ಮೈಸೂರು, ಸೆಪ್ಟೆಂಬರ್ 28: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿರುವ ಶುಕ್ರವಾರದ ಕರ್ನಾಟಕ ಬಂದ್ನಲ್ಲಿ (Karnataka Bandh) ಭಾಗಿಯಾಗುವುದಿಲ್ಲ ಎಂದು ರಾಜ್ಯ ಜಲ ಸಂರಕ್ಷಣಾ ಸಮಿತಿ ಸಂಚಾಲಕ, ಹೋರಾಟಗಾರ ಕುರುಬೂರು ಶಾಂತಕುಮಾರ್ (Kurubur Shanthakumar) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಸ್ತೆ ಬಂದ್ ಚಳವಳಿ ನಡೆಸಲಿದ್ದೇವೆ. ರಾಜ್ಯಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿ ರಸ್ತೆ ಬಂದ್ ಚಳವಳಿ ನಡೆಸ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ ನಡೆಸಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಇಂದಿನ ಕರ್ನಾಟಕದ ಈ ಪರಿಸ್ಥಿತಿಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಅವರಿಂದಾಗಿ ಬಂದ್, ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ. ಜನರ ಹಿತಾಸಕ್ತಿ ಕಾಪಾಡಲು ಮತ ಕೊಟ್ಟಿದ್ದರು. ಅದನ್ನು ಮರೆತು ಸರ್ಕಾರ ಕೆಲಸ ಮಾಡುತ್ತಿದೆ. ಮುಂದೆ ಮಳೆ ಬರುವುದಿಲ್ಲ. ಇದನ್ನು ಯಾಕೆ ಪ್ರಾಧಿಕಾರ ಕೋರ್ಟ್‌ಗೆ ಹೇಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ತೆರಿಗೆ ಹಣ 65 ಕೋಟಿ ವಕೀಲರಿಗೆ ಕೊಟ್ಟು ಪೋಲು ಮಾಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಜನ ಬೀದಿಗಿಳಿದಿದ್ದಾರೆ. 100ಕ್ಕೂ ಹೆಚ್ಚು ಜನ ರೌಡಿಗಳು, ಮಾಫಿಯಾದವರು ಗೂಂಡಾಗಳು ಸರ್ಕಾರದಲ್ಲಿದ್ದಾರೆ. ಸಿದ್ದರಾಮಯ್ಯ ಕಾವೇರಿ ಹೋರಾಟ ಮಾಡಿದ್ದವರು. ಆದರೆ ಈಗ ಅದನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Bandh: ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ? ಇಲ್ಲಿದೆ ವಿವರ
ಡಿಸಿಎಂ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಬಗ್ಗೆ ಬರೀ ಬಾಯಿಮಾತಿನ ಪರಾಕ್ರಮ ತೋರಿಸುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ಎಷ್ಟು ಹಣ ಇಟ್ಟಿದ್ದಾರೆ? ಕೇಂದ್ರದ ಅನುಮತಿ ಪಡೆಯದೇ ಜಲಾಶಯ ಕಟ್ಟಿ, ಅದೇನಾಗುತ್ತದೆ ನೋಡೋಣ? ಕೇಂದ್ರ ಹಾಗೂ ರಾಜ್ಯದ ನಡುವೆ ರಾಜಕಾರಣ ಇದೆ. ಇಲ್ಲಿ ರಾಜ್ಯ ಅಥವಾ ಕೇಂದ್ರ ಸರಿ ಎಂದು ಹೇಳುತ್ತಿಲ್ಲ. ಹೋರಾಟ, ಪ್ರತಿಭಟನೆಗಳನ್ನು ತಡೆಯುವ ಷಡ್ಯಂತ್ರ ನಡೆಯುತ್ತಿದೆ. ರಾಜಕೀಯ ಪಕ್ಷಗಳಿಂದ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ‘ಟಿವಿ9’ ಜತೆ ಅಸಮಾಧಾನ ತೋಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ