ಬೆಂಗಳೂರು, (ಆಗಸ್ಟ್ 09): ಕರ್ನಾಟಕದ (Karnataka) ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ(Rain) ಸುರಿಯುತ್ತಿದ್ದು, ವಿಶ್ವವಿಖ್ಯಾತ ಶಿವಮೊಗ್ಗದ ಜೋಗ ಜಲಪಾತ(Jog Falls) ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಕೇವಲ ಜೋಗ ಮಾತ್ರವಲ್ಲದೇ ಗಗನಚುಕ್ಕಿ, ಭರಚುಕ್ಕಿ ಫಾಲ್ಸ್ ಭೋರ್ಗರೆಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಈ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ಆಗಸ್ಟ್ 12ರಿಂದ ಟೂರ್ ಪ್ಯಾಕೇಜ್ ಸೇವೆಯನ್ನು ಆರಂಭಿಸಲಿದೆ. ಬೆಂಗಳೂರಿನಿಂದ ಗಗನಚುಕ್ಕಿ ಭರಚುಕ್ಕಿ ಅವಳಿ ಫಾಲ್ಸ್ ಜೊತೆಗೆ ಜೋಗ ಜಲಪಾತಕ್ಕೆ ಪ್ರವಾಸ ನಿಯೋಜಿಸಿದೆ. ಆ, 12ರಿಂದ ಪ್ರತಿ ವೀಕೆಂಡ್ ಅಂದ್ರೆ ಶುಕ್ರವಾರ ಮತ್ತು ಶನಿವಾರ ಜೋಗ ಜಲಪಾತ ಪ್ರವಾಸವನ್ನು ಆಯೋಜಿಸಲಾಗಿದೆ.
ಸಾಗರ, ವರದಮೂಲ ಇಕ್ಕೇರಿ, ಕೆಳದಿ ವೀಕ್ಷಿಸಿ ನಂತ ಜೋಗಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ವಯಸ್ಕರರಿಗೆ 2,500 ರೂ. ಹಾಗೂ ಮಕ್ಕಳಿಗೆ 2,300 ರೂ ಟೂರ್ ಪ್ಯಾಕೇಜ್ ಶುಲ್ಕ(ನಾನ್ ಎಸಿ ಸ್ಲೀಪರ್ ಬಸ್) ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಬಸ್ ಹೊರಡಲಿದ್ದು, ಮರುದಿನ ಬೆಳಿಗ್ಗೆ 5 ಗಂಟೆ ವೇಳೆಗೆ ಸಾಗರ ತಲುಪಲಿದೆ. ಬಳಿಕ ಬೆಳಗ್ಗೆ ಪ್ರಯಾಣಿಕರಿಗೆ ಉಪಹಾರಕ್ಕೆ ಸಮಯಾವಕಾಶ ನೀಡಲಾಗುತ್ತದೆ. ನಂತರ ವರದಹಳ್ಳಿ, ವರದಮೂಲ, ಇಕ್ಕೇರಿ ಮತ್ತು ಕೆಳದಿ ಸ್ಥಳಗಳಿಗೆ ಬಸ್ ತೆರಳಲಿದೆ. ನಂತರ ಪ್ರಯಾಣಿಕರನ್ನು ಮಧ್ಯಾಹ್ನ 12:45ಕ್ಕೆ ಬಸ್ ಸಾಗರಕ್ಕೆ ವಾಪಸ್ ಆಗಲಿದ್ದು, ಊಟದ ಬಳಿಕ ಸಾಗರದಿಂದ ಜೋಗ್ ಫಾಲ್ಸ್‌ಗೆ ತೆರಳಲಿದೆ. ಬಳಿಕ ಪ್ರಯಾಣಿಕರಿಗೆ ಸಂಜೆ 7 ರಿಂದ 8 ವರೆಗೆ ಒಂದು ಗಂಟೆ ಶಾಪಿಂಗ್ ಮಾಡಲು ಸಮಯವಕಾಶ ಸಹ ನೀಡಲಾಗುತ್ತದೆ. ಇದೆಲ್ಲ ಮುಗಿದ ಬಳಿಕ ರಾತ್ರಿ 8.30ಕ್ಕೆ ಊಟದ ನಂತರ ಬಸ್ ಸಾಗರದಿಂದ ಬೆಂಗಳೂರಿಗೆ ಹಿಂದಿರುಗಲಿದೆ.
ಹಾಗೇ ಪ್ರತಿ ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿಗೆ ಪ್ರವಾಸ ಏರ್ಪಡಿಸಲಾಗಿದೆ. ಬೆಂಗಳೂರಿನಿಂದ ಹೊರಟು ಸೋಮನಾಥಪುರ, ತಲಕಾಡು, ಮಧ್ಯರಂಗ ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿ ತೋರಿಸಲಾಗುತ್ತದೆ. ವಯಸ್ಕರರಿಗೆ 450 ರೂ. ಹಾಗೂ ಮಕ್ಕಳಿಗೆ 300 ರೂ. ಪ್ರಯಾಣ ಶುಲ್ಕ ನಿಗದಿ ಮಾಡಲಾಗಿದೆ.
Package tours from Bengaluru to Jog Falls and Bengaluru to Somanathapura. pic.twitter.com/QxzlKWJGUJ
— KSRTC (@KSRTC_Journeys) August 7, 2023
ಆಸಕ್ತರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವುಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ 7760990287, 776090988ಗೆ ಕರೆ ಮಾಡಬಹುದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:30 pm, Wed, 9 August 23