ಬೆಂಗಳೂರು: ಐದು ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಬೆಂಗಳೂರು ಕೇಂದ್ರೀಯ ವಿಭಾಗದ 38 ಮಂದಿ ಚಾಲಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) 62ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಪದಕ ಪ್ರದಾನ ಮಾಡಿ ಚಾಲಕರನ್ನು ಅಭಿನಂದಿಸಿದರು. ಈ ಬೆಳ್ಳಿ ಪದಕವು ಚಿನ್ನದ ಲೇಪನದೊಂದಿಗೆ 32 ಗ್ರಾಂ ಇದೆ. ವಿಜೇತ ಚಾಲಕರಿಗೆ 2,000 ರೂ. ನಗದು ಪುರಸ್ಕಾರ ಹಾಗೂ ಮಾಸಿಕ 250 ರೂ. ಭತ್ಯೆ ನೀಡಲಾಗುತ್ತದೆ.
ಇಷ್ಟೇ ಅಲ್ಲದೆ, ನಿಗಮದ 62ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಈ ಪೈಕಿ ಮೊದಲನೆಯದಾಗಿ, ಅಪಘಾತ ತಡೆಗಟ್ಟಲು ಹಾಗೂ ತ್ವರಿತಗತಿಯಲ್ಲಿ ಅಪಘಾತ ಸ್ಥಳಕ್ಕೆ ಧಾವಿಸಿ ಪರಿಹಾರ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಅಗತ್ಯತೆಗೆ ಅನುಗುಣವಾಗಿ ಆಸ್ಪತ್ರೆ, ಇತ್ಯಾದಿ ಸ್ಥಳಗಳಿಗೆ ತೆರಳಲು ಅಪಘಾತ ಪರಿಹಾರ ನಿಧಿ ಅಡಿಯಲ್ಲಿ, 20 ನೂತನ ಬೊಲೆರೋ ವಾಹನಗಳನ್ನು ನಿಗಮಕ್ಕೆ ಸೇರ್ಪಡೆ ಮಾಡಲಾಯಿತು. ನಿಗಮವು ಪ್ರತಿ ಮೂರು ತಿಂಗಳಿಗೊಮ್ಮೆ ನಿಗಮದ ಚಟುವಟಿಕೆಗಳ ಕುರಿತು ಆಂತರಿಕ ನಿಯತಕಾಲಿಕ ಸಾರಿಗೆ ಸಂಪದವನ್ನು ಬಿಡುಗಡೆ ಮಾಡುತ್ತದೆ. ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಜಾರಿಯಾಗಿದ್ದು, ಯೋಜನೆಯ ಕುರಿತು ಹಿರಿಯ ಲೇಖಕರು ಬರೆದಿರುವ ವಿಶಿಷ್ಟ ಲೇಖನಗಳು, ಶಕ್ತಿ ಯೋಜನೆಯ ಪರಿಣಾಮ, ಶಕ್ತಿ ಯೋಜನೆಯ ಅನುಕೂಲತೆ ಬಗ್ಗೆ ಸಾರ್ವಜನಿಕರ ಅನಿಸಿಕೆ, ಅಭಪ್ರಾಯ, ಕವನಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮೃತರಾದ ಸಿಬ್ಬಂದಿಯ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡುವ ಯೋಜನೆಯನ್ನು ಹೊಂದಲಾಗಿದ್ದು, ಪ್ರಸ್ತುತ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 14 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪಕ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಲ್ಲಿ 10 ಅವಲಂಬಿತರನ್ನು ತಾಂತ್ರಿಕ ಹುದ್ದೆಗಳಲ್ಲಿ ಮತ್ತು 4 ಅವಲಂಬಿತರನ್ನು ಚಾಲಕ-ನಿರ್ವಾಹಕ ಹುದ್ದೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು ಎಂದು ಪ್ರಕಟಣೆ ಮಾಹಿತಿ ನೀಡಿದೆ.
ನಿಗಮವು ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ಈ ಮೊದಲು ಕೈಗಾರಿಕಾ ತರಬೇತಿ, ಪದವಿ (ಬಿ.ಇ. ಬಿಎಸ್ಸಿ) ಹಾಗೂ ಸ್ನಾತಕ್ಕೋತರ ಪದವಿಗಳ ವ್ಯಾಸಂಗಕ್ಕಾಗಿ ಮಾತ್ರ ಸ್ಕಾಲರ್ ಶಿಪ್ ನೀಡುತ್ತಿತ್ತು. ಈಗ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚಿನ ವಿಧ್ಯಾಬ್ಯಾಸಗಳನ್ನು ಸ್ಕಾಲರ್ ಶಿಪ್ ವ್ಯಾಪ್ತಿಗೆ ಸೇರಿಸಿ ನೂತನ ಸಾರಿಗೆ ವಿದ್ಯಾ ಚೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಇದನ್ನೂ ಓದಿ: KSRTC ಹೊಸ್ ಪ್ಲಾನ್: ಸ್ಕ್ರ್ಯಾಪ್ ಹಂತಕ್ಕೆ ತಲುಪಿದ್ದ ಬಸ್ಗಳಿಗೆ ಹೊಸ ಟಚ್
ಈ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದುದಕ್ಕಿಂತ 3 ರಿಂದ 5 ಪಟ್ಟು ಹೆಚ್ಚು ಸ್ಕಾಲರ್ಶಿಪ್ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಪಿಯುಸಿ, ಪದವಿ ಬಿ.ಎ., ಬಿ.ಕಾಂ., ಪಿ.ಹೆಚ್.ಡಿ ಹಾಗೂ ವಿದೇಶದಲ್ಲಿ ಮಾಡುತ್ತಿರುವ ಪದವಿ ವ್ಯಾಸಂಗವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆಯನ್ನು ಪಾರದರ್ಶಕತೆಗೊಳಿಸಲು, ತ್ವರಿತಗೊಳಿಸಲು ಹಾಗೂ ನಿಖರತೆಗಾಗಿ ಗಣಕೀಕರಣಗೊಳಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ನಿಗಮವು ಆರ್ಥಿಕ ಸಂಕಷ್ಟವನ್ನು ಅನುಭವಿಸಿತ್ತು. ಕೋವಿಡ್ ನಂತರ ಪ್ರಯಾಣಿಕರ ಬೇಡಿಕೆ ಹೆಚ್ಚಾದಾಗ ನೂತನ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾಗ 9 ರಿಂದ 10 ಲಕ್ಷ ಕಿ.ಮೀ ಕ್ರಮಿಸಿ ಕವಚ ದುರಸ್ಥಿಯಿಂದ ಕೂಡಿದ ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲು ಯೋಜನೆಯನ್ನು ರೂಪಿಸಲಾಯಿತು. 2022 ರ ಜೂನ್ನಿಂದ ನಿಗಮದ 2 ಪ್ರಾದೇಶಿಕ ಘಟಕಗಳಲ್ಲಿ ಈ ಕಾರ್ಯವನ್ನು ಆರಂಭಿಸಲಾಯಿತು. ಈ ರೀತಿಯ ಪುನಶ್ಚೇತನಗೊಂಡ ವಾಹನಗಳು ಬಹಳ ಆಕರ್ಷಕವಾಗಿದ್ದು, ನೂತನ ವಾಹನಗಳಂತೆ ಪ್ರಯಾಣಿಕರಿಂದ ಸ್ವಾಗತಿಸಲ್ಪಟ್ಟ ಕಾರಣ, ಈ ಕಾರ್ಯವನ್ನು ವಿಭಾಗಗಳಲ್ಲಿಯೂ ಸಹ ಆರಂಭಿಸಲಾಯಿತು. ಇಂದಿನವರೆಗೆ ಎರಡು ಪ್ರಾದೇಶಿಕ ಘಟಕಗಳಲ್ಲಿ 385 ಹಾಗೂ 13 ವಿಭಾಗಗಳಲ್ಲಿ 125 ವಾಹನಗಳು ಸೇರಿದಂತೆ ಒಟ್ಟಾರೆ 510 ಹಳೆಯ ವಾಹನಗಳನ್ನು ಪುನಶ್ಚೇತನಗೊಳಿಸಲಾಗಿದೆ. ಈ ರೀತಿಯ ಪುನಶ್ಚೇತನಗೊಳಿಸಿದ ವಾಹನಗಳನ್ನು ಇನ್ನೂ 3 ರಿಂದ 4 ಲಕ್ಷ ಕಿ.ಮಿ.ಗಳವರೆಗೆ ಅಥವಾ ವಾಹನಗಳ ಜೀವಿತಾವಧಿಯವರೆಗೆ ಕಾರ್ಯಾಚರಣೆ ಮಾಡಬಹುದಾಗಿದೆ.
ಇದನ್ನೂ ಓದಿ: ಶಕ್ತಿ ಯೋಜನೆ ಬಳಿಕ ಹೆಚ್ಚಾದ ಪ್ರಯಾಣಿಕರ ಸಂಖ್ಯೆ; ನಾಲ್ಕು ಸಾರಿಗೆ ನಿಗಮಕ್ಕೆ ಬರಲಿದೆ ನಾಲ್ಕು ಸಾವಿರ ಹೊಸ ಬಸ್
ಈ ವಿನೂತನ ಯೋಜನೆಯ ಕುರಿತು ಹೊರತರಲಾಗಿರುವ ಬ್ರೋಷರ್ ಹಾಗೂ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.
ವಾಹನಗಳ ಪುನಶ್ಚೇತನ ಕಾರ್ಯದಲ್ಲಿನ ಸಾಧನೆಗಾಗಿ ಪ್ರಾದೇಶಿಕ ಘಟಕಗಳು, ಬೆಂಗಳೂರು ಮತ್ತು ಹಾಸನ, ವಿಭಾಗಗಳ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪುರಸ್ಕಾರ ನೀಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ