AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ವಪಕ್ಷ ಸಭೆಗೂ ಮುನ್ನ ಕಠಿಣ ನಿಯಮಾವಳಿ ಜಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಘೋಷಣೆ ಸಾಧ್ಯತೆ

ಸರ್ವಪಕ್ಷ ಸಭೆಯನ್ನು ಮುಂದೂಡಿರುವ ಕಾರಣದಿಂದ ಪ್ರಮುಖ ನಿರ್ಧಾರಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಲಿದ್ದು, ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ಕ್ರಮಗಳನ್ನು ಜಾರಿಗೊಳಿಸಲಿದ್ದಾರೆ.

ಸರ್ವಪಕ್ಷ ಸಭೆಗೂ ಮುನ್ನ ಕಠಿಣ ನಿಯಮಾವಳಿ ಜಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಘೋಷಣೆ ಸಾಧ್ಯತೆ
ಬಿ.ಎಸ್​. ಯಡಿಯೂರಪ್ಪ (ಸಂಗ್ರಹ ಚಿತ್ರ)
Skanda
| Updated By: ಮದನ್​ ಕುಮಾರ್​|

Updated on: Apr 17, 2021 | 8:46 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಈ ಕಾರಣದಿಂದ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಾವಳಿಗಳನ್ನು ರೂಪಿಸಲು ನಾಳೆ (ಏಪ್ರಿಲ್ 18) ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಆದರೆ, ಇದೀಗ ನಿನ್ನೆ (ಏಪ್ರಿಲ್ 16) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿರುವುದರಿಂದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ನಿಯಮಾವಳಿಗಳನ್ನು ಪ್ರಕಟಿಸಲಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.

ಸರ್ವಪಕ್ಷ ಸಭೆಯನ್ನು ಮುಂದೂಡಿರುವ ಕಾರಣದಿಂದ ಪ್ರಮುಖ ನಿರ್ಧಾರಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಲಿದ್ದು, ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ಕ್ರಮಗಳನ್ನು ಜಾರಿಗೊಳಿಸಲಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಸೋಂಕಿಗೆ ಒಳಪಟ್ಟಿದ್ದಾಗ ಆಸ್ಪತ್ರೆಯಿಂದಲೇ ನಿರ್ದೇಶನಗಳನ್ನು ನೀಡಿದ್ದರು. ಈ ಬಾರಿ ದೂರವಾಣಿ ಮೂಲಕ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಡಲಿದ್ದಾರೆ ಎನ್ನಲಾಗಿದ್ದು, ಅವರು ನಿಯಮಾವಳಿಗಳನ್ನು ಮಂಗಳವಾರದೊಳಗೆ ಜಾರಿಗೊಳಿಸುವ ಸಾಧ್ಯತೆ ಇದೆ.

ಅದಕ್ಕೂ ಮುನ್ನ ಇಂದು (ಏಪ್ರಿಲ್ 17) ಡಿಸಿ,‌ ಎಸ್ಪಿ ಮತ್ತು ಡಿಎಚ್ಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿರುವ ಬಸವರಾಜ ಬೊಮ್ಮಾಯಿ ಮತ್ತು ಡಾ. ಕೆ. ಸುಧಾಕರ್ ಸಭೆಯ ವಿವರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಿದ್ದಾರೆ. ಕಠಿಣ ನಿಯಮದ ಜಾರಿಯ ಬಗ್ಗೆ ಜಿಲ್ಲಾಡಳಿತಗಳಿಂದ ಮಾಹಿತಿ ಪಡೆಯಲಿರುವ ಸಚಿವರು ನಂತರ ಅದನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ. ಮುಖ್ಯ ಕಾರ್ಯದರ್ಶಿ ಜತೆ ಆಸ್ಪತ್ರೆಯಿಂದಲೇ ದೂರವಾಣಿ ಸಂಪರ್ಕದಲ್ಲಿರುವ ಮುಖ್ಯಮಂತ್ರಿಗಳು ಮಂಗಳವಾರದೊಳಗೆ ಕಠಿಣ ನಿಯಮದ ಬಗ್ಗೆ ಸೂಚನೆ ನೀಡಲಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸರ್ವಪಕ್ಷ ಮುಖಂಡರ ಸಲಹೆ ಪಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊರೊನಾ ಸೋಂಕು ತಡೆ ಕುರಿತು ಚರ್ಚಿಸಲು ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ