ಕರ್ನಾಟಕ ಹೈಕೋರ್ಟ್​​ನಲ್ಲಿ ಟ್ವಿಟರ್ ಎಂಡಿಗೆ ತಾತ್ಕಾಲಿಕ ರಿಲೀಫ್: ಜೂನ್ 28ಕ್ಕೆ ವಿಚಾರಣೆ ಮುಂದೂಡಿಕೆ

ಉತ್ತರ ಪ್ರದೇಶ ಪೊಲೀಸರು ಮನೀಶ್ ಮಹೇಶ್ವರಿ ಅವರ ವರ್ಚುವಲ್ ವಿಚಾರಣೆ ಮಾಡಬಹುದು ಎಂದು ಸೂಚಿಸಿದೆ. ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಮನೀಶ್ ಅವರಿಗೆ ಇದರಿಂದ ತಾತ್ಕಾಲಿಕವಾಗಿ ನೆಮ್ಮದಿ ಸಿಕ್ಕಂತೆ ಆಗಿದೆ.

ಕರ್ನಾಟಕ ಹೈಕೋರ್ಟ್​​ನಲ್ಲಿ ಟ್ವಿಟರ್ ಎಂಡಿಗೆ ತಾತ್ಕಾಲಿಕ ರಿಲೀಫ್: ಜೂನ್ 28ಕ್ಕೆ ವಿಚಾರಣೆ ಮುಂದೂಡಿಕೆ
ಕರ್ನಾಟಕ ಹೈಕೋರ್ಟ್


ಬೆಂಗಳೂರು: ಗಾಜಿಯಾಬಾದ್ ಹಲ್ಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಸಮನ್ಸ್ ಜಾರಿ ಮಾಡಿರುವ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಿಚಾರಣೆಗೆ ಅಂಗೀಕರಿಸಿದೆ. ವಿಚಾರಣೆಯನ್ನು ಮಂಗಳವಾರಕ್ಕೆ (ಜೂನ್ 29) ಮುಂದೂಡಿರುವ ನ್ಯಾಯಾಲಯ, ವರ್ಚುವಲ್ ವಿಚಾರಣೆ ಮಾಡಬಹುದು ಎಂದು ಸೂಚಿಸಿದೆ. ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಮನೀಶ್ ಅವರಿಗೆ ಇದರಿಂದ ತಾತ್ಕಾಲಿಕವಾಗಿ ನೆಮ್ಮದಿ ಸಿಕ್ಕಂತೆ ಆಗಿದೆ.

ವಿಚಾರಣೆ ಮುಗಿಯುವವರೆಗೆ ಮನೀಶ್ ಮಹೇಶ್ವರಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಜಿ.ನಾಗೇಂದ್ರ ಅವರ ಏಕಸದಸ್ಯ ನ್ಯಾಯಪೀಠ, ಪೊಲೀಸರು ವರ್ಚುವಲ್ ಮಾದರಿಯಲ್ಲಿ ವಿಚಾರಣೆ ನಡೆಸಬಹುದು. ತನಿಖೆಗೆ ನಾವು ತಡೆ ನೀಡುವುದಿಲ್ಲ ಎಂದು ತಿಳಿಸಿದೆ.

ಮನೀಶ್ ವಿಚಾರಣೆಗೆ ಮುನ್ನ ದಿನಾಂಕ, ಸಮಯ ತಿಳಿಸಬೇಕು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು. ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್​ ಉತ್ತರ ಪ್ರದೇಶದ ಲೋನಿ ಬಾರ್ಡರ್ ಪೊಲೀಸರಿಗೆ ಸೂಚನೆ ನೀಡಿದೆ.

ಮನೀಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಮನೀಶ್ ಮಹೇಶ್ವರಿ ಟ್ವಿಟರ್ ಆಡಳಿತ ಮಂಡಳಿ ಸದಸ್ಯರಲ್ಲ. ಮಾರ್ಕೆಟಿಂಗ್, ಸೇಲ್ಸ್ ಮಾತ್ರ ಮನೀಶ್ ನೋಡಿಕೊಳ್ಳುತ್ತಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸಿದ್ಧರಿದ್ದಾರೆ ಎಂದು ಮನೀಶ್ ಪರ ವಕೀಲರು ಮನವಿ ಮಾಡಿದರು. ಉತ್ತರ ಪ್ರದೇಶ ಪೊಲೀಸರ ಪರ ವಕೀಲರು ಯಾವುದೇ ಮಧ್ಯಂತರ ಆದೇಶವನ್ನು ನೀಡದಂತೆ ಮನವಿ ಮಾಡಿದರು.

ಉತ್ತರ ಪ್ರದೇಶ ಪೊಲೀಸರು ಭಾರತೀಯ ಅಪರಾಧ ದಂಡ ಸಂಹಿತೆಯ (ಸಿಆರ್​ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ನೀಡಿರುವ ನೋಟಿಸ್​ ಅನ್ನು ಮನೀಶ್​ ಮಹೇಶ್ವರಿ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ‘ಕೇವಲ ಎರಡು ದಿನಗಳ ಹಿಂದೆ ನಾನು ಸಾಕ್ಷಿಯಾಗಿದ್ದೆ. ಆದರೆ ಈಗ ನನ್ನನ್ನು ಆರೋಪಿ ಎಂದು ಪೊಲೀಸರು ಹೇಳುತ್ತಿದ್ದಾರೆ’ ಎಂದು ವಿವರಿಸಿದರು.

ಗಾಜಿಯಾಬಾದ್ ಪೊಲೀಸರು ಜೂನ್ 17ರಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ವಯ ನನ್ನನ್ನು ಸಾಕ್ಷಿ ಎಂದು ಉಲ್ಲೇಖಿಸಿ ನೊಟೀಸ್ ಕಳಿಸಿದ್ದರು. ಆದರೆ ಎರಡು ದಿನಗಳ ನಂತರ ಸಿಆರ್​ಪಿಸಿ ಸೆಕ್ಷನ್ 41ರ ಪ್ರಕಾರ ಮತ್ತೊಂದು ನೊಟೀಸ್ ಜಾರಿ ಮಾಡಿದರು. ಈ ಸೆಕ್ಷನ್ ಅನ್ವಯ ನೊಟೀಸ್ ಜಾರಿಯಾದರೆ ಸಮನ್ಸ್​ ಜಾರಿ ದಾಖಲೆಯಲ್ಲಿರುವ ಹೆಸರಿನವರನ್ನು ಬಂಧಿಸಲು ಅವಕಾಶ ಇರುತ್ತದೆ.

ಬೆಂಗಳೂರು ನಿವಾಸಿ ಮಹೇಶ್ವರಿ ಬುಧವಾರ ಉತ್ತರ ಪ್ರದೇಶ ಪೊಲೀಸರು ಜಾರಿ ಮಾಡಿರುವ ಸಮನ್ಸ್​ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಆರೋಪಿಗಳು ವಿಡಿಯೊ ಅಪ್​ಲೋಡ್ ಮಾಡಿದ್ದರೆ, ಅವರು ನನ್ನ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ ಎಂದು ಮಹೇಶ್ವರಿ ಹೇಳಿದರು.

‘ನಾನು ಬೆಂಗಳೂರಿನಲ್ಲಿದ್ದೇನೆ. ಪೊಲೀಸರು ನನಗೆ ಇಮೇಲ್ ಮೂಲಕ ನೊಟೀಸ್ ಕಳಿಸಿದ್ದಾರೆ. ನಾನು ಈಗ ಗಾಜಿಯಾಬಾದ್​ಗೆ ಬರುವ ಸ್ಥಿತಿಯಲ್ಲಿಲ್ಲ, ಆನ್​ಲೈನ್ ವಿಚಾರಣೆ ಎದುರಿಸಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದೇನೆ. ಆದರೆ ಅವರು ನಾನು ಅವರೆದುರು ಹಾಜರಾಗಲೇ ಬೇಕು ಎನ್ನುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಗಾಜಿಯಾಬಾದ್ ಪೊಲೀಸರು ಸಮನ್ಸ್ ಜಾರಿ ಮಾಡಿದ ನಂತರ ಜೂನ್ 23ರಂದು ಕರ್ನಾಟಕ ಹೈಕೋರ್ಟ್​ನಲ್ಲಿ ಈ ಸಂಬಂಧ ಅರ್ಜಿ ದಾಖಲಾಗಿತ್ತು.

(Relief for Twitter India MD Manish Maheshwari in Ghaziabad Loni Case)

ಇದನ್ನೂ ಓದಿ: ಉತ್ತರ ಪ್ರದೇಶ ಪೊಲೀಸರ ಸಮನ್ಸ್​ ಜಾರಿ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಟ್ವಿಟರ್​ ಇಂಡಿಯಾ ಮುಖ್ಯಸ್ಥ

ಇದನ್ನೂ ಓದಿ: ಗಾಜಿಯಾಬಾದ್​ನಲ್ಲಿ ಹಿರಿಯ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: 50 ಟ್ವೀಟ್​ಗಳನ್ನು ನಿರ್ಬಂಧಿಸಿದ ಟ್ವಿಟರ್ ಇಂಡಿಯಾ