ಬೆಂಗಳೂರು: ನಾಳೆಯಿಂದಲೇ (ಜೂನ್ 25) ಮಹಾರಾಷ್ಟ್ರಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರಕ್ಕೆ ಬಸ್ ನಾಳೆಯಿಂದಲೇ ಆರಂಭವಾಗಲಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಮುಂಬೈ, ಪುಣೆ, ಮಿರಜ್, ಸೊಲ್ಲಾಪುರ, ಪಾಂಡವಪುರ, ತುಳಜಾಪುರಗಳಿಗೆ ಕೆಎಸ್ಆರ್ಟಿಸಿ ಬಸ್ಗಳು ರಾಜ್ಯದಿಂದ ಹೊರಡಲಿವೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್ಗಳನ್ನು ಬಿಡಲಾಗುತ್ತಿದ್ದು, ಶೇ.50ರಷ್ಟು ಮಾತ್ರವೇ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಕೆಎಸ್ಆರ್ಟಿಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕಿಂಗ್ಗೆ ಅವಕಾಶವಿದ್ದು, ಬಸ್ನಲ್ಲಿ ಪ್ರಯಾಣಿಕರು ಕೊವಿಡ್ ನಿಯಮ ಪಾಲಿಸಬೇಕು ಎಂದು ಸಂಸ್ಥೆ ತಿಳಿಸಿದೆ.
ಈ ಮುನ್ನ 2ನೇ ಹಂತದ ಕರ್ನಾಟಕ ಅನ್ಲಾಕ್ ಭಾಗವಾಗಿ ಜೂನ್ 21ರಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಸಂಚಾರ ನಡೆಸಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್ ಶುಲ್ಕ ಹೆಚ್ಚಳ; ಜುಲೈ 1ರಿಂದ ಜಾರಿ
ಎಲೆಕ್ಟ್ರಾನಿಕ್ ಸಿಟಿ ರಸ್ತೆ ಬಳಕೆ ಶುಲ್ಕ (ಟೋಲ್) ಹೆಚ್ಚಳವಾಗಿದ್ದು, ಜುಲೈ ಒಂದರಿಂದಲೇ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ರಸ್ತೆ ಬಳಕೆ ಶುಲ್ಕ ಹೆಚ್ಚಳವಾದ ಹಿನ್ನೆಲೆ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು, ಹಲವು ಕಾರ್ಖಾನೆಗಳು ಇವೆ. ಕೆ.ಆರ್ ಮಾರ್ಕೆಟ್ನ ಸಿಂಗಸಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯ ಎದುರಾಗಿದ್ದು, ಕೂಡಲೇ ಟೋಲ್ ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮಧ್ಯಸ್ಥಿಕೆ ವಹಿಸಲು ರೈತರು ಆಗ್ರಹಿಸಿದ್ದಾರೆ.
ದ್ವಿಚಕ್ರ ವಾಹನಕ್ಕೆ 20 ರೂ. ನಿಗದಿಯಾಗಿದ್ದು, ಹಿಂತಿರುಗಿ ಬರುವುದಕ್ಕೆ (ಟು ಸೈಡ್) 30 ರೂ. ಶುಲ್ಕ ನಿಗದಿಯಾಗಿದೆ. ಕಾರು, ಜೀಪ್, ವ್ಯಾನ್ಗಳಿಗೆ 50 ರೂ. ಮತ್ತು ಹಿಂತಿರುಗಿ ಬರುವುದಕ್ಕೆ 80 ರೂ. ಶುಲ್ಕ ನಿಗದಿಯಾಗಿದೆ. ಮಿನಿ ಬಸ್, ಲುಘು ವಾಹನಕ್ಕೆ 80 ರೂ. ವಾಪಸ್ ಬಂದರೆ 110 ರೂ. ಚಾರ್ಜ್ ಮಾಡಲಾಗುತ್ತದೆ. ಬಸ್, ಗೂಡ್ಸ್ಗೆ 145 ರೂ. ಹಿಂತಿರುಗಿ ಬಂದರೆ 220 ರೂ. ಟೋಲ್ ದರ ಫಿಕ್ಸ್ ಆಗಿದೆ.
ಭಾರಿ ವಾಹನಕ್ಕೆ 295 ರೂ. ಹಾಗೂ ಹಿಂತಿರುಗಿ ಬಂದರೆ 440 ರೂ. ಟೋಲ್ ಚಾರ್ಜ್ ದರ ನಿಗದಿಯಾಗಿದೆ. ವಾಹನಗಳ ಮಾಸಿಕ ಪಾಸ್ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳವಾಗಿದ್ದು, ಶೇಕಡಾ 75ರಿಂದ 80ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ತಿಂಗಳ ಪಾಸ್ ದರ 625 ರೂಪಾಯಿ, ಕಾರು, ಜೀಪ್, ವ್ಯಾನ್ಸ್ಗೆ ಟೋಲ್ನ ಮಾಸಿಕ ಪಾಸ್ ದರ 1,570 ರೂ. ಲಘು ವಾಹನಗಳಿಗೆ 4,390 ರೂ. ಟ್ರಕ್, ಬಸ್ಗಳಿಗೆ ತಿಂಗಳ ಪಾಸ್ ದರ 4,390 ರೂ. ಭಾರಿ ವಾಹನಗಳ ತಿಂಗಳ ಪಾಸ್ ದರ 8,780 ರೂ. ಆಗಿದೆ.
ಇದನ್ನೂ ಓದಿ: ಕೊವಿಡ್ನಿಂದ ಮೃತಪಟ್ಟವರ, ನೊಂದವರ ಗಣತಿ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ
ಕೊವಿಡ್ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭ; ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
(KSRTC bus service to Maharashtra to begin tomorrow)
Published On - 5:22 pm, Thu, 24 June 21