ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮ ಚಾಲಕ ಎನ್.ಕೆ. ಅವಟಿ ಮೃತಪಟ್ಟ ಘಟನೆ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಚಾಲಕನ ಎದೆಗೆ ಕಲ್ಲು ಎಸೆದಿದ್ದು ಆಕಸ್ಮಿಕವಲ್ಲ, ಅದು ಪೂರ್ವನಿಯೋಜಿತ ಕೃತ್ಯ ಎಂಬುದು ಬಹಿರಂಗ ಆಗಿದೆ. ಚಾಲಕನ ಎದೆಗೆ ಕಲ್ಲು ಬಿದ್ದರೂ ಅವರು ಪ್ರಯಾಣಿಕರ ರಕ್ಷಣೆ ಮಾಡಿದ್ದರು. ಎದೆಗೆ ಕಲ್ಲು ಬಿದ್ದ ನೋವಲ್ಲೂ, ಬಸ್ ನಿಯಂತ್ರಿಸಿ, ನಿಲ್ಲಿಸಿ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದರು. ಈ ಪ್ರಕರಣದ ಕುರಿತು ಈಗ ಬಾಗಲಕೋಟೆ ಎಸ್‌ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ವೇಳೆ ಪ್ರತಿನಿತ್ಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಕೆಲಸಕ್ಕೆ ಬರಬೇಕೆಂದು ದಿನವೂ ಒತ್ತಾಯ ಮಾಡುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ಎನ್.ಕೆ. ಅವಟಿ ಅವರು ಕೆಲಸ ಹಾಜರಾಗಿದ್ದರು ಎಂದು ಅವರ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಕಲ್ಲು ತೋರಾಟದ ಹಿಂದಿನ ಮಾಸ್ಟರ್ ಪ್ಲ್ಯಾನ್ ಬಯಲು ಮಾಡಿದ್ದಾರೆ.
ಅರುಣ್ ಅರಕೇರಿ ಎಂಬಾತ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ತೂರಲು ಪ್ಲ್ಯಾನ್ ಮಾಡಿದ್ದ. ಕಲ್ಲು ತೂರಿದ್ದ ಬಸ್‌ನಲ್ಲಿಯೇ ಅರುಣ್ ಕೂಡ ಪ್ರಯಾಣಿಸುತ್ತಿದ್ದ. ಬಸ್‌ನಲ್ಲಿಯೇ ಕುಳಿತು ಕಲ್ಲು ತೂರುವುದಕ್ಕೆ ಸ್ಕೆಚ್ ರೂಪಿಸಿದ್ದ. ಆತ ನೀಡಿದ ಸೂಚನೆಯಂತೆ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಕಲ್ಲೆ ಎಸೆದಿದ್ದಾರೆ ಎಂಬುದು ಈಗ ತಿಳಿದುಬಂದಿದೆ.
ಬಸ್‌ಗೆ ಅಚಾನಕ್ ಆಗಿ ಕಲ್ಲು ತೂರಿದ್ದಲ್ಲ. ಇದು ಪೂರ್ವನಿಯೋಜಿತ ಕೃತ್ಯವಾಗಿತ್ತು. ಮೊದಲೇ ಪ್ಲ್ಯಾನ್ ಮಾಡಲಾಗಿತ್ತು ಎಂಬ ಸತ್ಯ ತನಿಖೆ ವೇಳೆ ಬಯಲಾಗಿದೆ. ಬಸ್ ಸಂಚಾರವನ್ನು ತಡೆಯಬೇಕೆಂದು ಕೆಎಸ್ಆರ್ಟಿಸಿಯ ಐವರು ಸಿಬ್ಬಂದಿಯೇ ಪಕ್ಕಾ ಪ್ಲಾನ್ ಮಾಡಿದ್ದರು. ವಿಜಯಪುರ ನಗರದಿಂದಲೇ ಅರಕೇರಿ ಪ್ರಯಾಣ ಮಾಡುತ್ತಿದ್ದ. ಬಸ್ ಯಾವ ಮಾರ್ಗದಲ್ಲಿ ಚಲಿಸುತ್ತಿದೆ ಎಂಬ ಮಾಹಿತಿಯನ್ನು ಇನ್ನುಳಿದವರಿಗೆ ವರ್ಗಾಯಿಸುತ್ತಿದ್ದ. ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆಯೇ ಅಡ್ಡಬಂದು ಕಲ್ಲು ಎಸೆಯಲಾಗಿತ್ತು.
ಇದನ್ನೂ ಓದಿ: ಎದೆಗೆ ಕಲ್ಲು ಬಿದ್ದರೂ ಪ್ರಯಾಣಿಕರ ರಕ್ಷಣೆ; ಗಂಭೀರ ಗಾಯಗೊಂಡಿದ್ದ ಕೆಎಸ್‌ಆರ್‌ಟಿಸಿ ಚಾಲಕ ಸಾವು
ಸಾರಿಗೆ ನಿಗಮ ನೌಕರರ ಮುಷ್ಕರ, ಕೆಎಸ್ಆರ್ಟಿಸಿಗೆ ಮೂರು ದಿನಗಳಲ್ಲಿ ರೂ. 51 ಕೋಟಿ ನಷ್ಟ!