ಬೆಂಗಳೂರು, ಮಾರ್ಚ್ 6: ಅಂಬಾರಿ ಉತ್ಸವ ಬಸ್ಗಳಿಗೆ (Ambari Utsav Bus) ಬಾಂಬ್ ಬೆದರಿಕೆ (Bomb Threat) ಬಂದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬಸ್ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮತ್ತು ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಚಾಲಕ ಹಾಗೂ ನಿರ್ವಾಹಕರಿಗೆ ಸೂಚಿಸಲಾಗಿದೆ. ಬರುವ ಪ್ರಯಾಣಿಕರ ಚಲವಲನದ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ.
ರಾಜ್ಯಾದ್ಯಂತ ಒಟ್ಟು 20 ಅಂಬಾರಿ ಉತ್ಸವ ಬಸ್ಗಳು ಕಾರ್ಯಾಚರಿಸುತ್ತಿವೆ. ಈ ಪೈಕಿ, ಬೆಂಗಳೂರಿನಲ್ಲಿ 16 ಹಾಗೂ ಕುಂದಾಪುರ ಮತ್ತು ಮಂಗಳೂರಿನಲ್ಲಿ 4 ಬಸ್ಗಳಿವೆ. ಅಂಬಾರಿ ಉತ್ಸವ ಎಸಿ ಸ್ಲೀಪರ್ ಕೋಚ್ ಬಸ್ಗಳಾಗಿದ್ದು, ಹೈದರಾಬಾದ್, ಚೆನ್ನೈ ಹಾಗೂ ಎರ್ನಾಕುಲಂಗೆ ಸಹ ಸಂಚರಿಸುತ್ತವೆ.
ಈ ಮಧ್ಯೆ, ಬೆಂಗಳೂರಿನಿಂದ ತೆರಳುವ ಅಂಬಾರಿ ಉತ್ಸವ ಬಸ್ಸೊಂದರ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್ ಮಾಡಿದೆ. ಇದೇ ವೇಳೆ, ಯಾರೂ ಭಯಪಡಬೇಡಿ, ನಾವು ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುತ್ತೇವೆ ಎಂದು ಪ್ರಯಾಣಕರಿಗೆ ಚಾಲಕ ಧೈರ್ಯ ಹೇಳಿದ್ದಾರೆ.
ಎಲ್ಲರ ಚಲನವಲನದ ಮೇಲೆ ಕಣ್ಣು ಇಡುತ್ತೇವೆ. ಅನುಮಾನ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದು ಅಂಬಾರಿ ಸಿಬ್ಬಂದಿ ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.
ಈ ಮಧ್ಯೆ ಕೆಎಸ್ಆರ್ಟಿಸಿ ಬಸ್ಗಳಿಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ರಾಯಚೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಈ ವಿಚಾರವಾಗಿ ನನಗೆ ಫೋನ್ ಬಂದಿತ್ತು. ಹೆಚ್ಚಿನ ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ. ನಾವೂ ಸಹ ಕಟ್ಟೆಚ್ಚರಿಂದ ಇರಬೇಕಾಗುತ್ತದೆ. ನಾಲ್ಕು ಜನ ಎಂಡಿಗಳ ಜೊತೆ ಮಾತನಾಡುತ್ತೇನೆ. ಈ ವಿಚಾರದಲ್ಲಿ ಸ್ವಲ್ಪವೂ ಎಚ್ಚರ ತಪ್ಪುವ ಹಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ, ಗೃಹ ಸಚಿವ, ಡಿಸಿಎಂ ಸೇರಿ ಹಲವರಗೆ ಬಂತು ಬಾಂಬ್ ಬೆದರಿಕೆ ಸಂದೇಶ
ಬಸ್, ರೈಲು, ಬಸ್ ಸ್ಟಾಂಡ್ ಸೇರಿ ಹಲವಾರು ಕಡೆ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆಯ ಸಂದೇಶವುಳ್ಳ ಇ-ಮೇಲ್ ಮಂಗಳವಾರ ಬಂದಿತ್ತು. ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೆ ಬೆದರಿಕೆಯ ಸಂದೇಶವುಳ್ಳ ಇ-ಮೇಲ್ ಬಂದಿತ್ತು.
ಇದನ್ನೂ ಓದಿ: ಮಹಾ ಶಿವರಾತ್ರಿ: ಕೆಎಸ್ಆರ್ಟಿಸಿಯಿಂದ 1500 ಹೆಚ್ಚುವರಿ ವಿಶೇಷ ಬಸ್, ಇಲ್ಲಿದೆ ವಿವರ
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ನಗರಕ್ಕೆ ಮತ್ತೊಂದು ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹೀಗಾಗಿ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ