ಕೆಆರ್​ಎಸ್ ಡ್ಯಾಂ ಅಡಿಗಲ್ಲು: ಮಹದೇವಪ್ಪ ಹೇಳಿಕೆಗೆ ಐತಿಹಾಸಿಕ ಪುರಾವೆ ಇದೆಯೇ? ತಜ್ಞರು ಹೇಳೋದೇ ಬೇರೆ! ಇಲ್ಲಿದೆ ಸಮಗ್ರ ವಿವರ

ಕೆಆರ್​ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಮಹದೇವಪ್ಪ ಹೇಳಿಕೆ ಈಗ ವಿವಾದಕ್ಕೆ ಗ್ರಾಸವಾಗಿದೆ. ಹಾಗೆಂದು, ಟಿಪ್ಪು ಕಾಲದ ಮೂರು ಶಿಲಾನ್ಯಾಸದ ಕಲ್ಲುಗಳು ಕೆಆರ್​​ಎಸ್ ಡ್ಯಾಂ ಆವರಣದಲ್ಲಿರುವುದು ನಿಜ. ಆದರೆ, ಅದುವೇ ಕೆಆರ್​ಎಸ್ ಜಲಾಶಯದ ಅಡಿಗಲ್ಲೇ? ಅಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. ಹಾಗಾದರೆ, ಕೆಆರ್​ಎಸ್ ಜಲಾಶಯದ ಇತಿಹಾಸವೇನು? ತಜ್ಞರು, ಸಂಶೋಧಕರು ಹೇಳುವುದೇನು? ಸಂಪೂರ್ಣ ವಿವರ ಇಲ್ಲಿದೆ.

ಕೆಆರ್​ಎಸ್ ಡ್ಯಾಂ ಅಡಿಗಲ್ಲು: ಮಹದೇವಪ್ಪ ಹೇಳಿಕೆಗೆ ಐತಿಹಾಸಿಕ ಪುರಾವೆ ಇದೆಯೇ? ತಜ್ಞರು ಹೇಳೋದೇ ಬೇರೆ! ಇಲ್ಲಿದೆ ಸಮಗ್ರ ವಿವರ
ಕೆಆರ್​ಎಸ್ ಡ್ಯಾಂ

Updated on: Aug 04, 2025 | 11:33 AM

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ (KRS Dam) ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಮಹದೇವಪ್ಪ ಹೇಳಿಕೆ ಈಗ ಕರ್ನಾಟಕದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ರಾಜಕೀಯವಾಗಿ ಈ ಹೇಳಿಕೆಗೆ ಬಂದಿರುವ ಆಕ್ಷೇಪಗಳು ಒಂದೆಡೆಯಾದರೆ, ಇತಿಹಾಸ ತಜ್ಞರಿಂದಲೂ ಸಚಿವರ ಮಾತಿಗೆ ವಿರೋಧ ವ್ಯಕ್ತವಾಗಿದೆ. ಹಾಗೆಂದು, ಟಿಪ್ಪು ಕಾಲದಲ್ಲಿ ಬರೆದ ಮೂರು ಶಿಲಾನ್ಯಾಸದ ಕಲ್ಲುಗಳು ಕೆಆರ್​ಎಸ್ ಡ್ಯಾಂ ಆವರಣದಲ್ಲಿರುವುದು ನಿಜ. ಹಾಗಾದರೆ ಅವುಗಳು ಎಲ್ಲಿಂದ ಬಂದವು? ಇತಿಹಾಸದ ಪ್ರಕಾರ, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದರೆ, 1911 ರಲ್ಲಿ ಕೆಆರ್​ಎಸ್ ಡ್ಯಾಂ ಕಾಮಗಾರಿ ಶುರುವಾಗಿ 1932ರಲ್ಲಿ ಲೋಕಾರ್ಪಣೆಯಾಗಿದೆ. ಹಾಗಾದರೆ, 117 ವರ್ಷದ ಮುಂಚಿತವಾಗಿಯೇ ಅಡಿಗಲ್ಲು‌ ಹಾಕಲಾಗಿತ್ತೇ? ಇಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು.

ಕೆಆರ್​ಎಸ್ ಡ್ಯಾಂ ಸಂಕ್ಷಿಪ್ತ ಹಿನ್ನೆಲೆ

ಲಭ್ಯವಿರುವ ದಾಖಲೆಗಳ ಪ್ರಕಾರ, ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕೆಆರ್​​ಎಸ್ ಡ್ಯಾಂ ಸಿದ್ಧಗೊಂಡಿದೆ. ಸರ್ ಎಂ ವಿಶ್ವೇಶ್ವರಯ್ಯ ಅವ ಎಂಜಿನಿಯರಿಂಗ್ ಕೌಶಲದ ಫಲವಾಗಿ ಜಲಾಶಯ ನಿರ್ಮಾಣವಾಗಿದೆ. ವಿಶ್ವೇಶ್ವರಯ್ಯ ಅವರ ಪ್ರಸ್ತಾವನೆಯಯಂತೆ 1911 ರ ಅಕ್ಟೋಬರ್ 11 ರಂದು 81 ಲಕ್ಷ ರೂ. ಮೊತ್ತವನ್ನು ಮೀಸಲಿಡುವ ಮೂಲಕ ಡ್ಯಾಂಗೆ ಯೋಜನೆ ಸಿದ್ಧಗೊಂಡಿತ್ತು.

ಕಾವೇರಿ ನದಿಗೆ ಡ್ಯಾಂ ನಿರ್ಮಿಸುವ ಇರಾದೆ ಟಿಪ್ಪು ಸುಲ್ತಾನ್​​ಗಿತ್ತೇ?

ಟಿಪ್ಪು ಸುಲ್ತಾನ್​​​ಗಿಂತಲೂ ಮೊದಲೇ ಗಂಗರ ಆಡಳಿತ ಕಾಲದಲ್ಲಿ ಕಾವೇರಿ ನದಿಗೆ 2 ಚಿಕ್ಕ ಡ್ಯಾಂಗಳನ್ನು ನಿರ್ಮಿಸಲಾಗಿತ್ತು ಎಂದು ಸಂಶೋಧಕ ಹಾಗೂ ಇತಿಹಾಸ ತಜ್ಞರಾಗಿರುವ ತಲಕಾಡು ಚಿಕ್ಕರಂಗೇಗೌಡ ತಿಳಿಸಿದ್ದಾರೆ. ಮೂರನೇ ಡ್ಯಾಂ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಚಿಂತನೆ ನಡೆಸಲಾಗಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. 1791ರಲ್ಲಿ ಟಿಪ್ಪು ಸುಲ್ತಾನ್ ಒಂದು ಯೋಜನೆಯನ್ನು ಅಂದಿನ ನೀರಾವರಿ ತಂತ್ರಜ್ಞರಿಂದ ಸಿದ್ಧಪಡಿಸಿದ್ದರು. ಸುಮಾರು 70 ಅಡಿಗಳ ಎತ್ತರದ ಡ್ಯಾಂ ಅನ್ನು ಕಾವೇರಿ ನದಿಗೆ ಕಟ್ಟಬೇಕು ಎಂಬ ಯೋಜನೆ ಸಿದ್ಧಮಾಡಿಸಿದ್ದರು. ಆ ಡ್ಯಾಂ ನಿರ್ಮಾಣಕ್ಕೆ ದುಡ್ಡು ಕೂಡ ಮೀಸಲಿಟ್ಟಿದ್ದರು. ನಂತರ ಅದಕ್ಕೆ ಶಂಕುಸ್ಥಾಪನೆಯನ್ನು ಕೂಡ ಮಾಡಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದು ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

ನನಸಾಗಿತ್ತೇ ಟಿಪ್ಪು ಸುಲ್ತಾನ್ ಕನಸು?

ಟಿಪ್ಪು ಡ್ಯಾಂ ಕನಸು ಕಾಣುತ್ತಿದ್ದ ಸಂದರ್ಭದಲ್ಲೇ ಏಕಾಯಕಿ ಮೂರನೇ ಮೈಸೂರು ಯುದ್ಧ ಪ್ರಾರಂಭ ಆಗುತ್ತದೆ. ಆ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋಲುತ್ತಾರೆ. ಬಳಿಕ ಬ್ರಿಟಿಷರ ಜೊತೆ ಒಂದು ಒಪ್ಪಂದಕ್ಕೆ ಬರಬೇಕಾಗುತ್ತದೆ. ಅದರಂತೆ, ಯುದ್ಧದ ಖರ್ಚು ವೆಚ್ಚ ಎಂದು ಮೂರು ಕೋಟಿ ರೂಪಾಯಿಗೂ ಹೆಚ್ಚು ದುಡ್ಡನ್ನು ಕಟ್ಟಿಕೊಡುವುದರ ಜತೆಗೆ ಇಬ್ಬರು ಮಕ್ಕಳನ್ನು ಒತ್ತೆಯಿಡಬೇಕಾದ ಸಂಕಷ್ಟ ಟಿಪ್ಪುಗೆ ಎದುರಾಗುತ್ತದೆ. ಈ ಸಂಕಷ್ಟದಿಂದಾಗಿ ಟಿಪ್ಪು ಡ್ಯಾಂನ ಯೋಜನೆಯನ್ನು ಕೈಬಿಡುತ್ತಾರೆ ಎಂಬುದು ದಾಖಲೆಗಳಲ್ಲಿದೆ ಎಂದು ತಲಕಾಡು ಚಿಕ್ಕರಂಗೇಗೌಡ ಮಾಹಿತಿ ನೀಡಿದ್ದಾರೆ.

ಕೆಆರ್​ಎಸ್ ಡ್ಯಾಂ ಟಿಪ್ಪು ಕನಸು ಎನ್ನಲು ಇಲ್ಲ ಪುರಾವೆ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಗಿನ ಕೆಆರ್​​ಎಸ್ ಡ್ಯಾಂ ಇರುವ ಜಾಗದಲ್ಲೇ ಅಣೆಕಟ್ಟೆ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಮುಂದಾಗಿದ್ದರೇ ಎಂಬುದಕ್ಕೆ ಪುರಾವೆಗಳಿಲ್ಲ. ಅಷ್ಟಕ್ಕೂ, ಟಿಪ್ಪು ನಿರ್ಮಾಣ ಮಾಡಲು ಉದ್ದೇಶಿಸಿದ್ದು 70 ಅಡಿ ಎತ್ತರದ ಡ್ಯಾಂ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಸಮ್ಮುಖದಲ್ಲೇ ಕೆಆರ್​ಎಸ್​ಗೆ ಅಡಿಗಲ್ಲು

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕನ್ನಂಬಾಡಿ ಅಣೆಕಟ್ಟೆ ಎಂಬ ಹೆಸರಿನಲ್ಲಿ ಕೆಆರ್​​ಎಸ್​​ಗೆ ಅಡಿಗಲ್ಲು ಹಾಕಲಾಗಿದೆ. ಈ ಡ್ಯಾಂ ನಿರ್ಮಾಣ ವಿಚಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅವರ ತಾಯಿ ಕೆಂಪ ನಂಜಮ್ಮ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪತ್ನಿ ಪ್ರತಾಪ ಕುಮಾರಿ ಬೆನ್ನೆಲುಬಾಗಿ ನಿಂತಿದ್ದರು. ಅಂದಿನ ವೈಸರಾಯ್ ಇರ್​ವಿನ್ ಬಂದು ಒಡೆಯರ್ ಸಮ್ಮುಖದಲ್ಲಿ ಕೆಆರ್​ಎಸ್​ ಡ್ಯಾಂಗೆ ಅಡಿಗಲ್ಲು ಹಾಕಿದ್ದರು ಎಂಬುದನ್ನು ತಲಕಾಡು ಚಿಕ್ಕರಂಗೇಗೌಡ ದಾಖಲೆ ಸಮೇತ ವಿವರಿಸಿದ್ದಾರೆ.

ಕೆಆರ್​ಎಸ್ ಡ್ಯಾಂಗಾಗಿ ತಾಯಿ, ಪತ್ನಿಯ ಒಡವೆ ಮಾರಿದ್ದ ನಾಲ್ವಡಿ ಒಡೆಯರ್!

ಕನ್ನಂಬಾಡಿ ಅಣೆಕಟ್ಟೆಯ ಪ್ರಸ್ತಾವ ಮೊದಲು ಬಂದಾಗ ಅದಕ್ಕೆ ವಿಪರೀತ ಖರ್ಚಾಗುತ್ತದೆ ಎಂದು ಅಂದಿನ ಹಣಕಾಸು ಸಚಿವರು ತಿರಸ್ಕರಿಸುತ್ತಾರೆ. ಮೈಸೂರಿನ ಅಂದಿನ ಮೂರು ವರ್ಷದ ಆದಾಯದ ದುಡ್ಡು ಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರಸ್ತಾವನೆ ತಿರಸ್ಕರಿಸಲ್ಪಡುತ್ತದೆ. ಆಗ ನಾಲ್ವಡಿ ಒಡೆಯರ್ ಅವರ ತಾಯಿ ಕೆಂಪ ನಂಜಮ್ಮ ಮತ್ತು ಪತ್ನಿ ಪ್ರತಾಪ ಕುಮಾರಿ ತಮ್ಮಲ್ಲಿದ್ದ ಒಡವೆಗಳನ್ನೆಲ್ಲ ಒಡೆಯರ್​​ಗೆ ಕೊಡುತ್ತಾರೆ. ಅವರು ಅದನ್ನು ಬಾಂಬೆಯಲ್ಲಿ ಮಾರಾಟ ಮಾಡಿ ಒಂದಷ್ಟು ದುಡ್ಡು ಹೊಂದಿಸಿ ಡ್ಯಾಂಗೆ ಅನುಮೋದನೆ ದೊರೆಯಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದೂ ತಲಕಾಡು ಚಿಕ್ಕರಂಗೇಗೌಡ ಮಾಹಿತಿ ನೀಡಿದ್ದಾರೆ.

ಟಿಪ್ಪು ಕಾಲದ ಶಿಲಾನ್ಯಾಸದ ಕಲ್ಲುಗಳು ಕೆಆರ್​ಎಸ್ ಆವರಣದಲ್ಲಿ ಬಂದಿದ್ಹೇಗೆ?

 

ಅಂದಹಾಗೆ, ಟಿಪ್ಪು ಆಡಳಿತ ಕಾಲದ ಶಿಲಾನ್ಯಾಸದ ಮೂರು ಕಲ್ಲುಗಳು (ಇಂಗ್ಲಿಷ್, ಪರ್ಷಿಯನ್, ಕನ್ನಡ ಭಾಷೆಯ) ಕೆಆರ್​​ಎಸ್ ಆವರಣದಲ್ಲಿ ಇರುವುದು ನಿಜ. ಆದರೆ, ಕನ್ನಂಬಾಡಿ ಅಣೆಕಟ್ಟೆಗೂ ಟಿಪ್ಪು ನಿರ್ಮಿಸಲು ಉದ್ದೇಶಿಸಿದ್ದ ಅಣೆಕಟ್ಟೆಗೂ ಬಹಳ ವ್ಯತ್ಯಾಸವಿದೆ. ಬೇರೊಂದು ಸ್ಥಳದಲ್ಲಿದ್ದ ಶಿಲಾಫಲಕವನ್ನು ನಾಲ್ವಡಿ ಒಡೆಯರ್ ಅವರೇ ಈ ಅಣೆಕಟ್ಟೆಯ ಹೆಬ್ಬಾಗಿಲಿನಲ್ಲಿ ಅಳವಡಿಸಿದ್ದರು. ಇದು ಮಹಾರಾಜರ ಉದಾರತೆ ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.

ಮಹದೇವಪ್ಪ ಹೇಳಿಕೆ ಸರಿಯಲ್ಲವಂದ ಇತಿಹಾಸ ತಜ್ಞರು

 

ಟಿಪ್ಪು ಸುಲ್ತಾನ್ ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಬೇಕೆಂದು ಕನಸು ಕಂಡಿದ್ದು ನಿಜ. ಆದರೆ, ಅದು ಕೆಆರ್​​ಎಸ್ ಎನ್ನುವುದಕ್ಕೆ ಮತ್ತು ಕೆಆರ್​ಎಸ್ ಡ್ಯಾಂಗೆ ಆತನೇ ಅಡಿಗಲ್ಲು ಹಾಕಿದ್ದ ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ಪುರಾವೆ ಇಲ್ಲ. ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಮಹದೇವಪ್ಪ ಸ್ಪಷ್ಟ ಮಾಹಿತಿ, ಪುರಾವೆ ಇಲ್ಲದೆ ಅಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

ಇದನ್ನೂ ಓದಿ: KRS​ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್​: ಮಹದೇವಪ್ಪ ವಿವಾದಾತ್ಮಕ ಹೇಳಿಕೆ

ಮೈಸೂರಿಗೆ ಟಿಪ್ಪು ಸುಲ್ತಾನ್ ಕೊಡುಗೆ ಇದ್ದೇ ಇದೆ, ಇಲ್ಲವೆನ್ನಲಾಗದು. ಹಾಗೆಂದು ಆತನೇ ಕೆಆರ್​​ಎಸ್​​ಗೆ ಅಡಿಗಲ್ಲು ಹಾಕಿದ್ದ ಎನ್ನುವುದು ಸರಿಯಲ್ಲ. ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಲು ಆತ ಕನಸು ಕಂಡಿದ್ದ ಎಂಬುದನ್ನಷ್ಟೇ ಆಧಾರವಾಗಿ ಕೆಆರ್​ಎಸ್​​ಗೆ ಆತ ಅಡಿಗಲ್ಲು ಹಾಕಿದ್ದ ಎನ್ನುವುದಾದರೆ ಅದಕ್ಕಿಂತಲೂ ಮೊದಲು 2 ಅಣೆಕಟ್ಟೆ ನಿರ್ಮಾಣ ಮಾಡಿದ್ದ ಗಂಗರನ್ನು ನೆನೆಯಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಇತಿಹಾಸದ ಮತ್ತು ದಾಖಲೆಗಳ ಪ್ರಕಾರ ಕೃಷ್ಣರಾಜಸಾಗರ ಜಲಾಶಯದ ಸಂಪೂರ್ಣ ಶ್ರೇಯ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರಿಗೇ ಸೇರಬೇಕು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Mon, 4 August 25