ಬೆಂಗಳೂರು: ರಾಜ್ಯದ ಶಾಸನಬದ್ದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕವಾಗಿ ದಿವಾಳಿ ಹಂತಕ್ಕೆ ಸಾರಿಗೆ ನಿಗಮಗಳು ತಲುಪಿದ್ದು, ವಾಯುವ್ಯ ಸಾರಿಗೆ ಸಂಸ್ಥೆ 720.50 ಕೋಟಿ, ಈಶಾನ್ಯ ಸಾರಿಗೆ ಸಂಸ್ಥೆ 509.11 ಕೋಟಿ ನಷ್ಟದಲ್ಲಿದೆ. ಅಲ್ಲದೆ, ಕೆಎಸ್ಆರ್ಟಿಸಿ 180.87 ಕೋಟಿ ರೂಪಾಯಿ ಹಾಗೂ ಬಿಎಂಟಿಸಿ 55.41 ಕೋಟಿ ರೂಪಾಯಿ ನಷ್ಟದಲ್ಲಿದೆ.
ಹೀಗಾಗಿ ಭಾರೀ ನಷ್ಟದಲ್ಲಿರುವ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಹಣಕಾಸಿನ ಕೊರತೆ ಎದುರಾಗಿದ್ದು, ತಡರಾತ್ರಿಯಿಂದಲೇ ಶೇ.12 ರಷ್ಟು ಸಾರಿಗೆ ದರ ಹೆಚ್ಚಳ ಮಾಡಿವೆ. BMTC ಹೊರತುಪಡಿಸಿ ಹಳ್ಳಿಗಾಡಿನ ಜನರ ಜೀವಾಳ ಸಾರಿಗೆ ಸಂಸ್ಥೆಗಳಲ್ಲಿ ದಿಢೀರ ಬಸ್ ದರ ಏರಿಕೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿರುವುದಕ್ಕೆ ಸರ್ಕಾರದ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.