ಕೆಎಸ್​ಆರ್​ಟಿಸಿಯೂ ಇನ್ಮುಂದೆ ಕ್ಯಾಶ್​ಲೆಸ್: ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸುವ ವ್ಯವಸ್ಥೆ ಶೀಘ್ರ ಜಾರಿ

| Updated By: Ganapathi Sharma

Updated on: Jul 05, 2024 | 7:53 AM

ಕೆಎಸ್​ಆರ್​ಟಿಸಿ ಬಸ್​​​ಗಳಲ್ಲಿ ಟಿಕೆಟ್ ಮಷಿನ್​ಗಳು ಕೈಕೊಟ್ಟು ಚಿಲ್ಲರೆಗಾಗಿ ಪ್ರಯಾಣಿಕರು ಮತ್ತು ಕಂಡಕ್ಟರ್​​​ಗಳ ಮಧ್ಯೆ ಕಿರಿಕ್ ಆಗುವುದು ಸಹಜ. ಇದೀಗ ಇಂಥ ಸಮಸ್ಯೆಗಳಿಗೆ ಮುಕ್ತಿ ಕಾಣಿಸಲು ಸಂಸ್ಥೆ ಮುಂದಾಗಿದೆ. ಪ್ರಯಾಣಿಕರಿಗಾಗಿ ಕೆಎಸ್​ಆರ್​ಟಿಸಿಯೂ ಕ್ಯಾಶ್​ಲೆಸ್ ಆಗಲು ಮುಂದಾಗಿದೆ. ಕ್ಯಾಶ್​ಲೆಸ್ ಪಾವತಿ ವ್ಯವಸ್ಥೆ ಕೆಎಸ್​ಆರ್​ಟಿಸಿ ಬಸ್​​​ಗಳಲ್ಲಿ ಶೀಘ್ರ ಜಾರಿಗೆ ಬರಲಿದೆ.

ಕೆಎಸ್​ಆರ್​ಟಿಸಿಯೂ ಇನ್ಮುಂದೆ ಕ್ಯಾಶ್​ಲೆಸ್: ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸುವ ವ್ಯವಸ್ಥೆ ಶೀಘ್ರ ಜಾರಿ
ಕೆಎಸ್​ಆರ್​ಟಿಸಿಯೂ ಇನ್ಮುಂದೆ ಕ್ಯಾಶ್​ಲೆಸ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜುಲೈ 5: ಟಿಕೆಟ್ ಕೊಡುವ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಕಂಡಕ್ಟರ್​​ಗಳ ಮಧ್ಯೆ ಚಿಲ್ಲರೆಗಾಗಿ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ. ಈ ರೀತಿಯ ಕಿರಿಕಿರಿಗಳಿಗೆ ಮುಕ್ತಿಹಾಡಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.

ಕಾರ್ಡ್​​​ಗಳನ್ನು ಬಳಸಿಯೂ ಪಾವತಿ ಮಾಡಬಹುದು!

ಖಾಸಗಿ ಕಂಪೆನಿಯಿಂದ ಒಂದು ಮಷಿನ್​​ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದಲ್ಲಿ 10245 ಸಾವಿರ ಇಟಿಎಂ ಟಿಕೆಟ್ ಮಷಿನ್​​ಗಳ ಖರೀದಿಗೆ ಕೆಎಸ್​ಆರ್​ಟಿಸಿ ಮುಂದಾಗಿದೆ. ಇದರಿಂದ ಇನ್ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಗೂಗಲ್ ಪೇ, ಫೋನ್ ಪೇ. ಪೇಟಿಎಂ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ಈ ನೂತನ ಮಷಿನ್​​ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್​​​ಗಳನ್ನು ಬಳಸಿಯೂ ಹಣ ಪಾವತಿ ಮಾಡಬಹುದು.

6500 ಬಸ್​ಗಳಿಗೆ ಹೊಸ ಮಷಿನ್

ಸದ್ಯ ಈಗ ಇರುವ ಮಷಿನ್​​ಗಳು ರೋಡ್ ಮಧ್ಯೆ ಕೈಕೊಟ್ಟು ಪ್ರಯಾಣಿಕರು ಮತ್ತು ಕಂಡಕ್ಟರ್ ಜೊತೆಗೆ ಜಗಳವಾಗುತ್ತಿದೆ. ಹೊಸ ಮಷಿನ್​ನಿಂದ ಇದು ತಪ್ಪಲಿದೆ. ಇತ್ತೀಚೆಗೆ ಕೆಎಸ್​ಆರ್​ಟಿಸಿ ಬಸ್​​​ಗಳಲ್ಲಿ ಪ್ರಯಾಣ ಮಾಡುವ ಹೆಚ್ಚಿನವರ ಬಳಿ ಕ್ಯಾಶ್ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರ ಅನಕೂಲಕ್ಕಾಗಿ ಇಟಿಎಂ ಸಹಕಾರಿ ಆಗಲಿದೆ. ನಿಗಮದ 6500 ಬಸ್ಸುಗಳಲ್ಲೂ ಹೊಸ ವ್ಯವಸ್ಥೆ ಪರಿಚಯ ಮಾಡಲಾಗುತ್ತದೆ. ಶಕ್ತಿ ಯೋಜನೆಯ ಪಿಂಕ್‌ ಟಿಕೆಟ್​​​ಗಳನ್ನು ಈ ಇಟಿಎಂ ಮಷಿನ್ ಗಳಲ್ಲಿ ಸ್ಕ್ಯಾನ್ ಮಾಡಿ ಅವಕಾಶ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ

ಇದನ್ನೂ ಓದಿ: ಹೊಸದಾಗಿ ಸಾವಿರ ಬಸ್​ಗಳನ್ನು ರಸ್ತೆಗೆ ಇಳಿಸಲು ಕೆಎಸ್​ಆರ್​ಟಿಸಿ ಚಿಂತನೆ

ಈ ಹಿಂದೆ ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ಮಷಿನ್​​ಗಳು ಕೈಕೊಟ್ಟು ಕಂಡಕ್ಟರ್​​ಗಳು ತೊಂದರೆ ಅನುಭವಿಸುತ್ತಿದ್ದರು. ನಂತರ ಹೊಸ ತಂತ್ರಜ್ಞಾನದ ಮಷಿನ್ ಖರೀದಿ ಮಾಡಲಾಗಿತ್ತು. ಇದೀಗ ಕೆಎಸ್​ಆರ್​ಟಿಸಿ ಕೂಡ ಹೊಸ ತಂತ್ರಜ್ಞಾನದ ಮಷಿನ್​ಗಳನ್ನು ಖರೀದಿ ಮಾಡಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ