ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಲ್ಲಿ 6.54 ಲಕ್ಷ ರೂ. ದಂಡ ಸಂಗ್ರಹಿಸಿದ ಕೆಎಸ್‌ಆರ್‌ಟಿಸಿ
ಟಿಕೆಟ್ ಪಡೆಯದೇ ಬಸ್‌ಗಳಲ್ಲಿ ಸಂಚರಿಸುವವರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕೆಎಸ್‌ಆರ್‌ಟಿಸಿ ಮೇ ತಿಂಗಳಲ್ಲಿ ಬರೋಬ್ಬರಿ 6.54 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ. ಈ ಮೂಲಕ ಅಕ್ರಮ ಪ್ರಯಾಣಿಕರಿಗೆ ಹಾಗೂ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗೂ ಬಿಸಿ ಮುಟ್ಟಿಸಿದೆ. ದಂಡ ಸಂಗ್ರಹದ ಬಗ್ಗೆ ಸಂಸ್ಥೆ ನೀಡಿದ ಮಾಹಿತಿ ಇಲ್ಲಿದೆ.
ಬೆಂಗಳೂರು, ಜೂನ್ 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮೇ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ ಪ್ರಯಾಣಿಕರಿಂದ ರಾಜ್ಯಾದ್ಯಂತ 6.54 ಲಕ್ಷ ರೂಪಾಯಿ ದಂಡವನ್ನು (Fine Collection) ಸಂಗ್ರಹಿಸಿದೆ. ನಿಗಮವು ಆದಾಯ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದು, ಕಣ್ಗಾವಲನ್ನೂ ಹೆಚ್ಚಿಸಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಸಂಚರಿಸುವ 42,680 ಬಸ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ತಪಾಸಣೆ ವೇಳೆ 3,708 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 3,754 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಸಿಬ್ಬಂದಿಗೆ 88,429 ರೂ. ದಂಡ ವಿಧಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿಭಾಗೀಯ ಮತ್ತು ಕೇಂದ್ರೀಯ ಅಧಿಕಾರಿಗಳ ಮೂಲಕ ಪ್ರತಿದಿನ ಟಿಕೆಟ್ ರಹಿತ ಪ್ರಯಾಣಿಕರ ಮೇಲೆ ನಿಗಾ ಇಡುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ. ಇದೀಗ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧದ ಕಾರ್ಯಾಚರಣೆ, ದಂಡ ಸಂಗ್ರಹದಿಂದ ಕೆಎಸ್‌ಆರ್‌ಟಿಸಿ ಖಜಾನೆಗೆ ಲಕ್ಷಾಂತರ ರೂ. ಸೇರ್ಪಡೆಯಾದಂತಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು; ಎನ್ಎಂಐಟಿಯ ವಿದ್ಯಾರ್ಥಿಗಳಿಂದ ಹೊಸ ಸಾಫ್ಟ್ವೇರ್
ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ / ಪಾಸ್ ಪಡೆದು ಪ್ರಯಾಣ ಮಾಡುವಂತೆ ನಿಗಮವು ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ