ಕೊಪ್ಪಳ: ಬಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಕಟಾವಿಗೆ ಬಂದಿದ್ದ ಭತ್ತ; ಕಣ್ಣೀರಿಡುತ್ತಿರುವ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2023 | 4:18 PM

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಹಿಂಗಾರು ಮಳೆ ಆರಂಭದಲ್ಲಿ ಅನೇಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ, ಭತ್ತದ ಬೆಳೆಗಾರರಿಗೆ ಶಾಕ್ ತರಿಸಿದೆ. ಹೌದು, ಭಾರಿ ಗಾಳಿ ಮತ್ತು ಮಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ ತಾಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಬೆಳದಿದ್ದ ಭತ್ತ ನೆಲಕ್ಕುರುಳಿ ಹಾಳಾಗಿ ಹೋಗುತ್ತಿದೆ.

ಕೊಪ್ಪಳ: ಬಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಕಟಾವಿಗೆ ಬಂದಿದ್ದ ಭತ್ತ; ಕಣ್ಣೀರಿಡುತ್ತಿರುವ ರೈತರು
ಕೊಪ್ಪಳ ಜಿಲ್ಲೆಯಲ್ಲಿ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ
Follow us on

ಕೊಪ್ಪಳ, ನ.09: ದೇಶದಲ್ಲಿ ಭತ್ತದ ಉತ್ಪಾಧನೆ ಕಡಿಮೆಯಾಗಿದ್ದು, ಈಗಾಗಲೇ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಕಿ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೌದು, ರಾಜ್ಯದ ಭತ್ತದ ಕಣಜ ಎಂದು ಖ್ಯಾತಿ ಪಡೆದಿರುವ ಕೊಪ್ಪಳ(Koppala) ಜಿಲ್ಲೆಯಲ್ಲಿಯೇ ಭತ್ತಕ್ಕೆ ಹಿಂಗಾರು ಮಳೆ ದೊಡ್ಡ ಪೆಟ್ಟು ನೀಡುತ್ತಿದೆ. ಬೇಕಾದಾಗ ಬಾರದ ಮಳೆ ಇದೀಗ ಅಬ್ಬರಿಸಿ ಬೊಬ್ಬೆರೆಯುತ್ತಿದೆ. ಕಳೆದ ಎರಡು ದಿನಗಳಿಂದ ವರುಣದೇವ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ರಾಜ್ಯದ ಭತ್ತದ ಕಣಜ ಖ್ಯಾತಿಯ ಕೊಪ್ಪಳ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾರಿ ಗಾಳಿ ಮಳೆಗೆ ನೆಲಕ್ಕುರುಳಿದ ಕಟಾವಿಗೆ ಬಂದಿದ್ದ ಭತ್ತ

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಹಿಂಗಾರು ಮಳೆ ಆರಂಭದಲ್ಲಿ ಅನೇಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ, ಭತ್ತದ ಬೆಳೆಗಾರರಿಗೆ ಶಾಕ್ ತರಿಸಿದೆ. ಹೌದು, ಭಾರಿ ಗಾಳಿ ಮತ್ತು ಮಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ ತಾಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಬೆಳದಿದ್ದ ಭತ್ತ ನೆಲಕ್ಕುರುಳಿ ಹಾಳಾಗಿ ಹೋಗುತ್ತಿದೆ.
ಚೆನ್ನಾಗಿ ಬೆಳದಿದ್ದ ಭತ್ತ ಕಣ್ಣ ಮುಂದೆಯೇ ನೆಲಕ್ಕುರುಳಿ ಹಾಳಾಗಿ ಹೋಗುತ್ತಿರುವುದನ್ನು ನೋಡಿ, ರೈತರ ಎದೆಬಡಿತ ಹೆಚ್ಚಾಗುತ್ತಿದೆ. ರೈತರ ಜೇಬು ತುಂಬಿಸಬೇಕಿದ್ದ ಭತ್ತ, ನೀರು ಮತ್ತು ಮಣ್ಣು ಪಾಲಾಗುತ್ತಿದೆ.

ಇದನ್ನೂ ಓದಿ:ಬರದಿಂದ ಕಂಗೆಟ್ಟ ರೈತರಿಗೆ ಗೋವಿನ ಜೋಳ ಬೆಳೆ ಟಾನಿಕ್: ಬೆಲೆ ಹೆಚ್ಚಾದರೂ ಖುಷಿ ಪಡದ ರೈತರು, ಇಲ್ಲಿದೆ ಅಸಲಿ ಕಾರಣ

ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಳೆಯ ಅಬ್ಬರ ಜೋರು

ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಅದರಲ್ಲೂ ಕಳೆದ ರಾತ್ರಿ ಜಿಲ್ಲೆಯಾದ್ಯಂತ ಬಾರಿ ಗಾಳಿ ಸಹಿತ ಮಳೆಯಾಗಿದೆ. ಮುಂಗಾರು ಮಳೆಯಾಗದೇ ಇದ್ದಿದ್ದರಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರು, ಕಾಲುವೆ ನೀರು, ಬೋರೆವಲ್ ನೀರಿನ ಮೂಲಕ ಭತ್ತವನ್ನು ಬೆಳದಿದ್ದರು. ಇದೀಗ ಭತ್ತ ಕಟಾವಿಗೆ ಬಂದಿದೆ. ಭತ್ತವನ್ನು ಕಟಾವು ಮಾಡಬೇಕು ಎಂದು ಗದ್ದೆಗೆ ನೀರು ಹಾಯಿಸುವದನ್ನು ರೈತರು ನಿಲ್ಲಿಸಿದ್ದರು. ಎರಡ್ಮೂರು ದಿನಗಳು ಕಳೆದಿದ್ದರೆ ಭತ್ತದ ಕಟಾವು ಆರಂಭವಾಗುತ್ತಿತ್ತು. ಆದ್ರೆ, ಕಟಾವಿಗೆ ಮೊದಲೇ ಆರಂಭವಾದ ಮಳೆಯಿಂದಾಗಿ ಭತ್ತದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ ಕಾಳಾಗಿರುವುದರಿಂದ ಸ್ವಲ್ಪ ಗಾಳಿ ಮತ್ತು ಮಳೆಯಾದ್ರು ಕೂಡಾ ನೆಲಕ್ಕುರಳುತ್ತಿದೆ. ಇನ್ನು ಬಾರಿ ಗಾಳಿ ಮಳೆಯಾಗಿದ್ದರಿಂದ ಜಿಲ್ಲೆಯ ಗಂಗಾವತಿ, ಕೊಪ್ಪಳ ಸೇರಿದಂತೆ ಹಲವಡೆ ಬೆಳದಿದ್ದ ಭತ್ತ ನೆಲ್ಲಕ್ಕುರುಳಿದೆ. ಮಣ್ಣು ಮತ್ತು ನೀರಲ್ಲಿ ಸಿಲುಕಿ ಹಾಳಾಗುತ್ತಿದೆ.

ಭತ್ತ ಬಾರದೇ ಇದ್ರೆ ರೈತರಿಗೆ ಬಿಗ್ ಲಾಸ್

ಒಂದು ಎಕರೆ ಭತ್ತ ಬೆಳೆಯಲು ರೈತರು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಇದೀಗ ಭತ್ತ ಉತ್ತಮ ಇಳುವರಿ ಬಂದಿದ್ದು ಕಟಾವು ಮಾಡಿದ್ದರೆ, ಮಾಡಿದ ಸಾಲ ಸಂಪೂರ್ಣವಾಗಿ ತೀರುತ್ತಿತ್ತಂತೆ. ಆದ್ರೆ, ಮಳೆಯಿಂದಾಗಿ ಭತ್ತ ಹಾಳಾಗಿ ಹೋಗುತ್ತಿದ್ದು, ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ. ಇನ್ನು ಜಿಲ್ಲೆಯ ಬಹುತೇಕ ರೈತರು ಮುಂಗಾರು ಮಳೆಯಾಗದೇ ಇದ್ದಿದ್ದರಿಂದ ಒಂದು ಬೆಳೆಯನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಇದೀಗ ಭತ್ತವು ಹೋದ್ರೆ, ತಮ್ಮ ಬದುಕು ಮೂರಾಬಟ್ಟಿಯಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ಭತ್ತ ನೆಲಕ್ಕುರುಳಿ ಹಾಳಾದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಗೋಳು ಕೇಳುವ ಕೆಲಸ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಚಿಕ್ಕೋಡಿಯಲ್ಲಿ ಭೀಕರ ಬರ, ಜಾನುವಾರು ಮಾರಾಟಕ್ಕೆ ಮುಂದಾದ ರೈತರು

‘ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳದಿದ್ದೇವೆ. ಆದ್ರೆ, ಹಿಂಗಾರು ಮಳೆಗೆ ಕಟಾವಿಗೆ ಬಂದಿದ್ದ ಭತ್ತ ನೆಲಕ್ಕುರುಳಿ ಹಾಳಾಗಿ ಹೋಗುತ್ತಿದೆ. ಭತ್ತವನ್ನೇ ನಂಬಿದ್ದ ನಮಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಮಳೆ ಹೀಗೆ ಮುಂದವರಿದರೆ, ಭತ್ತ ಹೋಗಿ, ಬರಿ ಹುಲ್ಲು ಮಾತ್ರ ಉಳಿಯುತ್ತದೆ ಎಂದು ಗಂಗಾವತಿ ತಾಲೂಕಿನ ಹೊಸಕೇರಾ ಕ್ಯಾಂಪ್ ನ ರೈತ ಧನಂಜಯ್ ಎಂಬುವವರು ಹೇಳುತ್ತಿದ್ದಾರೆ. ಮಳೆಯಾಗದೇ ಇದ್ದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ, ಇದೀಗ ಹಿಂಗಾರು ಮಳೆ ಭತ್ತದ ರೈತರಿಗೆ ಮತ್ತೊಂದು ಸಂಕಷ್ಟವನ್ನು ತಂದಿದೆ. ಇನ್ನು ಎರಡ್ಮೂರು ದಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡದ್ದರಿಂದ, ಭತ್ತ ಸಂಪೂರ್ಣವಾಗಿ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ. ಇನ್ನು ಈಗಾಗಿರುವ ಅನಾಹುತಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಿ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಕೆಲಸವನ್ನು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Thu, 9 November 23