ್ರಾಮದಲ್ಲಿ ಹಿಂದೂ ದೇವತೆಯ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ 26 ಲಕ್ಷ ರೂಪಾಯಿ ಅವರೊಬ್ಬರೆ ವೆಚ್ಚ ಮಾಡಿದ್ದಾರೆ.
ಮರಳು ಗುತ್ತಿಗೆದಾರನಾಗಿ ಕೆಲಸ ಮಾಡೋ ಇಮಾಮಸಾಬ್ ಮೊರಬದ್, ನರೇಗಲ್ ಬಳಿ ಮರಳು ಸಾಗಾಟದ ಗುತ್ತಿಗೆಯನ್ನು ನಾಲ್ಕು ವರ್ಷಗಳ ಹಿಂದೆ ಪಡೆದಿದ್ದರು. ಇನ್ನು ನರೇಗಲ್ ಗ್ರಾಮದಲ್ಲಿರುವ ಗಾಳೆಮ್ಮದೇವಿ ದೇವಸ್ಥಾನ ಶಿಥಿಲಗೊಂಡಿತ್ತು. ಹೀಗಾಗಿ ಗ್ರಾಮದ ಜನರು ನಾಲ್ಕು ವರ್ಷದ ಹಿಂದೆ, ನಾವು ಗಾಳೆಮ್ಮದೇವಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಅದಕ್ಕೆ ಬೇಕಾದ ಮರಳನ್ನು ನೀಡಿ ಅಂತ ಇಮಾಮಸಾಬ್ ಮೊರಬದ್ (Muslim contractor Imamsab Moradabad) ರಲ್ಲಿ ಮನವಿ ಮಾಡಿದ್ದರು. ಆಗ ಇಮಾಮಸಾಬ್, ಮರಳು ಅಷ್ಟೇ ಏಕೆ, ಇಡೀ ದೇವಸ್ಥಾನ ವನ್ನು ನಾನೇ ನನ್ನ ಸ್ವಂತ ಹಣದಿಂದ ನಿರ್ಮಾಣ ಮಾಡುತ್ತೇನೆ ಅಂತ ಮಾತು ಕೊಟ್ಟಿದ್ದರು. ಅದರಂತೆ ನಾಲ್ಕು ವರ್ಷದ ಹಿಂದೆಯೇ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಿಸಿದ್ದರು.
ಇನ್ನು ಕೆಲ ದಿನಗಳ ಹಿಂದೆ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದಿದ್ದು ಇಂದು ಅದ್ದೂರಿಯಾಗಿ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನ ನಿರ್ಮಾಣ ಮಾಡಿಸಿದ್ದ ಇಮಾಮಸಾಬ್ ಸ್ವತಃ ಮುಂದೆ ನಿಂತು ಧಾರ್ಮಿಕ ಕಾರ್ಯದಲ್ಲಿ ಕೂಡಾ ಭಾಗಿಯಾಗಿದ್ದು ವಿಶೇಷವಾಗಿತ್ತು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ದೇವಸ್ಥಾನ ನಿರ್ಮಾಣ ಮಾಡಿರೋ ಇಮಾಮಸಾಬ್, ಹಿಂದೂ ಮುಸ್ಲಿಂ ಎಲ್ಲರೂ ಒಂದೆ. ನನಗೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭ ಮಾಡಿದ್ದರಿಂದ ಒಳ್ಳೆಯದಾಗಿದೆ. ನನ್ನ ಮನಸಿಗೆ ನೆಮ್ಮದಿ ಉಂಟಾಗಿದೆ. ನಾನು ಪ್ರಚಾರಕ್ಕೆ ಈ ಕೆಲಸ ಮಾಡಿಲ್ಲಾ, ಆತ್ಮತೃಪ್ತಿಗಾಗಿ ಮಾಡಿದ್ದೇನೆ ಅಂತ ಹೇಳಿದ್ದಾರೆ.
ಗ್ರಾಮದಲ್ಲಿ ಎಲ್ಲಾ ಜಾತಿಯ ಜನರು ಸಹೋದರ ರಂತೆ ಇದ್ದೇವೆ. ಇಮಾಮಸಾಬ್ ರ ಕೆಲಸ ಎಲ್ಲರಿಗೂ ಮಾದರಿಯಾಗಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನರೇಗಲ್ ಗ್ರಾಮದ ಘಾಳೆಪ್ಪ ಅನ್ನೋರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ