ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಯಲ್ಲಿ ನಡೆದಿದ್ದ ಹಗರಣ ಸಂಬಂಧ ಬಗೆದಷ್ಟು ವಿಚಾರಗಳು ಬಯಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಇದೀಗ ಮತ್ತೆ ಮೂವರನ್ನು ಬಂಧಿಸುವ ಮೂಲಕ ಬಂಧಿತರ ಒಟ್ಟು ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜ್ಯೂನಿಯರ್ ಲೈನ್‌ಮ್ಯಾನ್ ಆಗಿರುವ ಹುಕ್ಕೇರಿ ತೂಲೂಕಿನ ಗಿರೀಶ ಬನಾಜ್, ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದ ಬೀರಪ್ಪ ಲಕ್ಷ್ಮಣ ಹಣಗಂಡಿ, ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದ ಶಿವಾನಂದ ದುಂಡಪ್ಪ ಹಳ್ಳೂರ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಯಲ್ಲಿ ಆರೋಪಿ ಗಿರೀಶ್ ಉತ್ತರ ತಯಾರಿಸಿ ಅಭ್ಯರ್ಥಿಗಳಿಗೆ ಹೇಳಲು ಸಹಕರಿದ್ದನು. ಆರೋಪಿ ಲಕ್ಷ್ಮಣ್ ಸ್ಮಾರ್ಟ್ ವಾಚ್ ಖರೀದಿ ಮಾಡಿ ಅಭ್ಯರ್ಥಿಗಳಿಗೆ ನೀಡಿದ್ದ. ಮತ್ತೋರ್ವ ಆರೋಪಿ ಶಿವಾನಂದ ಇಲೆಕ್ಟ್ರಾನಿಕ್ ಡಿವೈಸ್ ತಗೆದುಕೊಂಡು ಪರೀಕ್ಷೆ ಬರೆಯಲು ಹೋಗಿದ್ದ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಶಿವಾನಂದ ಬಳಿಯಿಂದ 5 ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಡಿವೈಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆ.7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್‌ನಲ್ಲಿ ಸ್ಮಾರ್ಟ್ವಾಚ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು. ಈ ಸಂಬಂಧ ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪರೀಕ್ಷಾರ್ಥಿ ಸಿದ್ದಪ್ಪ ಮದೀಹಳ್ಳಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಸಿದ್ದಪ್ಪ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಕೆಪಿಟಿಸಿಎಲ್ 600 ಕಿರಿಯ ಸಹಾಯಕ ಹುದ್ದೆಗಳಿಗಾಗಿ ರಾಜ್ಯಾದ್ಯಂತ 3 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 am, Tue, 6 September 22