ಬೆಂಗಳೂರು: ಬುಧವಾರ (ಏಪ್ರಿಲ್ 7) ಸಾರಿಗೆ ನೌಕರರ ಮುಷ್ಕರ ಘೋಷಣೆಯಾದ ಹಿನ್ನೆಲೆಯಲ್ಲಿ ಮುಷ್ಕರದ ಪರಿಣಾಮ ಹತ್ತಿಕ್ಕುವುದಕ್ಕೆ ಬಿಎಂಟಿಸಿ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ನಾಳೆ ಸಾರಿಗೆ ಇಲಾಖೆ ತರಬೇತಿ ನೌಕರರಿಂದ ಬಸ್ ಓಡಿಸುವುದಕ್ಕೆ ಬಿಎಂಟಿಸಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಎಂಟಿಸಿಯಲ್ಲಿ 2 ಸಾವಿರ ತರಬೇತಿ ನೌಕರರಿದ್ದಾರೆ. ಹಿಂದಿನ ಬಾರಿ ಸಾರಿಗೆ ಇಲಾಖೆಯ ಸಿಬ್ಬಂದಿ ಮುಷ್ಕರ ಕೈಗೊಂಡಾಗ ಇದೇ ರೀತಿ ಬಸ್ ಚಾಲನೆ ಮಾಡಲಾಗಿತ್ತು. ಅದರಂತೆ ಈ ಬಾರಿಯೂ ಬಸ್ ಓಡಿಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.
ಹಿಂದಿನ ಬಾರಿ ಸಾರಿಗೆ ಇಲಾಖೆಯ ಸಿಬ್ಬಂದಿ ಮುಷ್ಕರ ಕೈಗೊಂಡಾಗ ತರಬೇತಿ ಸಿಬ್ಬಂದಿ ಬಸ್ ಚಾಲನೆ ಮಾಡಿದ್ದರು. ಆದರೆ ಆಗ ಕೆಲವು ಕಡೆ ಸಮಸ್ಯೆಯಾಗಿತ್ತು. ಈ ಬಾರಿಯೂ ತರಬೇತಿ ನೌಕರರ ಬಳಿ ಬಸ್ ಓಡಿಸಿದರೆ ಏನಾದರೂ ತೊಂದರೆ ಉಂಟಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಸಾರಿಗೆ ಸಿಬ್ಬಂದಿ ಕೈಗೊಂಡಿರುವ ನಾಳೆಯ ಮುಷ್ಕರಕ್ಕೆ ಓಲಾ-ಊಬರ್ ಚಾಲಕ ಸಂಘಟನೆ ನೈತಿಕ ಬೆಂಬಲ ಘೋಷಿಸಿದೆ. ಆದರೆ ಎಂದಿನಂತೆ ಓಲಾ-ಊಬರ್ ಕ್ಯಾಬ್-ಆಟೋಗಳು ಸಂಚರಿಸಲಿವೆ ಎಂದು ಓಲಾ ಊಬರ್ ಡ್ರೈವರ್ ಮತ್ತು ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಮಾಹಿತಿ ನೀಡಿದ್ದಾರೆ.
ಸಾರಿಗೆ ಸಿಬ್ಬಂದಿ ಮುಷ್ಕರ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಬಿಎಂಟಿಸಿ ಯಾವುದೇ ಅನುಸೂಚಿಗಳು ವ್ಯತ್ಯಯ ಆಗದಂತೆ ಸೂಚನೆ ನೀಡಲಾಗಿದೆ. ನಾಳೆಯಿಂದ ಗೈರು ಹಾಜರಾತಿ ಆಗುವ ನೌಕರರಿಗೆ ವೇತನ ನೀಡುವುದಿಲ್ಲ. ವಾರದ ರಜೆ ದೀರ್ಘಾವಧಿ ರಜೆಯಲ್ಲಿರುವರಿಗೆ ಆದೇಶ ಅನ್ವಯ ಆಗುವುದಿಲ್ಲ.ಆದರೆ, ಅನಗತ್ಯವಾಗಿ ರಜೆ ಹಾಕಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಭದ್ರತೆ ಹಾಗೂ ಜಾಗೃತಾ ದಳ ನಿರ್ದೇಶಕ ಅರುಣ್ ಆದೇಶಿಸಿದ್ದಾರೆ.
ರಾಜ್ಯದಲ್ಲಿ ನಾಳೆ ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.‘ಸ್ವಾಮಿ ಲಕ್ಷ್ಮಣ ಸವದಿಯವರೇ, ಡಿಸೆಂಬರ್‌ನಲ್ಲಿಯೇ ಸಾರಿಗೆ ನೌಕರರು ಧರಣಿ ನಡೆಸಿದ್ದರು. ಇಷ್ಟು ದಿನ ನಿದ್ದೆ ಮಾಡಿ ಈಗ ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ದಿಕ್ಕು ತಪ್ಪಿಸ್ತಿದ್ದೀರಾ? ಕೇಂದ್ರದಿಂದ ತೆರಿಗೆ ಪಾಲು ತರಲಾಗದೆ ನಿಗಮಗಳು ನಷ್ಟದಲ್ಲಿರುವ ಸಬೂಬು ಹೇಳುವಿರಲ್ಲ. ಇದೇನಾ ನಿಮ್ಮ ಡಬಲ್ ಇಂಜಿನ್ ಅಭಿವೃದ್ಧಿ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸ್ವಾಮಿ @LaxmanSavadi ಅವರೇ,
ಕಳೆದ ಡಿಸೆಂಬರ್‌ನಲ್ಲಿಯೇ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು, ಇಷ್ಟು ದಿನ ನಿದ್ದೆ ಮಾಡಿ ಈಗ ನೀತಿ ಸಂಹಿತೆಯ ನೆಪ ಹೇಳಿ ದಿಕ್ಕು ತಪ್ಪಿಸುತ್ತಿದ್ದೀರಾ?
ಕೇಂದ್ರದಿಂದ ತೆರಿಗೆ ಪಾಲು ತರಲಾಗದೆ, ನಿಗಮಗಳು ನಷ್ಟದಲ್ಲಿರುವ ಸಬೂಬು ಹೇಳುವಿರಲ್ಲ ಇದೇನಾ ನಿಮ್ಮ ಡಬಲ್ ಇಂಜಿನ್ ಅಭಿವೃದ್ಧಿ @BJP4Karnataka? pic.twitter.com/jMArZTUvNZ
— Karnataka Congress (@INCKarnataka) April 6, 2021