ಕೆ.ಆರ್ ಮಾರುಕಟ್ಟೆ ಪಾರ್ಕಿಂಗ್​ನಲ್ಲಿ ವಾರಸುದಾರರೇ ಇಲ್ಲದ ಹತ್ತಾರು ವಾಹನಗಳ ರಾಶಿ; ಸ್ಮಾರ್ಟ್​ ಪಾರ್ಕಿಂಗ್ ಕಾಮಗಾರಿಗೆ ಅಡ್ಡಿ

ಕೆ.ಆರ್ ಪೇಟೆ ಯಾವಾಗಲೂ ಜನರಿಂದ ತುಂಬಿರುವ ಜಾಗ. ಇಲ್ಲಿನ ಬೇಸ್ಮೆಂಟ್ ಪಾರ್ಕಿಂಗ್​ ಅಭಿವೃದ್ಧಿಗಾಗಿ ಜಿಬಿಎ ನಿರ್ಧಾರ ಮಾಡಿದೆ. ಸ್ಮಾರ್ಟ್​ ಪಾರ್ಕಿಂಗ್​ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದೆ. ಈ ಹಿನ್ನೆಲೆ 10 ವರ್ಷದ ಅವಧಿಗೆ ಗುತ್ತಿಗೆಯನ್ನೂ ನೀಡಲಾಗಿದೆ. ಆದರೆ ಬೇಸ್ಮೆಂಟ್​ನಲ್ಲಿ ವಾರಸುದಾರರೇ ಇಲ್ಲದ ಹತ್ತಾರು ವಾಹನಗಳ ರಾಶಿ ಬಿದ್ದಿದ್ದು, ಸ್ಮಾರ್ಟ್​ ಪಾರ್ಕಿಂಗ್ ಕಾಮಗಾರಿಗೆ ಅಡ್ಡಿಯಾಗಿದೆ.

ಕೆ.ಆರ್ ಮಾರುಕಟ್ಟೆ ಪಾರ್ಕಿಂಗ್​ನಲ್ಲಿ ವಾರಸುದಾರರೇ ಇಲ್ಲದ ಹತ್ತಾರು ವಾಹನಗಳ ರಾಶಿ; ಸ್ಮಾರ್ಟ್​ ಪಾರ್ಕಿಂಗ್ ಕಾಮಗಾರಿಗೆ ಅಡ್ಡಿ
ಕೆ ಆರ್ ಮಾರುಕಟ್ಟೆಗೆ ಡಿಜಿಟಲ್ ಸ್ಪರ್ಶ
Edited By:

Updated on: Oct 04, 2025 | 10:13 AM

ಬೆಂಗಳೂರು, ಅಕ್ಟೋಬರ್ 4: ಕೆ.ಆರ್ ಮಾರುಕಟ್ಟೆ (K R Market)  ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಇಂತಹ ಜಾಗದಲ್ಲಿ ಒಂದು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗಾಗಿ ಜನರು ಹಾತೊರೆಯುತ್ತಿದ್ದರು. ಈಗ ಮಾರುಕಟ್ಟೆಯ ಪಾರ್ಕಿಂಗ್ ಬೇಸ್ಮೆಂಟ್​ಗೆ ಡಿಜಿಟಲ್ ಸ್ಪರ್ಶ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಈಗಾಗಲೇ ಒಂದು ಸಂಸ್ಥೆಗೆ ಟೆಂಡರ್ ನೀಡಿಯೂ ಆಗಿದೆ. ಆದರೆ ಕೆಲಸದಲ್ಲಿ ವಿಳಂಬವಾಗುತ್ತಿದೆ. ಮಾಲೀಕರಿಲ್ಲದೇ ಬಿದ್ದಿರುವ ನೂರಾರು ವಾಹನಗಳು ಡಿಜಿಟಲೀಕರಣಕ್ಕೆ ಅಡ್ಡಿಯಾಗುತ್ತಿವೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅನಾಥ ಕಾರು, ಬೈಕುಗಳಿಂದ ಕಾಮಗಾರಿಯಲ್ಲಿ ವಿಳಂಬ

ಕೆ.ಆರ್ ಮಾರುಕಟ್ಟೆಯ ಬೇಸ್ಮೆಂಟ್​ನಲ್ಲಿ ಸ್ಮಾರ್ಟ್​ ಪಾರ್ಕಿಂಗ್ ವ್ಯವಸ್ಥೆಗೆ ಜಿಬಿಎ ನಾಂದಿ ಹಾಡಿದೆ. ಆದರೆ ಬೇಸ್ಮೆಂಟ್ನಲ್ಲಿ ನೂರಾರು ವಾಹನಗಳು ತುಕ್ಕುಹಿಡಿಯುತ್ತಿವೆ. 5 ರಿಂದ 10 ವರ್ಷಗಳಿಂದ ಈ ವಾಹನಗಳು ಬಿದ್ದಲ್ಲೇ ಬಿದ್ದಿವೆ. ವಾಹನಗಳ ದಾಖಲೆಗಳಾಗಲಿ, ಮಾಲೀಕರಾಗಲಿ ಪತ್ತೆಯೇ ಇಲ್ಲ. ಹೀಗೆ ಅನಾಥವಾಗಿ ಬಿದ್ದಿರುವ ನೂರಾರು ಕಾರುಗಳು, ಆಟೋಗಳು ಮತ್ತು ಬೈಕ್​ಗಳು ಪಾರ್ಕಿಂಗ್ನ ಹೊಸ ರೂಪಾಂತರಕ್ಕೆ ಅಡ್ಡಿಯಾಗುತ್ತಿವೆ. ಈಗಾಗಲೇ 10 ವರ್ಷಕ್ಕೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಆದರೆ ಪಾರ್ಕಿಂಗ್ ಜಾಗದಲ್ಲಿ ಅನಾಥವಾಗಿರುವ ವಾಹನಗಳು ಸ್ಮಾರ್ಟ್​ ಪಾರ್ಕಿಂಗ್ ಕಾಮಗಾರಿಗೆ ಅಡ್ಡಿಯಾಗಿವೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಯಲ್ಲಿ ವಿಳಂಬವಾಗಿ ಗುತ್ತಿಗೆದಾರರ ಪರದಾಟ

ಬೇಸ್ಮೆಂಟ್ ಪ್ರವೇಶ ಮತ್ತು ನಿರ್ಗಮನ ಎಲ್ಲವೂ ಡಿಜಿಟಲ್ ಆಗಿರಲಿವೆ. ಈ ಪಾರ್ಕಿಂಗ್ ಲಾಟ್ ನಲ್ಲಿ400 ಬೈಕ್​ಗಳು ಹಾಗೂ 200 ಕಾರುಗಳು ಪಾರ್ಕ್ ಮಾಡಬಹುದಾಗಿದೆ. ಇದ್ದ ಪಾರ್ಕಿಂಗ್  ಮುಚ್ಚಿರುವುದರಿಂದ  ಕೆ.ಆರ್ ಮಾರ್ಕೆಟ್​ಗೆ ಗ್ರಾಹಕರೇ ಬರುತ್ತಿಲ್ಲ. ಇದರಿಂದ ವ್ಯಾಪಾರ ಇಲ್ಲದೆ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದು, ಬೇಗ ಕೆಲಸ ಮುಗಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಕೊಡಿ ಎಂದು ವ್ಯಾಪಾರಿಗಳು ಮತ್ತು ಗ್ರಾಹಕರು ಕೇಳಿಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಪಾರ್ಕಿಂಗ್ ಉದ್ಘಾಟನೆ ಆಗುವ ಸಾಧ್ಯತೆ ಇದೆ.  ಜಿಬಿಎಯಿಂದಲೂ ಗುತ್ತಿಗೆದಾರರಿಗೆ ಡೆಡ್ಲೈನ್ ನೀಡಲಾಗಿದೆ. ಆದರೆ ಸದ್ಯ ಟೆಂಡರ್ ಪಡೆದ ಕಂಪನಿಗೆ ಕ್ಲೀನಿಂಗ್ ಪ್ರಕ್ರಿಯೆಯೇ ದೊಡ್ಡ ಸವಾಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ