ಕೊಪ್ಪಳ, ಜೂನ್ 6: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣಕ್ಕೆ (Valmiki corporation scam) ಸಂಬಂಧಿಸಿ ಈವರೆಗೆ ಐವರನ್ನು ಎಸ್ಐಟಿ ಬಂಧಿಸಿದೆ. ಪರಶುರಾಮ್, ನೆಕ್ಕಂಟಿ ನಾಗರಾಜ್, ನಾಗೇಶ್ವರ ರಾವ್, ಪದ್ಮನಾಭ, ಸತ್ಯನಾರಾಯಣ ಬಂಧಿತರು. ಐವರನ್ನು ಕಸ್ಟಡಿಗೆ ಪಡೆದು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಸಚಿವ ನಾಗೇಂದ್ರ ಅತ್ಯಾಪ್ತನಾಗಿರುವ ಬಂಧಿತ ನೆಕ್ಕಂಟಿ ನಾಗರಾಜ್ ಯಾರು? ಆತನ ಹಿನ್ನೆಲೆಯೇನು? ರಾಜಕೀಯ ವ್ಯಕ್ತಿಗಳ ಜತೆ ನಂಟೇನು ಎಂಬುದು ಈಗ ಒಂದೊಂದಾಗಿ ಬಯಲಾಗುತ್ತಿದೆ.
ಈತ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಉಳಕ್ಯಾಳ್ ಕ್ಯಾಂಪ್ ನಿವಾಸಿಯಾಗಿದ್ದು, ಸಚಿವ ನಾಗೇಂದ್ರ ಮಾತ್ರವಲ್ಲದೆ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರಿಗೂ ಆಪ್ತನಾಗಿದ್ದಾನೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಿದ್ದ ಆರೊಪಿ ನಾಗರಾಜ್, ಅಧಿಕಾರದಲ್ಲಿರುವ ಪಕ್ಷದ ನಾಯಕರ ಜತೆ ಇರುತ್ತಿದ್ದ.
ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್ಆರ್ ಪಕ್ಷದಿಂದ 2013ರಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ನೆಕ್ಕಂಟಿ ಸ್ಪರ್ಧಿಸಿದ್ದ. ಆ ಚುನಾವಣೆಯಲ್ಲಿ ಆತ 2,609 ಮತ ಪಡೆದಿದ್ದ. ಮೊದಲು ಶ್ರೀರಾಮುಲು ಜೊತೆ ಹೆಚ್ಚಾಗಿ ಇರುತ್ತಿದ್ದ ನಾಗರಾಜ್ ನಂತರ ನಂತರ ನಾಗೇಂದ್ರ ಜೊತೆ ಹೆಚ್ಚು ಗುರುತಿಸಿಕೊಂಡಿದ್ದ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ನಾಗರಾಜ್, ನಂತರ ಕೊಪ್ಪಳದಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದ. ಆದರೆ ನಾಗರಾಜ್ ಕಾಂಗ್ರೆಸ್ ಸೇರ್ಪಡೆಗೆ ತಂಗಡಗಿ ಒಲವು ತೋರಿರಲಿಲ್ಲ. ಹೀಗಾಗಿ ನಾಗೇಂದ್ರ ಜೊತೆ ಗುರುತಿಸಿಕೊಂಡಿದ್ದ.
ಈ ಮಧ್ಯೆ, ಹಗರಣ ಸಂಬಂಧ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ನಲ್ಲಿದ್ದ 45 ಕೋಟಿ ರೂ. ಹಣವನ್ನು ಎಸ್ಐಟಿ ಜಪ್ತಿ ಮಾಡಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿ) ಖಾತೆ ಅಧೀಕ್ಷಕ ಚಂದ್ರಶೇಖರನ್ ಕೆಲವು ದಿನಗಳ ಹಿಂದೆ ತಾವು ಪ್ರತಿದಿನ ಕೆಲಸ ಮಾಡುತ್ತಿದ್ದ ಬೆಂಗಳೂರಿನಿಂದ 300 ಕಿಲೋಮೀಟರ್ ದೂರದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಅದಾದ ಎರಡು ದಿನಗಳ ನಂತರ, ಹೊರಗಡೆ ಹೋಗಿದ್ದ ಕುಟುಂಬದವರು ಸಂಜೆ 5 ಗಂಟೆಗೆ ಮನೆಗೆ ಮರಳಿದಾಗ ಚಂದ್ರಶೇಖರನ್ ಮನೆಯ ಕೋಣೆಯಲ್ಲಿ ಶವವಾಗಿ ಕಂಡುಬಂದಿದ್ದರು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ: ಸಹಕಾರಿ ಬ್ಯಾಂಕ್ನಲ್ಲಿದ್ದ 45 ಕೋಟಿ ರೂ. ಜಪ್ತಿ
ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆಯ ಆರಂಭಿಸಿದಾಗ, ಡೆತ್ ನೋಟ್ ದೊರೆತಿತ್ತು. ‘ಸಚಿವರ ಕಛೇರಿಯಿಂದ ಮೌಖಿಕ ಸೂಚನೆಗಳ’ ಅಡಿಯಲ್ಲಿ ಇಲಾಖೆಯ ಖಾತೆಗಳಿಂದ ವಹಿವಾಟುಗಳ ಅನಧಿಕೃತ ವರ್ಗಾವಣೆ ಆಗಿರುವ ಬಗ್ಗೆ ಗಂಭೀರ ಆರೋಪ ಅದರಲ್ಲಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ವಹಿವಾಟು ನಡೆಸಿದ್ದಕ್ಕೆ ಸಂಬಂಧಿಸಿದ ಹಗರಣವನ್ನು ಬಯಲಿಗೆಳೆಯಲು ಇದು ಕಾರಣವಾಯಿತು.
ನಂತರ ಪ್ರಕರಣ ರಾಜಕೀಯ ಸ್ವರೂಪ ಪಡೆಯಿತು. ಸಚಿವ ನಾಗೇಂದ್ರ ರಾಜೀನಾಮೆಗೆ ಇದೀಗ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿದೆ. ಈ ಮಧ್ಯೆ, ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಕೂಡ ಎಫ್ಐಆರ್ ದಾಖಲಿಸಿಕೊಂಡಿದೆ. ಬೆಂಗಳೂರು ಪೂರ್ವ ವಲಯದ ಡಿಜಿಎಂ ಜೆ. ಮಹೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಯೂನಿಯನ್ ಬ್ಯಾಂಕ್ನ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಸಿಬಿಐ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಚಿವ ನಾಗೇಂದ್ರರಿಂದ ವಿವರ ಪಡೆದಿದ್ದು, ರಾಜೀನಾಮೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:32 am, Thu, 6 June 24