ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಟ್ಟಿಗೆ ವೇದಿಕೆ ಏರಿದರೂ ಮಾತನಾಡಿಕೊಳ್ಳದ ಸಿಎಂ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ
ಮಠಕ್ಕೆ ಸಿಎಂ ಬಂದರೂ ಆಹ್ವಾನಿಸಲು ಸಚಿವ ಈಶ್ವರಪ್ಪ ಹೋಗಲಿಲ್ಲ. ನಂತರ ಮಠದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ವೇಳೆ ಜೊತೆಗೆ ಹೆಜ್ಜೆಹಾಕಿದರು. ಆದರೂ ಪರಸ್ಪರ ಮಾತಾಡದೇ ಇಬ್ಬರೂ ಅಂತರ ಕಾಪಾಡಿಕೊಂಡರು.
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಕನಕ ಗುರುಪೀಠದ ಶಾಖಾಮಠದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಇಬ್ಬರೂ ಭಾಗಿಯಾದರು. ತಮ್ಮ ಭಾಷಣದ ವೇಳೆ ಸಿಎಂ ಯಡಿಯೂರಪ್ಪರ ಹೆಸರನ್ನು ಸಚಿವ ಕೆ.ಎಸ್. ಈಶ್ವರಪ್ಪ ಪ್ರಸ್ತಾಪಿಸಿದರು. ಆದರೆ ತದನಂತರ ಇಬ್ಬರು ನಾಯಕರು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದರೂ ಮಾತುಕತೆ ಮಾಡಿಕೊಳ್ಳಲಿಲ್ಲ. ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಸಚಿವ ಕೆ.ಎಸ್. ಈಶ್ವರಪ್ಪ ದೂರು ನೀಡಿದ ಬಳಿಕ ಮೊದಲ ಬಾರಿಗೆ ಇಬ್ಬರೂ ಮುಖಾಮುಖಿಯಾಗಿದ್ದರು.
ಮಠದ ದೇವಸ್ಥಾನಲ್ಲಿ ಮೂರ್ತಿ ಸ್ಥಾಪನೆಗೆ ಪ್ರಾಣ ಪ್ರತಿಷ್ಠಾಪನೆಗೆ ಹೋಮ ನಡೆದಿತ್ತು. ಸಿಎಂ ಯಡಿಯೂರಪ್ಪ ಬರುವ ಮೊದಲೇ ಸಚಿವ ಕೆ.ಎಸ್.ಈಶ್ವರಪ್ಪ ಹೋಮದ ಬಳಿ ಕುಳಿತಿದ್ದರು. ಮಠಕ್ಕೆ ಸಿಎಂ ಬಂದರೂ ಆಹ್ವಾನಿಸಲು ಸಚಿವ ಈಶ್ವರಪ್ಪ ಹೋಗಲಿಲ್ಲ. ನಂತರ ಮಠದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ವೇಳೆ ಜೊತೆಗೆ ಹೆಜ್ಜೆಹಾಕಿದರು. ಆದರೂ ಪರಸ್ಪರ ಮಾತಾಡದೇ ಇಬ್ಬರೂ ಅಂತರ ಕಾಪಾಡಿಕೊಂಡರು.
ತಮ್ಮ ಭಾಷಣದ ವೇಳೆ ಸಿಎಂ ಯಡಿಯೂರಪ್ಪರ ಹೆಸರನ್ನು ಸಚಿವ ಕೆ.ಎಸ್. ಈಶ್ವರಪ್ಪ ಪ್ರಸ್ತಾಪಿಸಿದರು. ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ನೆನಪಿಸಿಕೊಂಡ ಈಶ್ವರಪ್ಪ, ಕನಕದಾಸರ ಜಯಂತಿ ಆರಂಭಿಸಿದ್ದು ಯಡಿಯೂರಪ್ಪ ಅವರು. ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ದಲಿತ ಮತ್ತು ಹಿಂದುಳಿದ ಜಾತಿಯ ಮಠಗಳಿಗೆ ಒಂದು ನೂರು ಕೋಟಿ ರೂಪಾಯಿ ನೀಡಲಾಗಿತ್ತು. ಆಗ ಸದಾನಂದಗೌಡ ಸಿಎಂ ಆಗಿದ್ದರು ಎಂದರು.
ಮೀಸಲಾತಿ ಕುರಿತು ಕೇಳಿಬಂದ ಮಾತು ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಇದಕ್ಕೆ ಪರಿಹಾರ ಸಿಗಬೇಕೆಂದರೆ ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಾಗಬೇಕು. ಮೀಸಲಾತಿಯ ನೀಡುವ ಪ್ರಮಾಣದಲ್ಲಿ ಹೆಚ್ಚಿಸಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ‘ಸುಪ್ರೀಂ’ನಿಂದ ಒಳ್ಳೆಯ ಆದೇಶ ಬರುವ ನಿರೀಕ್ಷೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಕನಕ ಗುರುಪೀಠದ ಶಾಖಾಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕನಕ ಗುರುಪೀಠದ ಮೈಲಾರದ ಗುರುಪೀಠದ ಅಭಿವೃದ್ಧಿಗೆ ಹತ್ತು ಕೋಟಿ ಅನುದಾನವನ್ನು ನೀಡುತ್ತಿದೆ. ಮೊದಲ ಕಂತಿನಲ್ಲಿ 2.5 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಜೊತೆಗೆ ಮೀಸಲಾತಿ ಹೆಚ್ಚಿಸಲು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಯಾವುದೇ ಭೇದಭಾವವಿಲ್ಲದೆ ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವೆ. ಮೀಸಲಾತಿ ನೀಡುವ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ನೇಮಕ ಮಾಡಲಾಗಿದೆ. ಅದರ ವರದಿ ಬರಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ: ಕನಕಪುರ ಬಂಡೆಯ ಅರ್ಥ ತಿಳಿಸಿದ ಬೆಳಗಾವಿಯ ಜೈನ ಮುನಿಗಳು.. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅಂದ್ರು!