3 OMR ಶೀಟ್, ಎಲೆಕ್ಷನ್ ಮಾದರಿಯಲ್ಲಿ ಭದ್ರತೆ: ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯ ಹಾಜರಾತಿ ವಿವರ ಪ್ರಕಟ
ಅಕ್ರಮಗಳ ಆರೋಪ ಹೊತ್ತ ಕೆಪಿಎಸ್‌ಸಿ ಇಂದು ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯನ್ನ ನಡೆಸಿದೆ. ಈ ಹಿಂದೆ ಆದ ಎಡವಟ್ಟು ಮತ್ತೆ ಆಗಬಾರದು ಅಂತ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದ್ದು, ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯ ಹಾಜರಾತಿ ವಿವರ ಪ್ರಕಟಿಸಿದೆ. ಹಾಗಾದ್ರೆ ಇವತ್ತಿನ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಏನೆಲ್ಲಾ ಆಯ್ತು ಎನ್ನುವುದರ ಸಂಪೂರ್ಣ ವರದಿ ಇಲ್ಲಿದೆ.

ಬೆಂಗಳೂರು, (ನವೆಂಬರ್ 15): ಕೆಪಿಎಸ್‌ಸಿ ಯಾವುದೇ ಪರೀಕ್ಷೆ ಮಾಡಿದ್ರೂ ಸರಿಯಾಗಲ್ಲ. ಸಾಕಷ್ಟು ಅಕ್ರಮಗಳಾಗುತ್ತೆ ಅಂತ ಆರೋಪ ಹೊತ್ತುಕೊಂಡಿದೆ. ಮತ್ತೊಂದು ಕಡೆ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಆಗಿದೆ ಅನ್ನೋ ವಿಚಾರ ಕೂಡ ತೀವ್ರವಾಗಿ ತನಿಖೆ ನಡೆಯುತ್ತಿದೆ. ಈ ನಡುವೆ ಇಂದು (ನವೆಂಬರ್ 15) ಕೆಪಿಎಸ್‌ಸಿಯು, ರಾಜ್ಯಾದ್ಯಂತ ಕೆಎಎಸ್ ಗೆಜೆಟ್ ಪ್ರೊಬೆಷನರಿ ಪ್ರಿಲೀಮ್ಸ್ ಪರೀಕ್ಷೆಯನ್ನ ನಡೆಸಿದೆ. ಇದರ ಬೆನ್ನಲ್ಲೇ ಇದೀಗ ಪರೀಕ್ಷೆ ಹಾಜರಾತಿ ಅಂಕಿ-ಅಂಶ ಪ್ರಕಟಿಸಿದೆ. ಈ ಮೂಲಕ ಈ ಬಾರಿ ಪರೀಕ್ಷೆ ಅಕ್ರಮ ತಡೆಗೆ ಕೆಪಿಎಸ್ಇ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಿದೆ.
ಪರೀಕ್ಷೆ ಹಾಜರಾತಿ ಅಂಕಿ- ಅಂಶ ಪ್ರಕಟ
319 ಕೆಎಎಸ್ ಗೆಜೆಟ್ ಪ್ರೊಬೆಷನರಿ ಪ್ರಿಲೀಮ್ಸ್ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕೆಪಿಎಸ್‌ಸಿ, ಹಾಜರಾತಿ ಅಂಕಿ ಅಂಶ ಪ್ರಕಟಿಸಿದೆ. ಕೆಎಎಸ್ ಗೆಜೆಟ್ ಪ್ರೊಬೆಷನರಿ ಪೂರ್ವಭಾವಿ ಪರೀಕ್ಷೆಗೆ ಒಟ್ಟು 1,47,067 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 1,14,406 ಅಭ್ಯರ್ಥಿಗಳು ಪ್ರವೇಶಪತ್ರ ಹಾಲ್ ಟಿಕೆಟ್) ಡೌನ್ಲೋಡ್ ಮಾಡಿಕೊಂಡಿದ್ದರು. ಆದ್ರೆ, ಶೇ.59ರಷ್ಟು ಅಭ್ಯರ್ಥಿಗಳು ಅಂದರೆ 87,260 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಹಾಜರಾಗಿದ್ದು, ಇನ್ನುಳಿದ 59,807 ಅಭ್ಯರ್ಥಿಗಳು ಗೈರಾಗಿದ್ದಾರೆ. ಪ್ರವೇಶಪತ್ರ ಡೌನ್ಲೋಡ್ ಮಾಡಿದ್ರೂ 27,146 ಅಭ್ಯರ್ಥಿಗಳು ಪರೀಕ್ಷಗೆ ಹಾಜರಾಗಿಲ್ಲ.
ಇದನ್ನೂ ನೋಡಿ: ಹೊಸ ಶರ್ಟ್ ಕತ್ತರಿಸಲು ಹಿಂದೇಟು: ಬನಿಯನ್‌ನಲ್ಲೇ ಕೆಎಎಸ್ ಪರೀಕ್ಷೆ ಬರೆದ ಅಭ್ಯರ್ಥಿ
ಕಟ್ಟುನಿಟ್ಟಾಗಿ ನಡೆದ ಪರೀಕ್ಷೆ
ರಾಜ್ಯದ 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಭದ್ರತೆ ವಹಿಸಲಾಗಿತ್ತು. ಅಡಿ ಅಡಿಗೂ ಪೊಲೀಸರು ಕಣ್ಗಾವಲು ಇರಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ಹೊರ ಹಾಗೂ ಒಳ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಪರೀಕ್ಷೆ ಬರೆಯುವ ಅಭ್ಯರ್ಥಿ ಯಾವುದೇ ರೀತಿ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನ ಕೊಂಡೋಯ್ಯುವಂತಿರಲಿಲ್ಲ. ಜೊತೆಗೆ ವಸ್ತ್ರಸಂಹಿತೆ ಕೂಡ ಜಾರಿ ಮಾಡಲಾಗಿತ್ತು. ಹೀಗಾಗಿ ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲೇ ಅಭ್ಯರ್ಥಿಗಳನ್ನ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯ್ತು.
ಅಭ್ಯರ್ಥಿಗಳು ಧರಿಸಿದ ಅಂಗಿ, ಪ್ಯಾಂಟ್ ಕಿವಿ, ಬಾಯಿ ಸೇರಿದಂತೆ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಪ್ರಮುಖವಾಗಿ ಅನೇಕರು ತುಂಬುತೋಳಿನ ಶರ್ಟ್ ಧರಿಸಿ ಬಂದಿದ್ರು. ಬೇರೆ ವಿಧಿ ಇಲ್ಲದೇ ಅಭ್ಯರ್ಥಿಗಳು ತಮ್ಮ ಫುಲ್ ಸ್ಲೀವ್ ಅನ್ನ ಕಟ್ ಮಾಡಿ ಒಳಗೆ ತೆರಳಿದ್ರು. ಅದರಲ್ಲೂ ಒಬ್ಬ ವಿಶೇಷ ಚೇತನ ಅಭ್ಯರ್ಥಿಯೂ ತನ್ನ ಶರ್ಟ್ ಅನ್ನ ಕತ್ತರಿಸಲು ಇಷ್ಟಪಡದೇ ಕೇವಲ ಬನಿಯನ್ ಧರಿಸಿ ಪರೀಕ್ಷೆ ಬರೆದಿದ್ದಾರೆ. ಕಾರಣ ಅಂಗಿ ತೆಗೆದುಕೊಳ್ಳಲು ಸಹ ಕೆಲವರ ಬಳಿ ಹಣ ಇರಲ್ಲ.
ಈ ಬಾರಿ ಪರೀಕ್ಷೆಯ ಒಎಂಅರ್ ಶೀಟ್‌ನಲ್ಲೂ ಕೂಡ ಬದಲಾವಣೆ ತರಲಾಗಿತ್ತು. ಸಾಮಾನ್ಯವಾಗಿ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂಗಳಲ್ಲಿ ಉತ್ತರಿಸಲು ಅವಕಾಶ ಇರುತ್ತಿತ್ತು.ಆದ್ರೆ ಈ ಬಾರಿ ಹೆಚ್ಚುವರಿಯಾಗಿ ಐದನೇ ಕಾಲಂ ಕೂಡ ಸೇರಿಸಲಾಗಿದ್ದು, ಇದರಲ್ಲಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕು. ಅಭ್ಯರ್ಥಿಗಳು ಯಾವುದೇ ರೀತಿ ಕಾಲಂ ಖಾಲಿ ಬಿಡುವಂತೆ ಇರಲಿಲ್ಲ. ಕಾರಣ ಒಂದು ವೇಳೆ ಉತ್ತರ ಬರೆಯದೇ ಖಾಲಿ ಬಿಟ್ಟರೇ ಅಕ್ರಮದ ಸಂದರ್ಭದಲ್ಲಿ ಉತ್ತರ ತುಂಬುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕಡ್ಡಾಯವಾಗಿ ಎಲ್ಲಾ ಪ್ರಶ್ನೆಗೂ ಉತ್ತರ ಬರೆಯಲೇಬೇಕಿತ್ತು.
ಇನ್ನೂ ಈ ಬಾರಿ ಮೂರು ಒಎಂಆರ್ ಶೀಟ್ ನೀಡಲಾಗಿದೆ. ಒಂದು ಅಭ್ಯರ್ಥಿಗೆ, ಮತ್ತೊಂದು ಕೆಪಿಎಸ್‌ಸಿ ಹಾಗೂ ಇನ್ನೊಂದು ಜಿಲ್ಲಾಧಿಕಾರಿಗಳ ಸ್ಟ್ರಾಂಗ್ ಕೊಠಡಿಯಲ್ಲಿ ಇರಲಿದೆ. ಹೀಗಾಗಿ ಅಕ್ರಮವಾಗಿ ಎಂದು ತಿಳಿದ್ರೆ ಅದನ್ನ ಕ್ರಾಸ್ ಚೆಕ್ ಮಾಡಲು ಸಹಕಾರಿಯಾಗಲಿ ಎನ್ನುವ ಕಾರಣದಿಂದಾಗಿ ಮೂರು ಒಎಂಆರ್ ಶೀಟ್ ನೀಡಲಾಗಿದೆ.
ಒಟ್ಟಿನಲ್ಲಿ ಸಾಲು ಸಾಲು ಅಕ್ರಮದ ಆರೋಪದ ನಡುವೆ ಕೆಪಿಎಸ್‌ಸಿ, ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ನಡೆಸಿದ್ದು, ಅಕ್ರಮ ತಡೆಗೆ ನಾನಾ ಮಾರ್ಗಗಳನ್ನು ಅನುಸರಿಸಿದೆ.
