ಕೋಡಿ ಬಿದ್ದು ಹರಿಯುತ್ತಿರುವ ವಾಣಿವಿಲಾಸ ಸಾಗರ ಜಲಾಶಯ: ಹಲವೆಡೆ ಅವಾಂತರ
ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದ ಹಿನ್ನೆಲೆ ಹೊಸದುರ್ಗ ತಾಲ್ಲೂಕಿನ ಪೂಜಾರಹಟ್ಟಿ ಗ್ರಾಮಕ್ಕೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿವೆ. ಹಿನ್ನೀರಿನ ಭಾಗದಲ್ಲಿರುವ ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ನೀರಿ ಹೊರ ಹರಿವು ಆಗುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಬಳಿಯ ಅಣೆಕಟ್ಟು ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹೊಸದುರ್ಗ ತಾಲ್ಲೂಕಿನ ಪೂಜಾರಹಟ್ಟಿ ಗ್ರಾಮಕ್ಕೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿವೆ. ಅಣೆಕಟ್ಟಿನ ಹಿನ್ನೀರಿನ ಭಾಗದಲ್ಲಿರುವ ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ. ಇಷ್ಟೆಲ್ಲಾ ಭೀತಿಯಿಂದ ಜನರು ಕಾಲ ಕಳೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಣುಮುಚ್ಚಿ ಕುಳಿತುಕೊಂಡಿದ್ದು, ಶೋಚನೀಯ ಪರಿಸ್ಥಿತಿಯ ನಡುವೆ ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನೊಂದೆಡೆ ರಾಯಚೂರಿನಲ್ಲಿರುವ ಮಸ್ಕಿ ಜಲಾಶಯ ಕೂಡ ಭರ್ತಿಗೊಂಡಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಬಳಿಯ ಕಿರು ಜಲಾಶಯ ಭರ್ತಿಗೊಂಡಿದ್ದು, ಎರಡು ಗೇಟ್ ಮೂಲಕ 300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಸ್ಕಿ ಹಳ್ಳಕ್ಕೆ ನೀರು ಬಿಡುಗಡೆ ಮಾಡಲಾಗಿದ್ದು, ಸದ್ಯ ಜಲಾಶಯಕ್ಕೆ 500 ಕ್ಯೂಸೆಕ್ ನೀರಿನ ಒಳಹರಿವು ಕೂಡ ಆಗಿದೆ. ಸದ್ಯ ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದ್ದು, ಅಧಿಕಾರಿಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಹಳ್ಳದ ಪಾತ್ರದ ಜನ ಹಳ್ಳದಲ್ಲಿ ಇಳಿಯುವುದು, ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟಲ್ಲದೆ, ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ಕೊತ್ತನೂರು ಗ್ರಾಮ ಜಲಾವೃತವಾದ ಘಟನೆಯೂ ನಡೆದಿದೆ. ಹಲವಾರು ಮನೆಗಳು ಜಲಾವೃತವಾಗುವುದರ ಮೂಲಕ ಜನ ಜೀವನ ಅಸ್ತವ್ಯಸ್ತ ಆಗಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ ಜನರು ನೀರಿನಲ್ಲೆ ಪರದಾಡುವಂತಾಗಿದೆ. ಮನೆಯಲ್ಲಿ ಇದುವರೆಗೂ ಅಡುಗೆ ಮಾಡಲು ಸಾದ್ಯವಾಗದ ಪರಿಸ್ಥಿತಿ ಇದ್ದರೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Tue, 6 September 22