ತುಂಗಭದ್ರಾ ಡ್ಯಾಂ ಭರ್ತಿ ಮಾಡಲು ಅಧಿಕಾರಿಗಳ ಹಿಂದೇಟು: ಭರ್ತಿಯಾಗಿದ್ದಾಗಲೇ ಕೊಚ್ಚಿಹೋಗಿತ್ತು ಕ್ರೆಸ್ಟ್​ಗೇಟ್

| Updated By: Ganapathi Sharma

Updated on: Sep 17, 2024 | 2:45 PM

ತುಂಗಭದ್ರಾ ಜಲಾಶಯ ತುಂಬಿದರೆ ಕರ್ನಾಟಕದ ನಾಲ್ಕು ಜಿಲ್ಲೆಗಳು ಸೇರಿದಂತೆ ಮೂರು ರಾಜ್ಯಗಳ ಲಕ್ಷಾಂತರ ಜನರು ಸಂಭ್ರಮಿಸುತ್ತಾರೆ. ಜಲಾಶಯದ ನೀರು ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರವಾಗಿದೆ. ಕ್ರೆಸ್ಟ್​​​ಗಟ್ ದುರಸ್ತಿ ನಂತರ ಇದೀಗ ಮತ್ತೊಮ್ಮೆ ಜಲಾಶಯ ಬಹುತೇಕ ಭರ್ತಿಯಾಗಿದೆ. ಆದರೆ, ಜಲಾಶಯದಲ್ಲಿ ಇನ್ನೂ ನಾಲ್ಕು ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಅಷ್ಟನ್ನು ಭರ್ತಿ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ತುಂಗಭದ್ರಾ ಡ್ಯಾಂ ಭರ್ತಿ ಮಾಡಲು ಅಧಿಕಾರಿಗಳ ಹಿಂದೇಟು: ಭರ್ತಿಯಾಗಿದ್ದಾಗಲೇ ಕೊಚ್ಚಿಹೋಗಿತ್ತು ಕ್ರೆಸ್ಟ್​ಗೇಟ್
ತುಂಗಭದ್ರಾ ಡ್ಯಾಂ ಭರ್ತಿ ಮಾಡಲು ಅಧಿಕಾರಿಗಳ ಹಿಂದೇಟು: ಭರ್ತಿಯಾಗಿದ್ದಾಗಲೇ ಕೊಚ್ಚಿಹೋಗಿತ್ತು ಕ್ರೆಸ್ಟ್​ಗೇಟ್
Follow us on

ಕೊಪ್ಪಳ, ಸೆಪ್ಟೆಂಬರ್ 17: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿ ಇರುವ ತುಂಗಭದ್ರಾ ಜಲಾಶಯ ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಸೇರಿದಂತೆ ನೆರೆಯ ತೆಲಂಗಾಣ, ಆಂಧ್ರಪ್ರದೇಶದ ಹತ್ತಕ್ಕೂ ಜಿಲ್ಲೆಯ ಜನರಿಗೆ ಜೀವಸೆಲೆಯಾಗಿದೆ. ಈ ಜಲಾಶಯದ ನೀರಿನ ಮೇಲೆಯೇ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಜಲಾಶಯದ ನೀರನ್ನು ನಂಬಿಯೇ ಸರಿಸುಮಾರು ಹತ್ತು ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಾರೆ. ಅನೇಕ ಗ್ರಾಮಗಳು, ನಗರಗಳಿಗೆ ಕುಡಿಯುವ ನೀರಿನ ಮೂಲ ಕೂಡಾ ಇದೇ ಜಲಾಶಯವಾಗಿದೆ. ಆದರೆ ಇದೇ ಜಲಾಶಯದ 19 ನೇ ಕ್ರೆಸ್ಟಗೇಟ್, ಆಗಸ್ಟ್ 10 ರಂದು ರಾತ್ರಿ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಗೇಟ್ ದುರಸ್ತಿಗಾಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರನ್ನು ಖಾಲಿ ಮಾಡಲಾಗಿತ್ತು.

ಒಂದು ವಾರದ ನಂತರ ಕೊಚ್ಚಿಕೊಂಡು ಹೋಗಿದ್ದ ಗೇಟ್ ಜಾಗದಲ್ಲಿ ನಿರಂತರ ಶ್ರಮದ ಫಲವಾಗಿ ತಾತ್ಕಾಲಿಕವಾದ ಸ್ಟಾಪ್ ಲಾಗ್ ಗೇಟ್ ಅಳವಡಿಸುವಲ್ಲಿ ತಂತ್ರಜ್ಞರು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದರು. ಇನ್ನು ಅಪಾರ ಪ್ರಮಾಣದ ನೀರನ್ನು ಬಿಟ್ಟಿದ್ದರಿಂದ ಜಲಾಶಯ ಖಾಲಿಯಾಗಿತ್ತು. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ನೀರಿನ ಪ್ರಮಾಣ 71 ಟಿಎಂಸಿಗೆ ಕೆಳಗಿಳಿದಿತ್ತು. ಇನ್ನು ಜಲಾಶಯದ ಗೇಟ್ ದುರಸ್ತಿ ನಂತರ ಮತ್ತೆ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಆದರೆ ಜಲಾಶಯಕ್ಕೆ ಹೆಚ್ಚಿನ ನೀರು ಬಂದರೂ ಕೂಡಾ ಜಲಾಶಯವನ್ನು ಸಂಪೂರ್ಣವಾಗಿ ಭರ್ತಿ ಮಾಡಲು ಸಿಬ್ಬಂದಿ ಈ ಬಾರಿ ಹಿಂದೇಟು ಹಾಕುತ್ತಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ಒಳಹರಿವು

ಜಲಾಶಯಕ್ಕೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಹತ್ತರಿಂದ ಮೂವತ್ತು ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದೆ. ಹೀಗಾಗಿ ಗೇಟ್ ದುರಸ್ತಿಯಾದ ಹದಿನೈದೇ ದಿನಕ್ಕೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವಷ್ಟು ನೀರು ಹರಿದು ಬಂದಿತ್ತು. ಆದರೆ, ಇನ್ನು ನಾಲ್ಕು ಟಿಎಂಸಿಯಷ್ಟು ನೀರು ಸಂಗ್ರಹ ಮಾಡಲು ಅವಕಾಶವಿದೆ. ಆದರೂ ಈ ಬಾರಿ ಸಂಪೂರ್ಣವಾಗಿ ಜಲಾಶಯವನ್ನು ಭರ್ತಿ ಮಾಡುವ ರಿಸ್ಕ್ ತಗೆದುಕೊಳ್ಳಲು ಸಿಬ್ಬಂದಿ ಬಾರಿ ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಜಲಾಶಯದ ನೀರಿನ ಪ್ರಮಾಣವನ್ನು ಕೇವಲ 101.788 ಟಿಎಂಸಿಗೆ ನಿಲ್ಲಿಸಲಾಗಿದೆ. ಪ್ರತಿನಿತ್ಯ ಬರುತ್ತಿರುವ ಒಳ ಹರಿವಿನ ನೀರನ್ನು, ಕ್ಯಾನಲ್ ಮತ್ತು ಗೇಟ್ ಮೂಲಕ ಹೊರಬಿಡಲಾಗುತ್ತಿದೆ. ಆಗಸ್ಟ್ 10 ರಂದು ಜಲಾಶಯ ಸಂಪೂರ್ಣವಾಗಿ ಭರ್ತಿ ಮಾಡಲಾಗಿತ್ತು. 105.788 ಟಿಎಂಸಿ ನೀರು ಸಂಗ್ರಹ ಮಾಡಲಾಗಿತ್ತು. ಆದರೆ ನೀರಿನ ಹೆಚ್ಚಿನ ಒತ್ತಡದಿಂದ 19 ನೇ ಕ್ರೆಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಮತ್ತೊಮ್ಮೆ ಜಲಾಶಯದಲ್ಲಿ ಸಂಪೂರ್ಣ ನೀರು ಸಂಗ್ರಹ ಮಾಡಿದರೆ ತೊಂದರೆಯಾದೀತು ಎಂಬ ಭಯ ಸಿಬ್ಬಂದಿಯನ್ನು ಕಾಡುತ್ತಿದೆ.

ಸಚಿವ ಶಿವರಾಜ್ ತಂಗಡಗಿ ಹೇಳುವುದೇನು?

ಮತ್ತೊಂದೆಡೆ, ಜಲಾಶಯ ಭರ್ತಿಗೆ ಹಿಂದೇಟು ಹಾಕಲಾಗುತ್ತಿದೆ ಎಂಬ ವಾದವನ್ನು ಇದನ್ನು ಸಚಿವ ಮತ್ತು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ನಿರಾಕರಿಸುತ್ತಿದ್ದಾರೆ. ಜಲಾಶಯ ಸುಸ್ಥಿಯಲ್ಲಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ನೀರನ್ನು ಸ್ವಲ್ಪ ಕಡಿಮೆ ಸಂಗ್ರಹ ಮಾಡಲಾಗಿದೆ. ಮುಂದಿನ ದಿನದಲ್ಲಿ ಇನ್ನು ನಾಲ್ಕು ಟಿಎಂಸಿ ನೀರು ಸಂಗ್ರಹ ಮಾಡುತ್ತೇವೆ. ಸಿಎಂ ಬಂದು ಬಾಗೀನ ಕೂಡಾ ಅರ್ಪಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋ​ ಶೂಟ್, ಸಾರ್ವಜನಿಕರ ಆಕ್ರೋಶ

ಜಲಾಶಯ ಸಂಪೂರ್ಣವಾಗಿ ಸುಸ್ಥಿತಿಯಲ್ಲಿದೆ ಅಂತ ಒಂದಡೆ ಸಚಿವರು ಹೇಳ್ತಿದ್ದಾರೆ. ಆದರೆ, ಕಳೆದ ಹದಿನೈದು ದಿನಗಳಿಂದ ನೀರಿನ ಒಳ ಹರಿವು ಇದ್ದರೂ ಕೂಡಾ ಸಿಬ್ಬಂದಿ ನೀರನ್ನು ಸಂಗ್ರಹ ಮಾಡದೇ ಹೊರಗಡೆ ಬಿಡುತ್ತಿದ್ದಾರೆ. ಜಲಾಶಯ ಸುಸ್ಥಿತಿಯಲ್ಲಿದ್ದರೆ, ನೀರು ಸಂಪೂರ್ಣವಾಗಿ ಸಂಗ್ರಹಿಸಬೇಕು. ಇದರಿಂದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅನಕೂಲವಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ