ಕೊಪ್ಪಳ, ಜುಲೈ 13: ಕಾರು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ಐದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲಾರಿಹಟ್ಟಿ ಡಗ್ಗಿ ಬಳಿ ವಾರದ ಹಿಂದೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂದನೂರಿನ ನಿವಾಸಿಗಳಾದ ವಿಜಯ ಮಹಾಂತೇಶ್, ಶಿವನಾಂದ್ ಮತ್ತು ಕಾರ್ ಚಾಲಕ ಖಾಲೀದ್ ಎಂಬವರು ಸಿಂದನೂರಿನಿಂದ ಕೊಪ್ಪಳಕ್ಕೆ ತಮ್ಮ ಕಾರಿನನಲ್ಲಿ ಬರುತ್ತಿದ್ದರು. ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರ್ ನಿಲ್ಲಿಸಿ ಬ್ಲೇಡ್ ನಿಂದ ಹಲ್ಲೆ ಮಾಡಿ, ಕಾರದ ಪುಡಿ ಎರಚಿ, ಹಣವಿದ್ದ ಬ್ಯಾಗ್ ತಗೆದುಕೊಂಡು ಹೋಗಿದ್ದಾರೆ. ರಿಯೇಲ್ ಎಸ್ಟೇಟ್ ಕೆಲಸಕ್ಕಾಗಿ ತರುತ್ತಿದ್ದ ಹಣ ದರೋಡೆಕೋರರ ಪಾಲಾಗಿದೆ.
ಘಟನೆ ಬಗ್ಗೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು ವಾರವಾದರೂ ಕೂಡಾ ದರೋಡೆಕೋರರ ಪತ್ತೆಯಾಗಿಲ್ಲ. ಇದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸಿದೆ.
ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಎರಡು ಕಡೆ ರಾಜ್ಯ ಹೆದ್ದಾರಿಗಳು ಇವೆ. ಪ್ರತಿನಿತ್ಯ ರಾಜ್ಯ ಮತ್ತು ದೇಶದ ವಿವಿಧ ಬಾಗಗಳಿಗೆ ಹೋಗುವ ಸಾವಿರಾರು ವಾಹನಗಳು ಜಿಲ್ಲೆಯಲ್ಲಿ ಹಾದು ಹೋಗುತ್ತವೆ. ಅನೇಕ ವಾಣಿಜ್ಯ ವಾಹನಗಳು ಮತ್ತು ಪ್ರವಾಸಿಗರು ಕೂಡಾ ಜಿಲ್ಲೆಗೆ ಹೆಚ್ಚಿನ ಮಟ್ಟದಲ್ಲಿ ಬರ್ತಾರೆ. ಆದರೆ ರಸ್ತೆಯಲ್ಲಿಯೇ ಈ ರೀತಿಯ ಘಟನೆಗಳು ಹಾಡಹಗಲೇ ನಡೆದಿರುವುದು ಜನರ ಆತಂಕವನ್ನು ಹೆಚ್ಚಿಸುತ್ತಿದೆ.
ಬೈಕ್ನಲ್ಲಿ ಬರುವ ದರೋಡೆಕೋರರು ಅಮಾಯಕರಂತೆ ವರ್ತಿಸಿ, ಕಾರುಗಳನ್ನು ನಿಲ್ಲಿಸುತ್ತಿದ್ದು, ಮಾತುಕತೆ ನಡೆಸಿದಂತೆ ಹಾಗೂ ವಿಳಾಸ ಕೇಳಿದಂತೆ ಮಾಡಿ, ಕಾರಿನಲ್ಲಿದ್ದವರನ್ನು ಥಳಿಸುವುದು, ಅವರ ಕಣ್ಣಿಗೆ ಕಾರದಪುಡಿ ಹಾಕುವುದನ್ನು ಮಾಡುತ್ತಿದ್ದಾರೆ.
ಈ ಹಿಂದೆ ಕೂಡಾ ಕೊಪ್ಪಳ ಜಿಲ್ಲೆಯ ಕೆಲವೆಡೆ ಈ ರೀತಿಯ ಘಟನೆಗಳು ನಡೆದಿವೆ. ಲಾರಿಯಲ್ಲಿನ ಅನೇಕ ಸರಕುಗಳನ್ನು ಕೂಡಾ ದೋಚಿಕೊಂಡು ಹೋಗಿರುವ ಘಟನೆಗಳು ನಡೆದಿವೆ. ಆದರೆ ಮೇಲಿಂದ ಮೇಲೆ ಘಟನೆಗಳು ನಡೆಯುತ್ತಿದ್ದರೂ ಕೂಡ ಆರೋಪಿಗಳು ಪತ್ತೆಯಾಗುತ್ತಿಲ್ಲ. ನೆರೆಯ ಜಿಲ್ಲೆ, ನೆರೆಯ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ದುರುಳರು, ದರೋಡೆ ಮಾಡಿಕೊಂಡು ಹೋಗುತ್ತಿರುವ ಮಾಹಿತಿ ಪೊಲೀಸರಿಗೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ತಿಳಿಸಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆ ಜಾರಿಯಲ್ಲಿಟ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳೋದು ದುಸ್ಸಾಧ್ಯ: ಬಸವರಾಜ ರಾಯರೆಡ್ಡಿ
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಹೆದ್ದಾರಿ ಗಸ್ತನ್ನು ಪೊಲೀಸರು ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಹೆಚ್ಚಿನ 112 ವಾಹನಗಳನ್ನು ಕೂಡಾ ಬಿಡಲಾಗಿದೆ. ಆದರೂ ಕೂಡ ಕೆಲವಡೇ ದರೋಡೆಕೋರರು ತಮ್ಮ ಚಾಲಾಕಿತನವನ್ನು ಪ್ರದರ್ಶಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ