ಬೆಂಗಳೂರು: ಆಡಳಿತ ಪಕ್ಷ ಬಿಜೆಪಿಯ ಆಂತರಿಕ ಕಿತ್ತಾಟದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮದೇ ಶೈಲಿಯಲ್ಲಿ ಮಾತನಾಡಿ, ಪತ್ರಕರ್ತರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕತ್ತು ಕೊಯ್ದರೂ ನಾನು ಪಕ್ಷದ ವಿರುದ್ಧ ಹೋಗುವುದಿಲ್ಲ. ನನ್ನ ಇಲಾಖೆಯ ಸಮಸ್ಯೆಯನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ ಹಾಗೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೆ. ಅದನ್ನು ದೂರು ಎಂದುಕೊಂಡಿದ್ದೇ ತಪ್ಪು. ದೂರು ನೀಡುವುದಕ್ಕೂ, ಮಾಹಿತಿ ನೀಡುವುದಕ್ಕೂ ವ್ಯತ್ಯಾಸ ಇದೆ ಎನ್ನುವುದು ಪತ್ರಕರ್ತರಿಗಾದರೂ ಗೊತ್ತಾಗಲಿ. ಇಷ್ಟಕ್ಕೂ ನಮ್ಮ ನಾಯಕರ ಭೇಟಿಯಾಗಲು ಯಾರ ಅನುಮತಿ ಬೇಕು? ನಾನೂ- ಯಡಿಯೂರಪ್ಪ ದಿನಾ ಜಗಳ ಆಡ್ತೀವಿ ಅಂತ ಬೇಕಿದ್ದರೆ ಬರೆದುಕೊಳ್ಳಿ ಎನ್ನುವ ಮೂಲಕ ಆಂತರಿಕ ಕಲಹದ ಬಗ್ಗೆ ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟುಕಥೆ ಹೇಳುತ್ತಿದ್ದಾರೆ. ಕಥೆ ಕಟ್ಟುವುದರಲ್ಲಿ ಅವರಿಗೆ ಪದ್ಮಶ್ರೀ ಕೊಡಬೇಕು. ಸಿದ್ದರಾಮಯ್ಯಗೆ ಬೇರೆ ಉದ್ಯೋಗ ಇಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದಿರುವ ಅವರು ಯತ್ನಾಳ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಶಾಸಕ ಯತ್ನಾಳ್ ಪಕ್ಷದ ಚೌಕಟ್ಟಿನೊಳಗೇ ಇರಬೇಕು. ಯತ್ನಾಳ್ ಬಳಿ ದಾಖಲೆ ಇದ್ರೆ ಅದನ್ನು ನೀಡಿ ಮಾತಾಡಲಿ. ನಾನು ರಾಜಭವನಕ್ಕೆ ಹೋಗಿದ್ದರ ಅಂಶ ಸ್ಪಷ್ಟಪಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ನಮ್ಮ ನಾಯಕರಿಗೆ ಪತ್ರ ಬರೆಯದೇ ದೇವೇಗೌಡರು, ಡಿ.ಕೆ.ಶಿವಕುಮಾರ್‌ಗೆ ದೂರು ಕೊಡ್ಲಾ?
ನಾನು ಯಾರ ಬಗ್ಗೆಯೂ ದೂರು ಕೊಟ್ಟಿಲ್ಲ, ಕೊಡುವುದೂ ಇಲ್ಲ. ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು, ನಮ್ಮ ಮುಖ್ಯಮಂತ್ರಿಗಳು. ನಾನು ನಮ್ಮ ನಾಯಕರಿಗೆ ಪತ್ರ ಬರೆಯದೇ ದೇವೇಗೌಡರು, ಡಿ.ಕೆ.ಶಿವಕುಮಾರ್‌ಗೆ ದೂರು ಕೊಡ್ಲಾ? ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಅವರೊಂದಿಗಿನ ಮನಸ್ತಾಪದ ಬಗ್ಗೆ ವಿಚಾರಿಸಿದಾಗ ಉತ್ತರಿಸಲಾಗದೇ ತಡಬಡಾಯಿಸಿದ ಈಶ್ವರಪ್ಪ, ನನಗೂ ಯಡಿಯೂರಪ್ಪಗೆ ಆಗಲ್ಲವೆಂದು ಬರೆದುಕೊಳ್ಳಿ. ನಾನು ಪದೇ ಪದೇ ಹೇಳುತ್ತೇನೆ ಇದನ್ನು ಇಲ್ಲಿಗೇ ಬಿಡಿ. ನಾನು ಆ ದೂರಿನ ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ. ಮತ್ತೆ ಮತ್ತೆ ನೀವು ಅದನ್ನೇ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧವೇ ಹರಿಹಾಯ್ದಿದ್ದಾರೆ.
ಇದನ್ನೂ ಓದಿ:
ಉತ್ತರ ಕರ್ನಾಟಕ ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಅಷ್ಟೂ ರಸ್ತೆಗಳ ನಿರ್ಮಾಣ ಪೂರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ
ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಟ್ಟಿಗೆ ವೇದಿಕೆ ಏರಿದರೂ ಮಾತನಾಡಿಕೊಳ್ಳದ ಸಿಎಂ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ