ಶಿರಹಟ್ಟಿ ಪಟ್ಟಣ ಪಂಚಾಯ್ತಿ ಕಚೇರಿ: ಬೀಳುವ ಭೀತಿಯಲ್ಲಿರುವ 120 ವರ್ಷಗಳ ಹಳೆಯ ಕಟ್ಟಡ
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯ್ತಿ ಕಚೇರಿಯು 120 ವರ್ಷಗಳಷ್ಟು ಹಳೆಯದಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದರೆ ಕಚೇರಿಯೊಳಗೆ ನೀರು ತುಂಬಿ, ಸಿಬ್ಬಂದಿ ಕೆಲಸ ಮಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖ ದಾಖಲೆಗಳ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗದಗ, ಅ.4: ಗದಗ (Gadag) ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯ್ತಿ ಕಚೇರಿಯ ಪರಿಸ್ಥಿತಿ ಅಯೋಮಯವಾಗಿದ್ದು, ಇಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 120 ವರ್ಷಗಳಷ್ಟು ಹಳೆಯದಾದ ಕಟ್ಟಡದಲ್ಲಿ ಪಟ್ಟಣ ಪಂಚಾಯ್ತಿಯು ಕಾರ್ಯನಿರ್ವಹಿಸುತ್ತಿದೆ. ಮಳೆಗಾಲದಲ್ಲಿ ಈ ಕಚೇರಿಯು ಸಂಪೂರ್ಣವಾಗಿ ನೀರು ತುಂಬಿ ಚಿಕ್ಕ ಕೆರೆಯಂತೆ ಆಗುತ್ತದೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಚೇರಿಯ ಮುಖ್ಯ ದ್ವಾರದಿಂದ ಪ್ರವೇಶಿಸುತ್ತಿದ್ದಂತೆ ಮಳೆ ನೀರು ನಿಂತು ಚಿಕ್ಕ ಕೆರೆಯಂತೆ ಕಾಣುತ್ತದೆ. ಕಚೇರಿಯ ಎಡಭಾಗದಲ್ಲಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿಗಳು ದುಸ್ಥಿತಿಯಲ್ಲಿದೆ. ಕೊಠಡಿಗಳ ಮೇಲ್ಛಾವಣಿ ಸಂಪೂರ್ಣವಾಗಿ ಅಸ್ಥಿಪಂಜರದಂತಾಗಿದ್ದು, ಸ್ವಲ್ಪ ಮಳೆ ಬಂದರೂ ನೀರು ಸೋರಿ ಸಂಪೂರ್ಣ ಕೊಠಡಿ ನೀರಿನಿಂದ ಮುಳುಗಿರುತ್ತದೆ. ಮಳೆಯಿಂದಾಗಿ ಕಟ್ಟಿಗೆಗಳು ಕೊಳೆತು ಹೋಗಿದ್ದು, ಕಚೇರಿ ಯಾವಾಗ ಬೀಳುತ್ತೋ ಏನಾಗುತ್ತೋ ಎಂಬ ಆತಂಕದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಭೆ-ಸಮಾರಂಭಗಳು ನಡೆಯುವ ಈ ಕೊಠಡಿಯಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ಮುಖ್ಯಾಧಿಕಾರಿಗಳ ಕೊಠಡಿ ಒಂದನ್ನು ಹೊರತುಪಡಿಸಿ, ಕಚೇರಿಯ ಉಳಿದ ಎಲ್ಲಾ ಭಾಗಗಳು, ವಿಶೇಷವಾಗಿ ಕಂದಾಯ ವಿಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಮಳೆಯಿಂದ ಕಂಪ್ಯೂಟರ್‌ಗಳು ಮತ್ತು ಪ್ರಮುಖ ದಾಖಲೆಗಳನ್ನು ರಕ್ಷಿಸಲು ಸಿಬ್ಬಂದಿಗಳು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
