ಬರಲಿದೆ ಹೊಸ ಮಾದರಿಯ ಕೆಎಸ್ಆರ್‌ಟಿಸಿ ಬಸ್: ಏನಿದರ ವಿಶೇಷ? ಇಲ್ಲಿದೆ ಮಾಹಿತಿ

| Updated By: Ganapathi Sharma

Updated on: Jun 22, 2024 | 10:56 AM

ವಿವಿಧ ಮಾದರಿಯ ಬಸ್​​ಗಳನ್ನು ರಸ್ತೆಗಿಳಿಸಿ ಸೈ ಎನ್ನಿಸಿಕೊಂಡಿರುವ ಕೆಎಸ್​ಆರ್​ಟಿಸಿ ಈಗ ಹೊಸ ಮಾದರಿಯ ಬಸ್ಸೊಂದನ್ನು ಖರೀದಿಸಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಮುಂದಾಗಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹ ಮಾಹಿತಿ ನೀಡಿದ್ದಾರೆ. ಕೆಎಸ್​ಆರ್​ಟಿಸಿ ಖರೀದಿಸಲು ಹೊರಟಿರುವ ಹೊಸ ಬಸ್​ನ ವಿಶೇಷವೇನು? ಯಾವಾಗಿನಿಂದ ರಸ್ತೆಗಿಳಿಯಲಿದೆ? ವಿವರ ಇಲ್ಲಿದೆ.

ಬರಲಿದೆ ಹೊಸ ಮಾದರಿಯ ಕೆಎಸ್ಆರ್‌ಟಿಸಿ ಬಸ್: ಏನಿದರ ವಿಶೇಷ? ಇಲ್ಲಿದೆ ಮಾಹಿತಿ
ಕೆಎಸ್ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜೂನ್ 22: ದೇಶದಲ್ಲೇ ನಂಬರ್ 1 ನಿಗಮವಾಗಿ ಗರುತಿಸಿಕೊಂಡಿರುವ, ಇತರ ಯಾವುದೇ ನಿಗಮದಲ್ಲೂ ಇಲ್ಲದಷ್ಟು ಸಾಮಾನ್ಯ ಮತ್ತು ಐಷರಾಮಿ ಬಸ್ಸುಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ಹೊಸದಾಗಿ ಸ್ಲೀಪರ್ ಕಂ ಸೀಟರ್ ಬಸ್ಸುಗಳನ್ನು (Sleeper Cum Seater Bus) ಪರಿಚಯಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಹೊಸ ಮಾದರಿಯ ಬಸ್​​ಗಳನ್ನು ಪರಿಚಯಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.

ಕೆಎಸ್ಆರ್‌ಟಿಸಿ 30 ಆಸನಗಳ ಸೀಟರ್ ಕಮ್ ಸ್ಲೀಪರ್ 30 ಹೊಸ ಬಸ್​​ಗಳಿಗೆ ಟೆಂಡರ್ ಕರೆದಿದೆ. ಕೆಳಗಡೆ ಕುಳಿತುಕೊಂಡು ಹೋಗುವ ಆಸನಗಳು ಇದ್ದರೆ, ಮೇಲ್ಗಡೆ ಸ್ಲೀಪರ್ ಸೀಟ್ ಇರಲಿದೆ. ಈ ಮಾದರಿಯ ಹಲವು ಖಾಸಗಿ ಬಸ್‌ಗಳು ಈಗಾಗಲೇ ರಾಜ್ಯದಲ್ಲಿ ಸಂಚಾರ ಮಾಡುತ್ತಿವೆ.

ಯಾವಾಗ ರಸ್ತೆಗಿಳಿಯಲಿವೆ ಸೀಟರ್ ಕಂ ಸ್ಲೀಪರ್ ಬಸ್?

2023ರ ಅಕ್ಟೋಬರ್‌ನಲ್ಲಿ ಕೆಎಸ್ಆರ್‌ಟಿಸಿ ‘ಪಲ್ಲಕ್ಕಿ’ ಬಸ್ ಗಳನ್ನು ರಸ್ತೆಗಿಳಿಸಿತ್ತು. ‘ಪಲ್ಲಕ್ಕಿ’ ಮಾದರಿಯ ಬಸ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೆಎಸ್​ಆರ್​​ಟಿಸಿ ನಾನ್ ಎಸಿ ಸೀಟರ್ ಕಮ್ ಸ್ಲೀಪರ್ ಬಸ್‌ ಸೇವೆಯನ್ನು ಆರಂಭಿಸಲು ತಯಾರಿ ನಡೆಸಿದೆ. ಈ ವರ್ಷದ ಕೊನೆಯಲ್ಲಿ ಬಸ್ಸುಗಳು ರೋಡಿಗಿಳಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿಗೆ 110 ಹೊಸ ಬಸ್

ಕೆಎಸ್​ಆರ್​ಟಿಸಿ ಸ್ಲೀಪರ್ ಕಂ ಸೀಟರ್ ಬಸ್ ಜೊತೆಯಲ್ಲಿ 110 ಹೊಸ ಬಸ್ ಖರೀದಿಸಲು ಟೆಂಡರ್ ಕರೆದಿದೆ. ಪಲ್ಲಕ್ಕಿ- 70, ಸ್ಲೀಪರ್ ಕಂ ಸೀಟರ್ – 30 ಅಂಬಾರಿ- 20 ಹಾಗೂ ಐರಾವತ ಡ್ರೀಮ್ ಕ್ಲಾಸ್- 20 ಒಟ್ಟು – 140 ಬಸ್ಸುಗಳನ್ನು ಖರೀದಿ ಮಾಡಲು ಟೆಂಡರ್ ಕರೆಯಲಾಗಿದ್ದು, ಟೆಂಡರ್ ನಿಯಾವಳಿಗಳ ಅನ್ವಯ ಮುಂದಿನ 6 ತಿಂಗಳಿನಲ್ಲಿ ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ‌ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಲ್ಲಿ 6.54 ಲಕ್ಷ ರೂ. ದಂಡ ಸಂಗ್ರಹಿಸಿದ ಕೆಎಸ್​ಆರ್​ಟಿಸಿ

ಹೊಸ ಹೊಸ ಪ್ರಯತ್ನ ಮಾಡುವುದರಲ್ಲಿ ಕೆಎಸ್​ಆರ್​ಟಿಸಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ