ರಾಜ್ಯದ ವಿವಿಧೆಡೆ ಸಾರಿಗೆ ನೌಕರರಿಗೆ ನೋಟಿಸ್: ಗದಗದಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಕಂಡಕ್ಟರ್

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಿಗಮದ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಸಿಬ್ಬಂದಿಗೆ ನೊಟೀಸ್ ಜಾರಿ ಮಾಡಿದ್ದ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಬಸ್​ ಮೇಲೆ ಕಲ್ಲುತೂರಾಟದಂಥ ಕೆಲ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.

  • TV9 Web Team
  • Published On - 22:55 PM, 8 Apr 2021
ರಾಜ್ಯದ ವಿವಿಧೆಡೆ ಸಾರಿಗೆ ನೌಕರರಿಗೆ ನೋಟಿಸ್: ಗದಗದಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಕಂಡಕ್ಟರ್
ಮುಷ್ಕರ ನಿರತ ಸಿಬ್ಬಂದಿ ಮನೆಗೆ ನೋಟಿಸ್​

ಬೆಂಗಳೂರು: ಸಾರಿಗೆ ನಿಗಮಗಳ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಗುರುವಾರ ಬಿರುಸಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಿಗಮದ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಸಿಬ್ಬಂದಿಗೆ ನೊಟೀಸ್ ಜಾರಿ ಮಾಡಿದ್ದ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಬಸ್​ ಮೇಲೆ ಕಲ್ಲುತೂರಾಟದಂಥ ಕೆಲ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಈ ನಡುವೆ ಹಿರಿಯ ಅಧಿಕಾರಿಗಳ ಕಿರುಕುಳದ ಆರೋಪದ ಮೇಲೆ ಕಂಡಕ್ಟರ್ ಒಬ್ಬರು ವಿಷ ಸೇವಿಸಿದ ಪ್ರಕರಣವೂ ವರದಿಯಾಗಿದೆ.

ಸಾರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಗದಗದಲ್ಲಿ ವಸಂತ್ ಎಂಬ ಕಂಡಕ್ಟರ್  ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥರಾದ ಅವರನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆ ಬಳಿ ಜಮಾಯಿಸಿದ ಸಾರಿಗೆ ಇಲಾಖೆ ನೌಕರರು ಸರ್ಕಾರ, ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೌಕರ ಅಮಾನತು
ಬಸ್​ ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಸತ್ಯಪ್ಪ ಎಂಬಾತನನ್ನು KSRTC ಅಮಾನತು ಮಾಡಿದೆ. ಬುಧವಾರ ರಾತ್ರಿ ಶ್ರೀನಿವಾಸಪುರದಿಂದ ಕೋಲಾರಕ್ಕೆ ಬರುತ್ತಿದ್ದ ಬಸ್ ಅಡ್ಡಗಟ್ಟಿ ಶ್ರೀನಿವಾಸ್ ಎಂಬ ಚಾಲಕನ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಎರಚಿದ್ದ ಆರೋಪ ಮಾಡಲಾಗಿದೆ.

ಹುಬ್ಬಳ್ಳಿ: 21 ಸಿಬ್ಬಂದಿಗೆ ನೋಟಿಸ್
ಹುಬ್ಬಳ್ಳಿಯಲ್ಲಿ ವಾಯವ್ಯ ಸಾರಿಗೆ ನಿಗಮದ 21 ಸಿಬ್ಬಂದಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ವಿಭಾಗದಿಂದ ಕ್ವಾರ್ಟರ್ಸ್​ ಖಾಲಿ ಮಾಡುವಂತೆ ಸಿಬ್ಬಂದಿಗೆ ನೋಟಿಸ್​ ನೀಡಲಾಗಿದೆ. ನಿಗಮದ 12 ಟ್ರೈನಿ ನೌಕರರಿಗೆ ವಜಾಗೊಳಿಸುವುದಾಗಿ ನೋಟಿಸ್​ ನೀಡಲಾಗಿದೆ.

ಸಂಡೂರು: ಕಲ್ಲು ತೂರಿದ್ದ ಚಾಲಕರ ಬಂಧನ
ಕೆಎಸ್​​ಆರ್​ಟಿಸಿ ಬಸ್​ ಮೇಲೆ ಕಲ್ಲು ತೂರಿದ್ದ ಶಿವಕುಮಾರ್ ಮತ್ತು ನಾಗರಾಜ್ ಎಂಬುವವರನ್ನು ಸಂಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಷ್ಕರ ಬೆಂಬಲಿಸುವಂತೆ ಒತ್ತಾಯಿಸಿ ಸಂಡೂರುನಿಂದ ದೋಣಿಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ಬಾಬಯ್ಯ ಕ್ರಾಸ್ ಬಳಿ ಕಲ್ಲು ತೂರಿದ್ದ ಆರೋಪ ಇವರ ಮೇಲಿದೆ. ಸಂಡೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನಕಪುರ: 24 ಸಿಬ್ಭಂದಿಗೆ ನೋಟಿಸ್
ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ರಾಮನಗರ ವಿಭಾಗೀಯ‌ ನಿಯಂತ್ರಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಕನಕಪುರದ ಸಾರಿಗೆ ಇಲಾಖೆ ವಸತಿ ಗೃಹದಲ್ಲಿದ್ದ 24 ನೌಕರರ ಮನೆಗಳಿಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದಿದ್ರೆ ಕ್ವಾರ್ಟರ್ಸ್​​ ಖಾಲಿ ಮಾಡಬೇಕು ಎಂದು ಸೂಚಿಸಿದ್ದಾರೆ.

(KSRTC BMTC bus strike Karnataka road transport corporation crisis)