ಕೆಪಿಎಸ್‌ಸಿ ನೇಮಕಾತಿ ಹಗರಣ: ಸರ್ಕಾರಿ ಹುದ್ದೆಗಳ ಮಾರಾಟ ರಹಸ್ಯ ಹೊರ ಬೀಳಲು ಅದೊಂದೇ ಕಾರಣ ಸಾಕಾಯ್ತು!
ಕೆಪಿಎಸ್‌ಸಿ ನೇಮಕಾತಿ ಹಗರಣ ಬಯಲಾಗಿದ್ದರ ಹಿಂದೆ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಆಂತರಿಕ ಪೈಪೋಟಿ ಮುಖ್ಯ ಕಾರಣ ಎಂಬುದು ಈಗ ತಿಳಿದುಬಂದಿದೆ. ಶಿವಶಂಕರಪ್ಪ ಸಾಹುಕಾರ್ ಅಧಿಕಾರಾವಧಿ ಮುಕ್ತಾಯವಾಗುವುದು ಹತ್ತಿರವಾಗುತ್ತಿದ್ದಂತೆಯೇ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿತ್ತು. ಇದೇ ಹೊತ್ತಲ್ಲಿ ಸಾಹುಕಾರ್ ಮಗಳ ಪ್ರಕರಣ ಮುನ್ನೆಲೆಗೆ ಬಂದಿರುವುದು ಕೆಪಿಎಸ್‌ಸಿಯ ಒಂದೊಂದೇ ಅಕ್ರಮಗಳನ್ನು ಹೊರಗೆಡವಲು ಕಾರಣವಾಯಿತು.

ಬೆಂಗಳೂರು, ಅಕ್ಟೋಬರ್ 9: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿರುವ ನೇಮಕಾತಿ ಅಕ್ರಮಗಳು ಸಂಸ್ಥೆಯೊಳಗಿನ ಅಧಿಕಾರದ ಪೈಪೋಟಿ ಮತ್ತು ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿಂದಲೇ ಹೊರಬಂತು ಎಂಬುದು ಗೊತ್ತಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಪೈಪೋಟಿಯೇ ಹಗರಣದ ಕೆಲವು ವಿಚಾರಗಳು ಬಹಿರಂಗವಾಗಲು ಕಾರಣವಾಯಿತು ಎನ್ನಲಾಗಿದೆ. ಶಿವಶಂಕರಪ್ಪ ಸಾಹುಕಾರ್ ಅಧಿಕಾರಾವಧಿ 2027ರ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಅಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರ ನಡುವೆ ಪೈಪೋಟಿ ಆರಂಭವಾಗಿತ್ತು. ಈ ನಡುವೆ, ಕಳೆದ ಮೂರು ವರ್ಷಗಳಲ್ಲಿ ಆಯೋಗದ ಸದಸ್ಯರ ಸಂಖ್ಯೆ 8ರಿಂದ 18ಕ್ಕೆ ಏರಿಕೆಯಾಗಿದೆ. ಇದರಿಂದ ಸದಸ್ಯರ ನಡುವೆ ಗುಂಪುಗಾರಿಕೆ ಮತ್ತು ಅಧಿಕಾರಕ್ಕಾಗಿ ಪೈಪೋಟಿ ಹೆಚ್ಚಾಗಿತ್ತು.
ಸಾಹುಕಾರ್ ಮಗಳ ಪ್ರಕರಣ ಸೋರಿಕೆ ಬೆನ್ನಲ್ಲೇ ಹೊರಬಂದವು ಸಾಲುಸಾಲು ಸತ್ಯ!
ಈ ಬೆಳವಣಿಗೆಗಳ ನಡುವೆ, ಶಿವಶಂಕರಪ್ಪ ಸಾಹುಕಾರ್ ಮಗಳು ಪಶುವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪದ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಮಾಹಿತಿ ಆಯೋಗದ ಕೆಲವು ಸದಸ್ಯರಿಗೆ ಮೊದಲೇ ತಿಳಿದಿತ್ತು ಎನ್ನಲಾಗಿದ್ದು, ಅಧ್ಯಕ್ಷ ಸ್ಥಾನದಿಂದ ಅವರನ್ನು ದೂರವಿಡಲು ಅಥವಾ ರಾಜೀನಾಮೆಗೆ ಒತ್ತಡ ಹೇರಲು ವಿರೋಧಿ ಬಣದ ಸದಸ್ಯರು ಈ ವಿಚಾರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದ ಬೆನ್ನಲ್ಲೇ ಕೆಪಿಎಸ್‌ಸಿಯ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಹಣಕಾಸಿನ ಡೀಲ್‌ಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಬಹಿರಂಗವಾಗತೊಡಗಿದವು. ಜ್ಞಾನೇಂದ್ರ ಕುಮಾರ್ ನೇತೃತ್ವದ ಗುಂಪು ಹಾಗೂ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಇತರ ಸದಸ್ಯರನ್ನು ಒಳಗೊಂಡ ಗುಂಪಿನ ನಡುವಿನ ಆಂತರಿಕ ಸಂಘರ್ಷವೂ ಈ ಬೆಳವಣಿಗೆಗಳಿಗೆ ಕಾರಣವಾಗಿದೆ.
ಹತ್ತು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ
ಕೆಪಿಎಸ್‌ಸಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹತ್ತು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿತ್ತು ಮತ್ತು ಇದಕ್ಕಾಗಿ ಹಣ ಪಡೆಯಲಾಗಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ. ಪರೀಕ್ಷೆಗೆ ಒಂದು ದಿನ ಮುಂಚೆ ಹತ್ತು ಅಭ್ಯರ್ಥಿಗಳು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಮತ್ತು ವಿಲ್ಲಾದಲ್ಲಿ ತಂಗಿದ್ದರು. ಅಲ್ಲಿ ಅವರಿಗೆ 80 ಪ್ರಶ್ನೆಗಳು ಹಾಗೂ ಅವುಗಳ ಸರಿಯಾದ ಉತ್ತರಗಳನ್ನು ನೆನಪಿಟ್ಟುಕೊಳ್ಳಲು ತರಬೇತಿ ನೀಡಲಾಗಿತ್ತು ಎಂಬ ಆರೋಪವಿದೆ.
ಪ್ರತಿ ಅಭ್ಯರ್ಥಿಯಿಂದ ₹40–50 ಲಕ್ಷ ಸಂಗ್ರಹ?
ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸುವುದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ ₹40 ಲಕ್ಷದಿಂದ ₹50 ಲಕ್ಷದವರೆಗೆ ಹಣ ಸಂಗ್ರಹಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮೂಲಕ ಪ್ರಶ್ನೋತ್ತರಗಳನ್ನು ಪಡೆಯಲಾಗಿತ್ತು ಎನ್ನಲಾಗಿದ್ದು, ಮತ್ತೊಂದೆಡೆ ಬಸವರಾಜ ಕನ್ನಾಳೆ ಹಾಗೂ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ. ಗೀತಾ ಅವರಿಗೂ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು ತಲುಪಿದ್ದವು. ಇವರು ಅಭ್ಯರ್ಥಿಗಳಿಗೆ ಪ್ರಶ್ನೋತ್ತರಗಳನ್ನು ಒದಗಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಯ ವೇಳೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ₹80 ಲಕ್ಷ ಮೌಲ್ಯದ ಸಹಿ ಮಾಡಿದ ಖಾಲಿ ಚೆಕ್‌ಗಳು ಮತ್ತು ಖಾಲಿ ಪ್ರಾಮಿಸರಿ ನೋಟ್‌ಗಳನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿತ್ತು. ಈ ದಾಖಲೆಗಳು ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರಗಳ ತನಿಖೆಯಲ್ಲಿ ಮಹತ್ವ ಪಡೆದಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




