ಹೆಣ್ಣು ಮಗು ಹುಟ್ಟಿದೆಂದು ಹೇಳಿ 7 ದಿನ ಬಳಿಕ ಮೃತ ಗಂಡು ಮಗು ಕೊಟ್ರು; ಆಸ್ಪತ್ರೆ ಸಿಬ್ಬಂದಿ ಎಡವಟ್ಟು, ಪಾಲಕರು ಕಂಗಾಲು

| Updated By: ಆಯೇಷಾ ಬಾನು

Updated on: Oct 02, 2024 | 12:00 PM

ಹೆರಿಗೆ ಆದಾಗ ಹೆಣ್ಣು ಮಗು ಹುಟ್ಟಿದೆ ಎಂದು ಹೇಳಿದ್ದ ವೈದ್ಯರು 7 ದಿನಗಳ ಬಳಿಕ ಮೃತ ಗಂಡು ಮಗು ಕೊಟ್ಟು ನಿಮ್ಮ ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಕೊಪ್ಪಳ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಹೆಣ್ಣು ಮಗು ಹುಟ್ಟಿದೆಂದು ಹೇಳಿ 7 ದಿನ ಬಳಿಕ ಮೃತ ಗಂಡು ಮಗು ಕೊಟ್ರು; ಆಸ್ಪತ್ರೆ ಸಿಬ್ಬಂದಿ ಎಡವಟ್ಟು, ಪಾಲಕರು ಕಂಗಾಲು
ಹೆಣ್ಣು ಮಗು ಹುಟ್ಟಿದೆಂದು ಹೇಳಿ 7 ದಿನ ಬಳಿಕ ಮೃತ ಗಂಡು ಮಗು ಕೊಟ್ರು; ಆಸ್ಪತ್ರೆ ಸಿಬ್ಬಂದಿ ಎಡವಟ್ಟು, ಪಾಲಕರು ಕಂಗಾಲು
Follow us on

ಕೊಪ್ಪಳ, ಅ.02: ಕೊಪ್ಪಳ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತೊಮ್ಮೆ ಸುದ್ದಿಯಲ್ಲಿದೆ (Koppal). ಈ ಬಾರಿ ನವಜಾತ ಶಿಶುವನ್ನು ಅದಲು ಬದಲು ಮಾಡಿರೋ ಆರೋಪ ಕೇಳಿ ಬಂದಿದೆ. ಹೌದು ಅಲ್ಲೊಬ್ಬ ತಾಯಿಗೆ, ಹೆರಿಗೆ ನಂತರ ನಿಮಗೆ ಹೆಣ್ಣು ಮಗು ಹುಟ್ಟಿದೆ ಅಂತ ವೈದ್ಯರು, ಸಿಬ್ಬಂದಿ ಹೇಳಿದ್ದರು. ಮಗು ಜನನವಾಗಿ ಏಳು ದಿನಗಳ ಕಾಲ ತಮಗಾಗಿರೋದು ಹೆಣ್ಣು ಮಗುವೆ ಅಂತ ಹೇಳಿದ್ದರಂತೆ. ಆದರೆ ನಿನ್ನೆ ದಿಡೀರನೆ ಸತ್ತಿರುವ ಗಂಡು ಕೂಸನ್ನು ನೀಡಿ, ಇದೇ ನಿಮ್ಮ ಮಗು ಅಂತ ಹೇಳಿದ್ದಾರೆ. ಇದು ಹೆತ್ತವರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಸಿಬ್ಬಂದಿ ಯಡವಟ್ಟು, ಹೆತ್ತವರ ಕಣ್ಣೀರಿಗೆ ಕಾರಣವಾಗಿದೆ.

ಕೊಪ್ಪಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮಹಾಯಡವಟ್ಟು

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ಪಟ್ಟಣದ ನಿವಾಸಿಯಾಗಿದ್ದ ಗೌರಿ ಅನ್ನೋ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಹಗರಿಬೊಮ್ಮನಳ್ಳಿ ಸರ್ಕಾರಿ ಆಸ್ಪತ್ರೆಯವರು ಕೊಪ್ಪಳದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದರು. ಹೀಗಾಗಿ ಸೆಪ್ಟೆಂಬರ್ 23 ರಂದು ಗೌರಿ, ಕೊಪ್ಪಳ ನಗರದಲ್ಲಿರುವ ನೂರು ಬೆಡ್ ಗಳ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಸೆಪ್ಟೆಂಬರ್ 25 ರಂದು ನಸುಕಿನ ಜಾವ ಗೌರಿಗೆ ಹೆರಿಗೆ ಆಗಿತ್ತು. ಆಗ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಮಗೆ ಹೆಣ್ಣು ಮಗುವಾಗಿದೆ. ಆದ್ರೆ ಮಗುವಿನ ತೂಕ ಒಂದು ಕಿಲೋ ಮಾತ್ರ ಇದ್ದಿದ್ದರಿಂದ, ಮಕ್ಕಳ ತೀರ್ವ ನಿಘಾ ಘಟಕದಲ್ಲಿ ಇಡಬೇಕಾಗಿದೆ ಅಂತ ಹೇಳಿದ್ದರು. ತಾಯಿಗೂ ಕೂಡಾ ನವಜಾತ ಶಿಶುವನ್ನು ಸರಿಯಾಗಿ ತೋರಿಸದೆ ತೀರ್ವ ನಿಘಾ ಘಟಕದಲ್ಲಿ ಇಟ್ಟಿದ್ದರು.

ಇದನ್ನೂ ಓದಿ: ಬೆಂಗಳೂರು: ಜಾಸ್ತಿ ಬಾಡಿಗೆ ಹಣ ಕೊಡಲು ನಿರಾಕರಿಸಿದಕ್ಕೆ ಯುವತಿಗೆ ಆಟೋ ಚಾಲಕನಿಂದ ಅವಾಚ್ಯವಾಗಿ ನಿಂದನೆ

ಕಳೆದ ಏಳು ದಿನಗಳಿಂದ ಹೆತ್ತವರಿಗೆ ನಿಮ್ಮ ಮಗು ಹೆಣ್ಣು ಮಗುವಿದೆ. ಶಿಶುವಿಗೆ ಕಾಮಾಲೆ ಸಮಸ್ಯೆಯಿದ್ದು, ಚಿಕಿತ್ಸೆ ಕೊಡುತ್ತಿರುವುದಾಗಿ ಹೇಳಿದ್ದರಂತೆ. ಆದ್ರೆ ನಿನ್ನೆ ಮುಂಜಾನೆ ದಿಡೀರನೆ ಫೋನ್ ಮಾಡಿ, ನಿಮ್ಮ ಮಗು ಸತ್ತಿದೆ, ಬಂದು ಶವ ತಗೆದುಕೊಂಡು ಹೋಗಿ ಅಂತ ಹೇಳಿದ್ದಾರೆ. ಆದರೆ ಮಧ್ಯಾಹ್ನದ ವರಗೆ ಕಾದಿದ್ದ ಗೌರಿ ಮತ್ತು ಆಕೆಯ ಪತಿಗೆ ಮಧ್ಯಾಹ್ನದ ನಂತರ ಮಗುವಿನ ಶವ ಕೊಟ್ಟಿದ್ದಾರೆ. ದಂಪತಿ ಮಗುವನ್ನು ಮನೆಗೆ ತಂದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ. ಹೀಗಾಗಿ ಕಳೆದ ರಾತ್ರಿ ಮತ್ತೆ ದಂಪತಿ ಮೃತ ಮಗುವಿನ ಶವ ಸಮೇತ ಆಸ್ಪತ್ರೆಗೆ ಬಂದಿದ್ದಾರೆ. ತಮಗೆ ಹೆರಿಗೆ ಆದಾಗಿನಿಂದ ಹೆಣ್ಣು ಮಗು ಅಂತಲೇ ಹೇಳಿದ್ದೀರಿ. ಚೀಟಿಯಲ್ಲಿ ಕೂಡಾ ಹೆಣ್ಣು ಮಗು ಅಂತ ಉಲ್ಲೇಖಿಸಿದ್ದೀರಿ. ಆದರೆ ಕೊಟ್ಟಿರುವುದು ಗಂಡು ಶಿಶುವಿನ ಶವ. ನಮ್ಮ ಮಗು ಎಲ್ಲಿ ಅಂತ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ವಿರುದ್ದ ಹೆತ್ತವರ ಆಕ್ರೋಶ

ಇನ್ನು ತನಗೆ ಏಳು ತಿಂಗಳಿಗೆ ಹೆರಿಗೆಯಾಗಿದೆ. ಹೆರಿಗೆಯಾದಾಗ ಕೂಸಿನ ತೂಕ ಕಡಿಮೆ ಇತ್ತಂತೆ. ಆದರೆ ಏಳು ದಿನಗಳ ಹೆಣ್ಣು ಮಗು ಅಂತ ಹೇಳಿ, ಸತ್ತಿರುವ ಗಂಡು ಶಿಶುವಿನ ಶವ ತಂದು ಕೊಟ್ಟಿದ್ದಾರೆ. ನನಗೆ ಕೊಟ್ಟಿರುವುದು ನನ್ನ ಮಗುವೇ ಅಲ್ಲಾ. ಕೊಟ್ಟಿರುವ ಶಿಶುವನ್ನು ನೋಡಿದ್ರೆ ಏಳು ದಿನದ ಕೂಸು ಕಂಡಹಾಗೆಯಿಲ್ಲಾ. ತನಗೆ ತನ್ನ ಮಗು ಮೃತಪಟ್ಟಿದ್ದರು ಚಿಂತೆಯಿಲ್ಲಾ. ಹೇಳಿದಂತೆ ಹೆಣ್ಣು ಮಗುವನ್ನು ನೀಡಿ ಅಂತ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮುಂದೆ ಗೋಳಾಡಿದ್ದಾರೆ.

ಒಂದಡೆ ಹೆತ್ತವರು ಆಸ್ಪತ್ರೆಯ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಆಸ್ಪತ್ರೆಯವರು, ನಿಮಗೆ ಹುಟ್ಟಿರೋದು ಗಂಡು ಮಗುವೆ. ಆದರೆ ಸಿಬ್ಬಂದಿ ಮಾಡಿರೋ ಯಡವಟ್ಟಿನಿಂದ ಈ ರೀತಿಯ ಗೊಂದಲ ಆಗಿದೆ ಅಂತ ಹೇಳಿದ್ದಾರೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಮಾತು ತಾಯಿಗೆ ಸಮಾಧಾನವಾಗಿಲ್ಲ. ಹೀಗಾಗಿ ತನಗೆ ನ್ಯಾಯ ಬೇಕು ಅಂತ ಪಟ್ಟು ಹಿಡಿದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಆಸ್ಪತ್ರೆಯ ಸಿಬ್ಬಂದಿ, ಹೆರಿಗೆ ಕೋಣೆಯಲ್ಲಿ ಹೆರಿಗೆಯಾದ ನಂತರ ಗಂಡು ಮಗು ಅಂತಲೇ ಬರೆದಿದ್ದಾರೆ. ಆದರೆ ತೀರ್ವ ನಿಘಾ ಘಟಕಕ್ಕೆ ತಂದು ದಾಖಲಿಸುವಾಗ ಹೆಣ್ಣು ಅಂತ ಬರೆದಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ರೀತಿ ಘಟನೆಯಾಗಿದೆ. ಈ ಬಗ್ಗೆ ತನಿಖೆ ಕೂಡಾ ನಡೆಸುತ್ತೇವೆ ಅಂತ ಹೇಳುತ್ತಿದ್ದಾರೆ.

ಕೊಪ್ಪಳ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯವರು ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದ್ರೆ ಮಗುವನ್ನು ಹೆಣ್ಣು ಮತ್ತು ಗಂಡು ಅಂತ ನಮೂದಿಸುವಲ್ಲಿ ಆಗಿರೋ ಯಡವಟ್ಟಿನಿಂದ ಸಮಸ್ಯೆಯಾಗಿದೆ ಅಂತ ಹೇಳುತ್ತಿದ್ದಾರೆ. ಆದ್ರೆ ಹೆತ್ತ ತಾಯಿ ಮಾತ್ರ ತನಗೆ ಜನಿಸಿದ್ದು ಹೆಣ್ಣು ಕೂಸು, ಆದ್ರೆ ಸತ್ತಿರೋ ಗಂಡು ಕೂಸನ್ನು ನೀಡಿದ್ದಾರೆ. ನಾನು ಇದನ್ನು ಒಪ್ಪುದಿಲ್ಲಾ ಅಂತ ಹೇಳಿದ್ದಾಳೆ. ಸದ್ಯ ಗಂಡು ಕೂಸಿನ ಅಂತ್ಯಸಂಸ್ಕಾರ ಮಾಡದೇ, ಶವಾಗಾರದಲ್ಲಿ ಇಡಲಾಗಿದೆ. ಈ ಬಗ್ಗೆ ಆಸ್ಪತ್ರೆಯವರು ಆದಷ್ಟು ಬೇಗನೆ ತನಿಖೆ ನಡೆಸಿ, ಆಗಿರೋ ಗೊಂದಲವನ್ನು ಸರಿಪಡಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ