ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ದೇಶದ ನೂರಾರು ಜ್ವಲಂತ ಸಮಸ್ಯೆಗಳು ಬಗೆಹರಿದಿವೆ. ಆದ್ರೆ ಕೊಪ್ಪಳ ಜಿಲ್ಲೆಯ ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಆ ಗ್ರಾಮದ ಸಮಸ್ಯೆ ಮಾತ್ರ ದಶಕಗಳಿಂದ ಬಗೆಹರಿಯುತ್ತಿಲ್ಲಾ. ಆ ಗ್ರಾಮದ ರೈತರಿಗೆ ಯಾವುದೇ ಬ್ಯಾಂಕ್ ನಿಂದ ಕ್ರಾಪ್ ಲೋನ್ ಕೊಡಲ್ಲಾ, ಆ ಗ್ರಾಮಕ್ಕೆ ಬೆಳೆ ವಿಮೆ ಮಂಜೂರಾಗಲ್ಲಾ, ಯಾವುದೇ ರೈತರಿಗೆ ಸರ್ಕಾರದ ಯಾವುದೇ ಸವಲತ್ತು ಸಿಗ್ತಿಲ್ಲಾ. ತಮ್ಮ ಜಮೀನನ್ನು ತಾವೇ ಮಾರಾಟ ಮಾಡಲಿಕ್ಕಾಗದೇ ರೈತರು ಕಂಗಾಲಾಗಿದ್ದಾರೆ. ಕೈಯಲ್ಲೊಂದಿಷ್ಟು ದಾಖಲಾತಿಗಳನ್ನು ಹಿಡಿದು, ತಮ್ಮ ಸಮಸ್ಯೆಯನ್ನು ಬೇಗನೆ ಬಗೆಹರಿಸಿ ಅಂತ ಮನವಿ ಮಾಡ್ತಿರೋ ಇವರೆಲ್ಲಾ ಕೊಪ್ಪಳ ತಾಲೂಕಿನ ಕಲ್ ತಾವರಗೇರಾ ಗ್ರಾಮದ ನಿವಾಸಿಗಳು. ಕಲ್ ತಾವರಗೇರಾ, ಕೊಪ್ಪಳ ತಾಲೂಕಿನ ಹಳ್ಳಿ. ಆದ್ರೆ ವಿಧಾನಸಭಾ ಕ್ಷೇತ್ರ ಬರುವುದು ಗಂಗಾವತಿಗೆ.
ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಗ್ರಾಮದಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಎಕರೆ ಕೃಷಿ ಜಮೀನು ಇದೆ. ಆದ್ರೆ ದಶಕಗಳಿಂದ ಕೂಡಾ ತಮಗೆ ಆಗ್ತಿರುವ ಅನ್ಯಾಯದ ಬಗ್ಗೆ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿರುವ ಈ ರೈತರು ಇದೀಗ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡ್ತೀವಿ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತಿದ್ದಾರೆ.
ಯಾಕಂದ್ರೆ ದೇಶಕ್ಕೆ ಸ್ವತಂತ್ರ ಬಂದು ಅನೇಕ ದಶಕಗಳೇ ಕಳೆದಿವೆ. ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಆದ್ರೆ ಈ ಗ್ರಾಮದ ರೈತರ ಸಮಸ್ಯೆಗೆ ಮಾತ್ರ ಪರಿಹಾರ ಸಿಗ್ತಿಲ್ಲಾ. ಇದರಿಂದ ಈ ಗ್ರಾಮದ ಜನರು, ತಮ್ಮದೇ ಭೂಮಿಯಿದ್ರು ಕೂಡಾ ಮಾರಾಟ ಮಾಡಲು ಆಗ್ತಿಲ್ಲಾ. ಗ್ರಾಮದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹುತೇಕ ಸರ್ಕಾರಿ ಯೋಜನೆಗಳು ಸಿಗ್ತಿಲ್ಲಾ. ಬೆಳೆ ವಿಮೆ ಮಂಜೂರಾಗ್ತಿಲ್ಲಾ. ಗಂಗಾ ಕಲ್ಯಾಣ ಸೇರಿದಂತೆ ಅನೇಕ ಯೋಜನೆಗಳ ಲಾಭ ದಕ್ಕುತ್ತಿಲ್ಲಾ.
ಇದಕ್ಕೆ ಕಾರಣ, ಗ್ರಾಮದ ಬಹುತೇಕ ರೈತರ ಜಮೀನಿನ ಪಹಣಿ ದೋಷ. ಹೌದು ಗ್ರಾಮದಲ್ಲಿ ಪಹಣಿಯಲ್ಲಿನ ಸರ್ವೇ ನಂಬರ್ ಗೂ ರೈತರು ಸದ್ಯ ಉಳುಮೆ ಮಾಡ್ತಿರೋ ಸರ್ವೇ ನಂಬರ್ ಗೆ ಹೊಂದಾಣಿಕೆ ಆಗ್ತಿಲ್ಲಾ. ಒರ್ವ ರೈತನ ಪಹಣಿಯಲ್ಲಿ ಸರ್ವೇ ನಂಬರ್ 101 ಇದ್ದರೆ, ಭೂಮಿ ಅಳತೆ ಮಾಡಲು ಹೋದಾಗ, ಆ ಭೂಮಿ ಸರ್ವೇ ನಂಬರ್ 109 ಅಂತ ತೋರಿಸುತ್ತೆ. ಯಾರದ್ದೋ ಜಮೀನಿಗೆ ಇನ್ನಾರದ್ದು ಸರ್ವೇ ನಂಬರ್ ತೋರಿಸುತ್ತೆ. ಹೌದು ಸರ್ವೇ ನಂಬರ್ ಜಂಪ್ ಸಮಸ್ಯೆಯಿಂದ ಇಡೀ ಗ್ರಾಮದ ಜನರು ಕಂಗಾಲಾಗಿದ್ದಾರೆ ಎನ್ನುತ್ತಾರೆ ಗುಂಡೂರಾವ್, ಕಲ್ ತಾವರಗೇರಾ ಗ್ರಾಮದ ರೈತ
ಸದ್ಯ ಯಾವುದೇ ಸರ್ಕಾರದ ಯೋಜನೆ ಸಿಗಬೇಕಾದ್ರು ಕೂಡಾ ಜಿ ಪಿ ಎಸ್ ಮಾಡಲಾಗುತ್ತದೆ. ಅದರಂತೆ ರೈತರು ತಮ್ಮ ಹೆಸರಲ್ಲಿರುವ ಜಮೀನನ ಪಹಣಿ ಹಚ್ಚಿ ಬೆಳೆ ವಿಮೆ ಮಾಡಿಸುತ್ತಾರೆ. ಆದ್ರೆ ಜಿ ಪಿ ಎಸ್ ಮಾಡಲು ಬಂದಾಗ, ಜಿ ಪಿ ಎಸ್ ನಲ್ಲಿ ಅದು ಬೇರೆ ಸರ್ವೇ ನಂಬರ್ ತೋರಿಸುತ್ತೆ. ಹೀಗಾಗಿ ಜಿ ಪಿ ಎಸ್ ಗೂ, ಪಹಣಿಯಲ್ಲಿರುವ ಸರ್ವೇ ನಂಬರ್ ಗೂ ತಾಳೆಯಾಗದೇ ಇರೋದರಿಂದ, ಈ ಗ್ರಾಮದ ರೈತರಿಗೆ ಯಾವುದೇ ಸೌಲಭ್ಯಗಳು ಸಿಗದಂತಾಗಿವೆ. ಈ ಬಗ್ಗೆ ಗ್ರಾಮದ ರೈತರು ಕೂಡಾ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನೂರಾರು ಭಾರಿ ಬೇಟಿ ಮಾಡಿ, ತಮ್ಮ ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸಿದ್ದಾರೆ. ಆದ್ರೆ ಯಾರು ಕೂಡಾ ಗ್ರಾಮದ ರೈತರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲಾ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳು ಸೇರಿಕೊಂಡು, ಇಡೀ ಗ್ರಾಮದ ಜಮೀನನ್ನು ಸರ್ವೇ ಮಾಡಿ, ಜಂಪ್ ಸರ್ವೇ ನಂಬರ್ ಸಮಸ್ಯೆಯನ್ನು ಬಗೆಹರಿಸಬಹುದು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಇದರಿಂದ ಗ್ರಾಮದ ರೈತರ ಗೋಳಾಟ ಮಾತ್ರ ಮುಂದುವರಿದಿದೆ ಎನ್ನುತ್ತಾರೆ ಅಂಬಣ್ಣಾ, ಕಲ್ ತಾವರಗೇರಾ ಗ್ರಾಮದ ನಿವಾಸಿ.
ಈ ಬಗ್ಗೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರು, ಸಮಸ್ಯೆ ವಿಚಾರ ಗಮನಕ್ಕೆ ಬಂದಿದೆ. ಆದಷ್ಟು ಬೇಗನೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಅಂತಿದ್ದಾರೆ. ಆದ್ರೆ ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಮಾತ್ರ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ದೇಶದ ಬೆನ್ನೆಲುಬು ರೈತರು ಅಂತಾರೆ. ಆದ್ರೆ ಕಲ್ ತಾವರಗೇರಾ ಗ್ರಾಮದ ರೈತರ ಬೆನ್ನೆಲುಬೆ ಮುರಿದುಬೀಳುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದೇ ಇರೋದು ದುರ್ದೈವದ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ